ಎಸ್‌ಸಿಪಿ-ಟಿಎಸ್‌ಪಿ ಅನುದಾನ ತಿರಸ್ಕರಿಸಿದ ಶಾಸಕ

By Suvarna Web DeskFirst Published Oct 30, 2017, 2:43 PM IST
Highlights

ಕಡಿಮೆ ಅನುದಾನ ಬಿಡುಗಡೆಗೆ ಶಾಸಕ ರಾಜಾ ವೆಂಕಟಪ್ಪ ನಾಯಕ ಅಸಮಾಧಾನ | ಹೆಚ್ಚು ಅನುದಾನ ಬಿಡುಗಡೆಗೆ ಆಗ್ರಹ

ಹುಣಸಗಿ: 2017-18ನೇ ಸಾಲಿನ ಕರ್ನಾಟಕ ಸರ್ಕಾರ ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಸಣ್ಣ-ಅತೀ ಸಣ್ಣ ರೈತರ ಜಮೀನುಗಳಿಗೆ ನೀರಾವರಿ ಒದಗಿಸುವ ಉದ್ದೇಶದಿಂದ ಸುರಪುರ ತಾಲೂಕಿಗೆ ಅತೀ ಕಡಿಮೆ ಅನುದಾನ ಬಿಡುಗಡೆ ಮಾಡಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸುರಪುರ ಶಾಸಕ ರಾಜಾ ವೆಂಕಟಪ್ಪ ನಾಯಕ, ಅನುದಾನ ತಿರಸ್ಕರಿಸಿರುವುದು ತಿಳಿದು ಬಂದಿದೆ.

ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಸಣ್ಣ- ಅತೀ ಸಣ್ಣ ರೈತರ ಜಮೀನುಗಳಿಗೆ ನೀರಾವರಿ ಒದಗಿಸುವ ಉದ್ದೇಶದಿಂದ ಎಸ್‌ಸಿಪಿ-ಟಿಎಸ್‌ಪಿ ಅನುದಾನವನ್ನು ಶಾಸಕರಿಗೆ ಕೆಬಿಜೆಎನ್‌ಎಲ್ ಮುಖಾಂತರ ಪ್ರತಿ ವರ್ಷ ಬಿಡುಗಡೆ ಮಾಡಲಾಗುತ್ತಿತ್ತು.

ಸುರಪುರ ಕ್ಷೇತ್ರಕ್ಕೆ ಕಳೆದ ವರ್ಷ ಎಸ್‌ಟಿ ರೈತರಿಗೆ 25 ಕೋಟಿ ರು., ಎಸ್‌ಸಿ ರೈತರಿಗೆ 15 ಕೋಟಿ ರು.ಗಳನ್ನು ನೀಡಲಾಗಿತ್ತು. ಆದರೆ ಪ್ರಸಕ್ತ ಸಾಲಿನಲ್ಲಿ ಎಸ್‌ಟಿಗೆ ಮೀಸಲಾಗಿರುವ ಸುರಪುರ ವಿಧಾನಸಭೆಗೆ ಅನುದಾನ ಹಂಚಿಕೆಯಲ್ಲಿ ಪರಿಶಿಷ್ಟ ಜಾತಿಯ ರೈತರಿಗಾಗಿ 7 ಕೋಟಿ ರು., ಪರಿಶಿಷ್ಟ ಪಂಗಡ ರೈತರಿಗಾಗಿ 2 ಕೋಟಿ ರು. ನಿಗದಿಪಡಿಸಿ ಇತ್ತೀಚೆಗೆ ಬಿಡುಗಡೆಗೊಳಿಸಲಾಗಿತ್ತು. ಆದರೆ ಅನುದಾನ ಅತೀ ಕಡಿಮೆಯಾಗಿರುವುರಿಂದ ಅಭಿವೃದ್ಧಿ ಅಸಾಧ್ಯ ಎಂದು ಶಾಸಕರು ಅತೃಪ್ತಿ ವ್ಯಕ್ತಪಡಿಸಿ ಅನುದಾನ ಒಪ್ಪಿಕೊಂಡಿರುವುದಿಲ್ಲವೆಂದು ತಿಳಿದು ಬಂದಿದೆ.

ಶಾಸಕರ ಸ್ಪಷ್ಟನೆ: ಸುರಪುರ ಶಾಸಕ ರಾಜಾ ವೆಂಕಟಪ್ಪನಾಯಕ್ ಪ್ರತಿಕ್ರಿಯಿಸಿ, ಸುರಪುರ ಎಸ್.ಟಿ. ಕ್ಷೇತ್ರವಾಗಿದ್ದು, ಕಳೆದ ವರ್ಷ 2016-17ರ ಸಾಲಿಗೆ ಎಸ್‌ಸಿಗೆ 15 ಕೋಟಿ ಹಾಗೂ ಎಸ್‌ಟಿಗೆ 25 ಕೋಟಿ ರು. ಅನುದಾನ ಹಂಚಿಕೆಯಾಗಿತ್ತು. ಅದರ ಸದ್ಬಳಕೆಯೂ ಮಾಡಲಾಗಿತ್ತು. ಆದರೆ ಈ ಬಾರಿ ಎಸ್‌ಸಿಗೆ 7 ಕೋಟಿ ರು., ಎಸ್‌ಟಿಗೆ 2 ಕೋಟಿ ರು. ಮಾತ್ರ ನೀಡಲಾಗಿದೆ. ಇಷ್ಟು ಕಡಿಮೆ ಮೊತ್ತ ಅಭಿವೃದ್ಧಿಗೆ ಪೂರಕವಾಗಿಲ್ಲ. ಹೀಗಾಗಿ ಸ್ವತಃ ಮುಖ್ಯಮಂತ್ರಿಗಳನ್ನು ಶನಿವಾರ ಭೇಟಿ ಮಾಡಿ ಮನವಿ ನೀಡಿದ್ದು, ಕಳೆದ ವರ್ಷಕ್ಕಿಂತ ಹೆಚ್ಚಿನ ಅನುದಾನ ನೀಡುವಂತೆ ಒತ್ತಾಯ ಮಾಡಿದ್ದಾಗಿ ದೂರವಾಣಿಯಲ್ಲಿ ತಿಳಿಸಿದ್ದಾರೆ.

ಈ ಯೋಜನೆಯು ನನ್ನ ಕ್ಷೇತ್ರದಲ್ಲಿ ಅತಿ ಹೆಚ್ಚು ಪ್ರಯೋಜನಕಾರಿಯಾಗಿದ್ದು, ಈ ಹಿಂದೆ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿರುವುದರಿಂದ ಸಣ್ಣ ಸಣ್ಣ ಪಿಕ್-ಅಪ್, ಕೆರೆ, ಬಾವಿ, ನದಿಗಳಿಂದ ರೈತರ ಜಮೀನುಗಳಿಗೆ ನೀರಾವರಿ ಒದಗಿಸಿರುವುದರಿಂದ ರೈತರು ಹಾಗೂ ರೈತ ಮಹಿಳೆಯರು ಕೃಷಿ ಹಾಗೂ ಹೈನುಗಾರಿಗೆ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಸರ್ಕಾರ ಹೆಚ್ಚಿನ ಅನುದಾನ ನೀಡಿದ್ದರೆ ರೈತರು ಸರ್ವತೋಮುಖ ಅಭಿವೃದ್ಧಿ ಹೊಂದಲಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 

click me!