ಮೈಸೂರು ದಸರಾ: ವೈಭವದ ಜಂಬೂಸವಾರಿ ಕಣ್ತುಂಬಿಕೊಂಡ ಜನತೆ

By Web DeskFirst Published Oct 19, 2018, 7:08 PM IST
Highlights

 ಸತತ 7 ನೇ ಬಾರಿಗೆ ಅರ್ಜುನ 750 ಕೆಜಿ ಚಿನ್ನದ ಅಂಬಾರಿಯಲ್ಲಿ ಪ್ರತಿಷ್ಠಾಪಿಸಿರುವ ನಾಡದೇವತೆ ಚಾಮುಂಡೇಶ್ವರಿಯನ್ನು ಹೊತ್ತು ರಾಜ ಗಾಂಭೀರ್ಯದಲ್ಲಿ ನಡೆದಿದ್ದಾನೆ. 

ಮೈಸೂರು, [ಅ.19]:  ಅರಮನೆ ಆವರಣದಿಂದ ಬಲರಾಮ ದ್ವಾರದ ಮೂಲಕ ಚಿನ್ನದ ಅಂಬಾರಿ ಹೊತ್ತು ಕ್ಯಾಪ್ಟನ್​ ಅರ್ಜುನ ಸಾಗಿದ್ದು, ಚಿನ್ನದ ಅಂಬಾರಿ ಕಣ್ತುಂಬಿಕೊಂಡ ಸಾರ್ವಜನಿಕರ ಹರ್ಷೋದ್ಗಾರ ಮುಗಿಲು ಉಟ್ಟಿತು.

ಜಯಚಾಮರಾಜೇಂದ್ರ ವೃತ್ತ, ಕೃಷ್ಣರಾಜೇಂದ್ರ ವೃತ್ತ, ಮಾರ್ಕೆಟ್ ರಸ್ತೆ, ಬಂಬೂ ಬಜಾರ್ ಮೂಲಕ ಬನ್ನಿ ಮಂಟಪದ ವರೆಗೆ ಜಂಬೂ ಸವಾರಿ ನಡೆಯಿತು. ಸತತ 7 ನೇ ಬಾರಿಗೆ ಅರ್ಜುನ 750 ಕೆಜಿ ಚಿನ್ನದ ಅಂಬಾರಿಯಲ್ಲಿ ಪ್ರತಿಷ್ಠಾಪಿಸಿರುವ ನಾಡದೇವತೆ ಚಾಮುಂಡೇಶ್ವರಿಯನ್ನು ಹೊತ್ತು ರಾಜ ಗಾಂಭೀರ್ಯದಲ್ಲಿ ನಡೆದಿದ್ದಾನೆ. 

ಅಂಬಾರಿ ಸಾಗುತ್ತಿರುವ ದಾರಿಯ ಇಕ್ಕೆಲದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ  ಜನಸ್ತೋಮ ಸೇರಿದ್ದು, ಹೂಗಳನ್ನು ಎರಚಿ ಕೈಮುಗಿಯುತ್ತಿರುವ ತಾಯಿ ಚಾಮುಂಡೇಶ್ವರಿ ಆಶೀರ್ವಾದ ಪಡೆದುಕೊಂಡರು.

ಅಂಬಾರಿ ಹೊರುತ್ತಿರುವ ಅರ್ಜುನನಿಗೆ ಆನೆಗಳಾದ ವರಲಕ್ಷ್ಮೀ, ಕಾವೇರಿ ಸಾಥ್​​ ನೀಡಿದರು. ಚಿನ್ನದ ಅಂಬಾರಿಯಲ್ಲಿರುವ ಚಾಮುಂಡೇಶ್ವರಿ ಉತ್ಸವಮೂರ್ತಿಗೆ ಸಿಎಂ ಹೆಚ್​​. ಡಿ. ಕುಮಾರಸ್ವಾಮಿ, ಸಚಿವ ಜಿ.ಟಿ. ದೇವೇಗೌಡ, ಜಿಲ್ಲಾಧಿಕಾರಿ ಅಭಿರಾಮ್​​ ಜಿ. ಶಂಕರ್​​, ನಗರ ಪೊಲೀಸ್​ ಆಯುಕ್ತ ಸುಬ್ರಹ್ಮಣ್ಯೇಶ್ವರ ರಾವ್​​​ ಅವರು ಗೌರವ ಪುಷ್ಪಾರ್ಚನೆ ಸಲ್ಲಿಸಿದರು. 

ಅರ್ಜುನ ಅಂಬಾರಿಯನ್ನು ಹೊರುತ್ತಿರುವ ಸುಂದರ ದೃಶ್ಯವನ್ನು ಸ್ಥಳದಲ್ಲಿ ಸೇರಿದ್ದ ದಸರಾ ಪ್ರಿಯರು ಮೊಬೈಲ್​​ನಲ್ಲಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.

click me!