ಕ್ಲಬ್ ಲಾಕರ್ ರಹಸ್ಯ: ಅವ್'ನಾಶ್’ಗೆ ರಾಜಕಾರಣಿ, ನಟರ ನಂಟು...!

First Published Jul 24, 2018, 11:43 AM IST
Highlights

ಲಾಕರ್‌ನಲ್ಲಿ ಪತ್ತೆಯಾದ ದಾಖಲೆಗಳನ್ನು ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು ಶೋಧಿಸಿದಾಗ ಈ ಮಾಹಿತಿ ಹೊರಬಿದ್ದಿದೆ. ಅವ್‌ನಾಶ್ ಬಳಿ ಇದ್ದ ಆಸ್ತಿ ಪತ್ರದಲ್ಲಿ ಜನಪ್ರತಿನಿಧಿಗಳ ಹೆಸರು ಸಹ ಉಲ್ಲೇಖವಾಗಿರುವ ಕಂಡು ಬಂದಿದ್ದು, ಐಟಿ ಅಧಿಕಾರಿಗಳಿಗೆ ಅಚ್ಚರಿ ಮೂಡಿಸಿದೆ. 

ಬೆಂಗಳೂರು[ಜು.24]: ಪ್ರತಿಷ್ಠಿತ ಬೌರಿಂಗ್ ಇನ್ಸ್‌ಟ್ಯೂಟ್ ಕ್ಲಬ್‌ನ ಲಾಕರ್‌ನಲ್ಲಿ ಗೌಪ್ಯವಾಗಿ ಬಚ್ಚಿಟ್ಟಿದ್ದ ಕೋಟ್ಯಂತರ ರು. ನಗ-ನಾಣ್ಯ, ಭೂ ದಾಖಲೆಗಳ ಪತ್ತೆ ಪ್ರಕರಣವು ಗಂಭೀರ ತಿರುವು ಪಡೆದಿದ್ದು, ಅವ್‌ನಾಶ್ ಅಮರ್‌ಲಾಲ್ ಕೋಕ್ರೇಜಾಗೆ ಜನಪ್ರತಿನಿಧಿಗಳು, ಸಿನಿಮಾ ಕ್ಷೇತ್ರ ಮತ್ತು ಬಿಲ್ಡರ್‌ಗಳ ನಂಟಿರುವುದು ಬೆಳಕಿಗೆ ಬಂದಿದೆ.

ಲಾಕರ್‌ನಲ್ಲಿ ಪತ್ತೆಯಾದ ದಾಖಲೆಗಳನ್ನು ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು ಶೋಧಿಸಿದಾಗ ಈ ಮಾಹಿತಿ ಹೊರಬಿದ್ದಿದೆ. ಅವ್‌ನಾಶ್ ಬಳಿ ಇದ್ದ ಆಸ್ತಿ ಪತ್ರದಲ್ಲಿ ಜನಪ್ರತಿನಿಧಿಗಳ ಹೆಸರು ಸಹ ಉಲ್ಲೇಖವಾಗಿರುವ ಕಂಡು ಬಂದಿದ್ದು, ಐಟಿ ಅಧಿಕಾರಿಗಳಿಗೆ ಅಚ್ಚರಿ ಮೂಡಿಸಿದೆ. ದಾಖಲೆಗಳಲ್ಲಿನ ಅಂಶಗಳ ಜಾಡು ಹಿಡಿದು ಹೊರಟಿರುವ ತನಿಖಾಧಿಕಾರಿಗಳಿಗೆ ಕೋಟ್ಯಂತರ ತೆರಿಗೆ ವಂಚನೆ ಮಾತ್ರವಲ್ಲದೇ, ಭೂ ಮಾಫಿಯಾದ ವ್ಯವಹಾರ ನಡೆದಿರುವುದು ಕಂಡುಬಂದಿದೆ. 

ದಾಖಲೆ ವಶಕ್ಕೆ ಪಡೆದು ಪರಿಶೀಲಿಸಿದಾಗ ನೂರಾರು ಕೋಟಿ ರು. ಮೌಲ್ಯದ ಆಸ್ತಿಪತ್ರಗಳು ಸಿಕ್ಕಿವೆ. ಆದರೆ ಪರೋಕ್ಷವಾಗಿ ಪ್ರಭಾವಿ ವ್ಯಕ್ತಿಗಳು ಬೆನ್ನಿಗೆ ನಿಂತಿರುವ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ತಂದೆ ಅಮರ್‌ಲಾಲ್ ರಾಜ್ಯದ ರಾಜಕಾರಣಿಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದರಿಂದ ಸಹಜವಾಗಿಯೇ ಅವ್‌ನಾಶ್ ಸಹ ಜನಪ್ರತಿನಿಧಗಳೊಂದಿಗೆ ಸಂಪರ್ಕ ಹೊಂದಿದ್ದರು. ಅವರ ಅವ್ಯವಹಾರಗಳಿಗೆ ಹಣಕಾಸು ವ್ಯವಸ್ಥೆ ಮಾಡಿಕೊಡುತ್ತಿದ್ದರು. ಜನಪ್ರತಿನಿಧಿಗಳು ಮಾತ್ರವಲ್ಲದೇ, ಸಿನಿಮಾ ನಿರ್ಮಾಪರು, ನಿರ್ದೇಶಕರೊಂದಿಗೂ ಸಂಬಂಧ ಹೊಂದಿದ್ದರು ಎಂದು ತಿಳಿದುಬಂದಿದೆ.

ಇ.ಡಿ.ಯಿಂದಲೂ ವಿಚಾರಣೆ

ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ಜತೆ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಸಹ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಗೊಂಡಿದ್ದಾರೆ. ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ವಿಚಾರಣೆಯನ್ನು ಆರಂಭಿಸಿದ್ದಾರೆ. ಐಟಿ ಅಧಿಕಾರಿಗಳ ಜತೆ ಜಂಟಿಯಾಗಿ ತನಿಖೆ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. 

₹ 800 ಕೋಟಿ ಆಸ್ತಿಪತ್ರ ಬೌರಿಂಗ್ ಕ್ಲಬ್‌ನ ಸ್ಪೋರ್ಟ್ಸ್ ಲಾಕರ್‌ನಲ್ಲಿ ಐಟಿ ಅಧಿಕಾರಿಗಳಿಗೆ ಸಿಕ್ಕಿರುವ ಆಸ್ತಿ ದಾಖಲೆಗಳ ಮೌಲ್ಯ 800 ಕೋಟಿ ರು.ಗೂ ಹೆಚ್ಚು ಎಂದು ತಿಳಿದು ಬಂದಿದೆ. ಆರಂಭದಲ್ಲಿ ಈ ಆಸ್ತಿ ದಾಖಲೆಗಳ ಮೌಲ್ಯ 250 ಕೋಟಿ ರು. ಎಂದು ಅಂದಾಜಿಸಲಾಗಿತ್ತು. ನಂತರ ಪರಿಶೀಲಿಸಿದಾಗ ಅದು 500 ಕೋಟಿ ರು. ಎನ್ನಲಾಯಿತು. ಇದೀಗ ಮತ್ತಷ್ಟು ಆಳವಾಗಿ ಪರಿಶೀಲನೆ ನಡೆಸಿದ ನಂತರ ಆಸ್ತಿ ದಾಖಲೆಗಳ ಮೌಲ್ಯ 800 ಕೋಟಿ ರು.ಗೂ ಹೆಚ್ಚು ಎಂದು ಐಟಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

click me!