ಎಂಎಲ್ಸಿ ಚುನಾವಣೆ: ಕಾಂಗ್ರೆಸ್ ಪಟ್ಟಿಯಲ್ಲಿ ಬರಗೂರು, ಚಂದ್ರು ?

By Web DeskFirst Published Sep 19, 2018, 12:05 PM IST
Highlights

 ಮೂಲಗಳ ಪ್ರಕಾರ ರಾಜ್ಯದ ಪ್ರತಿಯೊಬ್ಬ ನಾಯಕರು ತಮ್ಮ ಬೆಂಬಲಿಗರಿಗೆ ಪರಿಷತ್ತಿಗೆ ಸ್ಥಾನ ಕೊಡಿಸಲು ಲಾಬಿ ನಡೆಸಲು ಸಜ್ಜಾಗಿದ್ದಾರೆ. 

ಬೆಂಗಳೂರು[ಸೆ.19]: ವಿಧಾನಪರಿಷತ್ ಚುನಾವಣೆ ಹಾಗೂ ವಿಧಾನಪರಿಷತ್ತಿಗೆ ನಾಮನಿರ್ದೇಶನದಲ್ಲಿ ಕಾಂಗ್ರೆಸ್‌ಗೆ ಪಾಲಿಗೆ ಲಭಿಸಲಿರುವ 4 ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರು ಬುಧವಾರ ದೆಹಲಿಯಲ್ಲಿ ಅಂತಿಮಗೊಳ್ಳುವ ಸಾಧ್ಯತೆಯಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಈ ಕುರಿತು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರೊಂದಿಗೆ ಚರ್ಚಿಸಲು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸೇರಿದಂತೆ ಪ್ರಮುಖ ನಾಯಕರು ದೆಹಲಿಗೆ ತೆರಳಿದ್ದಾರೆ. ಈ ಭೇಟಿ ವೇಳೆ ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆಯುವ ಚುನಾವಣೆ ಯಲ್ಲಿ ಕಾಂಗ್ರೆಸ್‌ನ ಇಬ್ಬರು ಅಭ್ಯರ್ಥಿಗಳು ಹಾಗೂ ಸರ್ಕಾರದಿಂದ ವಿಧಾನಪರಿಷತ್ತಿನ 2 ಸ್ಥಾನಗಳಿಗೆ ನಾಮ ನಿರ್ದೇಶನ ಮಾಡಲು ಹೆಸರು ಆಖೈರುಗೊಳ್ಳಲಿದೆ. ಮೂಲಗಳ ಪ್ರಕಾರ ರಾಜ್ಯದ ಪ್ರತಿಯೊಬ್ಬ ನಾಯಕರು ತಮ್ಮ ಬೆಂಬಲಿಗರಿಗೆ ಪರಿಷತ್ತಿಗೆ ಸ್ಥಾನ ಕೊಡಿಸಲು ಲಾಬಿ ನಡೆಸಲು ಸಜ್ಜಾಗಿದ್ದಾರೆ. 

ಸಂಭಾವ್ಯರು: ವಿವಿಧ ಕ್ಷೇತ್ರಗಳಿಂದ ನಾಮನಿರ್ದೇಶನಕ್ಕೆ ಸಾಹಿತಿ ವಿಮರ್ಶಕ ಬರಗೂರು ರಾಮಚಂದ್ರಪ್ಪ ಅಥವಾ ‘ಮುಖ್ಯಮಂತ್ರಿ’ ಚಂದ್ರು ಅವರಿಬ್ಬರ ಪೈಕಿ ಒಬ್ಬರಿಗೆ ಸ್ಥಾನ ದೊರೆತರೆ ಮತ್ತೊಂದು ಸ್ಥಾನ ಲಿಂಗಾಯತ ಸಮುದಾಯದ ಮಹಿಳೆಗೆ ದೊರೆಯುವ ಸಂಭವವಿದೆ ಎನ್ನಲಾಗಿದೆ.

ಇನ್ನು ಚುನಾವಣೆಗೆ ಕಾಂಗ್ರೆಸ್‌ನಿಂದ ಕಣಕ್ಕಿಳಿಯಲು ಅವಕಾಶವಿರುವ ಎರಡು ಸ್ಥಾನಗಳಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಗುರಪ್ಪ ನಾಯ್ದು ಅವರ ಪರ ಲಾಬಿ ನಡೆಸಲಿದ್ದಾರೆ ಎನ್ನಲಾಗುತ್ತಿದೆ. ಡಾ. ಜಿ.ಪರಮೇಶ್ವರ್ ಅವರು ಎಂ.ಸಿ. ವೇಣುಗೋಪಾಲ್ ಹಾಗೂ ನಿವೇದಿತ್ ಆಳ್ವ ಈ ಇಬ್ಬರ ಪೈಕಿ ಒಬ್ಬರಿಗೆ ಅವಕಾಶ ನೀಡುವಂತೆ ಕೋರಲಿದ್ದಾರೆ ಎನ್ನಲಾಗುತ್ತಿದೆ. ಇನ್ನು ಸಿದ್ದರಾಮಯ್ಯ ಅವರು ಮಾಜಿ ಮೇಯರ್ ರಾಮಚಂದ್ರಪ್ಪ, ಮಳವಳ್ಳಿ ಶಿವಣ್ಣ, ವಿ.ಆರ್. ಸುದರ್ಶನ್ ಹಾಗೂ ರವಿಶಂಕರ್ ಶೆಟ್ಟಿ ಪೈಕಿ ಒಬ್ಬರ ಹೆಸರನ್ನು ಸೂಚಿಸಲಿದ್ದಾರೆ ಎಂದು ಹೇಳಲಾಗಿದೆ. ಇವರಲ್ಲದೆ ಅಬ್ದುಲ್ ವಹಾಬ್, ನಸೀರ್ ಅಹಮದ್, ಮಲ್ಲಾಜಮ್ಮ ಸೇರಿದಂತೆ ಆಕಾಂಕ್ಷಿಗಳ ದೊಡ್ಡ ದಂಡೇ ಲಾಬಿ ನಡೆಸಿದೆ.

click me!