ಸಚಿವ ಡಿ.ಕೆ ಶಿವಕುಮಾರ್‌ಗೆ ಉರುಳಾದ ಆ ವಿಚಾರವೇನು..?

First Published Jun 22, 2018, 7:26 AM IST
Highlights

ಇರುವೆಯೂ ನುಸುಳದಂತಹ ಭದ್ರಕೋಟೆಯಾಗಿದ್ದ ರಾಜ್ಯದ ಪ್ರಭಾವಿ ಕಾಂಗ್ರೆಸ್ ನಾಯಕ ಹಾಗೂ ಸಚಿವ ಡಿ. ಕೆ.ಶಿವಕುಮಾರ್ ಅವರ ಸಾಮ್ರಾಜ್ಯಕ್ಕೆ ಆದಾಯ ತೆರಿಗೆ ಇಲಾಖೆಯು ನುಗ್ಗುವುದಕ್ಕೆ ಶಿವಕುಮಾರ್ ಅವರು ಹರಿದ ಕಾಗದದ ಚೂರೇ ಪ್ರಮುಖ ಅಸ್ತ್ರವಾಗಿ ಪರಿಣಮಿಸಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಪ್ರಭುಸ್ವಾಮಿ ನಟೇಕರ್ 

ಬೆಂಗಳೂರು : ಇರುವೆಯೂ ನುಸುಳದಂತಹ ಭದ್ರಕೋಟೆಯಾಗಿದ್ದ ರಾಜ್ಯದ ಪ್ರಭಾವಿ ಕಾಂಗ್ರೆಸ್ ನಾಯಕ ಹಾಗೂ ಸಚಿವ ಡಿ. ಕೆ.ಶಿವಕುಮಾರ್ ಅವರ ಸಾಮ್ರಾಜ್ಯಕ್ಕೆ ಆದಾಯ ತೆರಿಗೆ ಇಲಾಖೆಯು ನುಗ್ಗುವುದಕ್ಕೆ ಶಿವಕುಮಾರ್ ಅವರು ಹರಿದ ಕಾಗದದ ಚೂರೇ ಪ್ರಮುಖ ಅಸ್ತ್ರವಾಗಿ ಪರಿಣಮಿಸಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಹರಿದ ಕಾಗದ ಲಭ್ಯವಾಗದಿದ್ದರೆ ಸಚಿವ ಡಿ.ಕೆ.ಶಿವಕುಮಾರ್ ಜಾಲ ಭೇದಿಸಲು ಅಸಾಧ್ಯವಾಗುತ್ತಿತ್ತು. ವ್ಯವಹಾರದ ಮಾಹಿತಿ ಕಾಗದದಲ್ಲಿ ಬರೆದಿದ್ದನ್ನು ಖಚಿತಪಡಿಸಿಕೊಂಡು  ಅದರ ಜಾಡು ಹುಡುಕಿದಾಗ ಶಿವಕುಮಾರ್ ಅವರ ಅವ್ಯವಹಾರಗಳನ್ನು ಆಮೂಲಾಗ್ರವಾಗಿ ಶೋಧಿಸಲು ಸಾಧ್ಯವಾಯಿತು ಎಂದು ಐಟಿ ಇಲಾಖೆಯ ಮೂಲಗಳು ಹೇಳಿವೆ. 

2017ರ ಆಗಸ್ಟ್ 2ರಂದು ಬೆಂಗಳೂರು ಬಳಿಯ ಈಗಲ್ಟನ್ ರೆಸಾರ್ಟ್‌ನಲ್ಲಿ ಡಿ.ಕೆ.ಶಿವಕುಮಾರ್ ಅವರು ತಂಗಿದ್ದಾಗ (ಗುಜರಾತ್‌ನ ಕಾಂಗ್ರೆಸ್ ಶಾಸಕರನ್ನು ಕುದುರೆ ವ್ಯಾಪಾರದಿಂದ ರಕ್ಷಿಸಲು) ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಆಗ ಶಿವಕುಮಾರ್ ಅವರು ಒಂದು ಕಾಗದವನ್ನು ಅನುಮಾನಾಸ್ಪದವಾಗಿ ಹರಿದುಹಾಕಿದ್ದರು. ಅದರ ಚೂರುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ನಂತರ ಜೋಡಿಸಿ ನೋಡಿದಾಗ ಅಕ್ರಮ ವ್ಯವಹಾರಗಳ ಬಗ್ಗೆ ಕೋಡ್ ವರ್ಡ್‌ಗಳು ಪತ್ತೆಯಾಗಿದ್ದವು. 

ಇದು ಈಗ ತೆರಿಗೆ ಇಲಾಖೆಗೆ ಪ್ರಮುಖ ಅಸ್ತ್ರವಾಗಿ ದೊರೆತಿದೆ. ಕೋರ್ಟ್‌ನಲ್ಲೂ ಇದೇ ಪ್ರಮುಖ ಸಾಕ್ಷ್ಯ: ತನಿಖೆಯ ಪ್ರತಿಹಂತದಲ್ಲಿಯೂ ಈ ಹರಿದ ಕಾಗದವು ಅತ್ಯಂತ ಪ್ರಮುಖವಾಗಿ ಪರಿಣಮಿಸುತ್ತಿದೆ. ದಾಖಲೆ ಇಲ್ಲದ ಹಣ ವರ್ಗಾವಣೆ ನಡೆದ ಪರಿ, ಅಕ್ರಮದಲ್ಲಿ  ಭಾಗಿಯಾದವರ ಮಾಹಿತಿ ಕೂಡ ಹರಿದ ಕಾಗದದಿಂದಲೇ ಲಭ್ಯವಾಗಿದೆ. ಹರಿದ ಕಾಗದ ಜೋಡಿಸಿದಾಗ ಸಿಕ್ಕ ಮಾಹಿತಿ ಮೇರೆಗೆ ತನಿಖೆ ಕೈಗೊಂಡು ಹಲವರನ್ನು ವಿಚಾರಣೆ ನಡೆಸಿದಾಗ ಕೋಟ್ಯಂತರ ರು. ಅವ್ಯವಹಾರದ ಜಾಡು ಪತ್ತೆಯಾಗಿದೆ. ಅದೇ ಜಾಡನ್ನು ಹಿಡಿದು ಹೊರಟ ಐಟಿ ಅಧಿಕಾರಿಗಳಿಗೆ ಇಡೀ ಅಕ್ರಮ ಬಯಲುಗೊಳಿಸಲು ಸಾಧ್ಯವಾಗಿದೆ. ನ್ಯಾಯಾಲಯ ದಲ್ಲಿಯೂ ಇದನ್ನೇ ಪ್ರಮುಖ ಸಾಕ್ಷ್ಯವನ್ನಾಗಿ ಪರಿಗಣಿಸ ಲಾಗುತ್ತಿದೆ ಎಂದು ತಿಳಿದು ಬಂದಿದೆ.

ವಿಶೇಷ ಆರ್ಥಿಕ ಅಪರಾಧ ನ್ಯಾಯಾಲಯಕ್ಕೆ ದಾಳಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ತೆರಿಗೆ ಇಲಾಖೆಯ ಚೆನ್ನೈನ ಜಂಟಿ ಆಯುಕ್ತ ತಮಿಳ್ ಸೆಲ್ವಂ ಮತ್ತು ಬೆಂಗಳೂರಿನ ಉಪನಿರ್ದೇಶಕ ಪ್ರದೀಪ್ ಅವರು ನೀಡಿರುವ ಲಿಖಿತ ಹೇಳಿಕೆಯಲ್ಲಿಯೂ ಸಹ ಹರಿದ ಕಾಗದದ ವಿಷಯವನ್ನೇ ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ. 2017 ರ ಆ.2 ರಂದು ಬೆಳಗ್ಗೆ 7 ಗಂಟೆಯಿಂದ ಬೆಳಗ್ಗೆ 10.45 ರ ವರೆಗೆ ಈಗಲ್ ಟನ್ ರೆಸಾರ್ಟ್‌ನಲ್ಲಿ ನಡೆಸಿದ ಕಾರ್ಯಾಚರಣೆ ಕುರಿತು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿರುವ ಹೇಳಿಕೆಯಲ್ಲಿ ಉಲ್ಲೇಖ ಮಾಡಲಾಗಿದೆ. ಅಧಿಕಾರಿಗಳು ನೀಡಿರುವ ಹೇಳಿಕೆಯ ವಿವರ ಕನ್ನಡಪ್ರಭಕ್ಕೆ ಲಭ್ಯವಾಗಿದೆ.

ಐಟಿ ಅಧಿಕಾರಿಗಳು ಹೇಳಿದ್ದೇನು: ರೆಸಾರ್ಟ್‌ನ ರಿಸಪ್ಷನಿಸ್ಟ್ ಬಳಿ ಹೋಗಿ ಶಿವಕುಮಾರ್ ತಂಗಿರುವ ಕೊಠಡಿಯ ಮಾಹಿತಿ ಪಡೆದುಕೊಳ್ಳಲಾಯಿತು. ನಂತರ ಅವರು ತಂಗಿದ್ದ 216 ನೇ ಕೊಠಡಿಗೆ ತೆರಳಿದಾಗ ಶಿವಕುಮಾರ್ ಅವರೇ ಬಾಗಿಲು ತೆಗೆದರು. ನಂತರ ಕೊಠಡಿಯನ್ನು ಪರಿಶೀಲನೆ ನಡೆಸುತ್ತಿದ್ದಾಗ ಕಾಗದವನ್ನು ಹರಿದು ಹಾಕಿದರು. ತಕ್ಷಣ ಇದನ್ನು ಗಮನಿಸಿದ ಐಟಿ ಅಧಿಕಾರಿಗಳು ಅದರ ಬಗ್ಗೆ ಸ್ಥಳದಲ್ಲಿಯೇ ಪ್ರಶ್ನಿಸಿದರು. ಈ ವೇಳೆ ಅವರು ಅಸ್ಪಷ್ಟ ಉತ್ತರ ನೀಡಿದರು. ಪದೇ ಪದೇ ಹರಿದ ಕಾಗದ ಬಗ್ಗೆ ಪ್ರಶ್ನಿಸಿದರೂ ನಿಖರವಾದ ಮಾಹಿತಿ ನೀಡಲಿಲ್ಲ. ಹೀಗಾಗಿ ಅನುಮಾನಗೊಂಡು ಆ ಬಗ್ಗೆ ತೀವ್ರ ತನಿಖೆ ಕೈಗೊಳ್ಳಲಾಯಿತು ಎಂದು ಐಟಿ ಅಧಿಕಾರಿಗಳು ನ್ಯಾಯಾಲಯಕ್ಕೆ ಹೇಳಿದ್ದಾರೆ.

ದಾಳಿ ಕಾರ್ಯಾಚರಣೆ ಮುಕ್ತಾಯಗೊಳಿಸಿದ ಬಳಿಕ ಐಟಿ ಅಧಿಕಾರಿಗಳು 2018 ರ ಮಾ.7 ಮತ್ತು 8ರಂದು ಸತತವಾಗಿ ಎರಡು ದಿನ ಕಾಗದ ಹರಿದು ಹಾಕಿರುವುದಕ್ಕೆ ಕಾರಣವೇನು ಎಂಬುದಾಗಿ ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್, ಜಿಲ್ಲಾ ಪಂಚಾಯತ್ ಅಧ್ಯಕ್ಷರ ಚುನಾವಣೆಗೆ ಮುನ್ನ ಸದಸ್ಯರನ್ನು ಚೆನ್ನೈ ಮತ್ತು ದೆಹಲಿಗೆ ಪ್ರವಾಸಕ್ಕೆ ಕರೆದೊಯ್ಯುವ ಬಗ್ಗೆ ಅದರಲ್ಲಿ ಬರೆಯಲಾಗಿತ್ತು ಎಂದು ಹೇಳಿದ್ದಾರೆ. ಆದರೆ, ಯಾವ ಜಿಲ್ಲಾ ಪಂಚಾಯತ್ ಅಧ್ಯಕ್ಷರ ಚುನಾವಣೆ ಎಂಬುದರ ಬಗ್ಗೆ ಮಾಹಿತಿ ನೀಡಲಿಲ್ಲ. ಪ್ರವಾಸಕ್ಕೆ ನಿಗದಿಪಡಿಸಿದ್ದ ವಾಹನ ಯಾವುದು? ನೀಡಿರುವ ಮೊತ್ತ ಎಷ್ಟು ಎಂಬಿತ್ಯಾದಿ ಪ್ರಶ್ನೆಗಳಿಗೆ ಸೂಕ್ತವಾದ ಉತ್ತರ ನೀಡಿಲ್ಲ ಎಂದು ತಿಳಿದು ಬಂದಿದೆ.

ಚೀಟಿಯಲ್ಲಿದ್ದ ಕೈಬರಹ ಯಾರದು?: ಐಟಿ ಅಧಿಕಾರಿಗಳು ವಶಪಡಿಸಿಕೊಂಡ ಹರಿದ ಕಾಗದದಲ್ಲಿನ ಬರಹವು ಸಚಿವ ಡಿ.ಕೆ. ಶಿವಕುಮಾರ್ ಅವರದ್ದಲ್ಲ ಎಂಬುದು ತನಿಖೆಗೆ ವೇಳೆ ಖಚಿತವಾಗಿದೆ. ಅದು ಅವರ ಆಪ್ತರ ಕೈಬರಹ ಎಂಬುದು ತನಿಖೆಯಲ್ಲಿ ದೃಢಪಟ್ಟಿದೆ. ಶಿವಕುಮಾರ್ ಅವರ ಆಪ್ತರಾದ ವಿಜಯ್ ಮುಳಗುಂದ್, ಡಾ. ರಂಗನಾಥ್, ವಿಜಯ್ ಷಾ, ಪ್ರಮೋದ, ಸುರೇಶ್ ಶರ್ಮಾ, ರಾಜೇಂದ್ರ, ಸಚಿನ್ ನಾರಾಯಣ ಅವರ ಪೈಕಿ ಒಬ್ಬರದ್ದು ಎನ್ನಲಾಗಿದೆ. ಆದರೆ, ಯಾವುದೇ ದಾಖಲೆ ಇಲ್ಲದೆ ಹಣದ ವ್ಯವಹಾರವು  ಡಿ.ಕೆ.ಶಿವಕುಮಾರ್ ಪರವಾಗಿ ನಡೆದಿದೆ ಎಂಬುದನ್ನು ಆರೋಪಿಗಳಾದ ಅಂಜನೇಯ ಹನುಮಂತಯ್ಯ ಮತ್ತು ರಾಜೇಂದ್ರ ಐಟಿ ಅಧಿಕಾರಿಗಳಿಗೆ ನೀಡಿರುವ ಹೇಳಿಕೆಯಲ್ಲಿ ಒಪ್ಪಿಕೊಂಡಿದ್ದಾರೆ.

ತೆರಿಗೆ ತಪ್ಪಿಸಲು ಇಷ್ಟೆಲ್ಲಾ ಕಸರತ್ತು: ಆದಾಯ ತೆರಿಗೆ ಇಲಾಖೆಗೆ ತೆರಿಗೆ ವಂಚನೆ ಮಾಡಲು ಸಚಿವ ಡಿ.ಕೆ.ಶಿವಕುಮಾರ್ ತಮ್ಮ ಜಾಲವನ್ನು ದೆಹಲಿ ಮತ್ತು ಬೆಂಗಳೂರಲ್ಲಿ ಇಟ್ಟುಕೊಂಡಿದ್ದರು ಎಂದು ವಿಶೇಷ ಆರ್ಥಿಕ ಅಪರಾಧ ನ್ಯಾಯಾಲಯಕ್ಕೆ ಐಟಿ ಅಧಿಕಾರಿಗಳು ಸಲ್ಲಿಕೆ ಮಾಡಿರುವ ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.

ದೆಹಲಿಯಲ್ಲಿನ ಸಫ್ದರ್‌ಜಂಗ್ ಎನ್‌ಕ್ಲೇವ್ ಫ್ಲಾಟ್‌ನಲ್ಲಿ ಪತ್ತೆಯಾದ 8.5 ಕೋಟಿ ರು. ಶಿವಕುಮಾರ್ ಅವರಿಗೆ ಸೇರಿದ್ದು, ಆ ಹಣಕ್ಕೆ ತೆರಿಗೆ ವಂಚನೆ ಮಾಡಲು ಬೇರೆ ವ್ಯಕ್ತಿಗಳ ಬಳಿ ಇಡುವ ಪ್ರಯತ್ನ ನಡೆಸಲಾಗಿತ್ತು. ಶಿವಕುಮಾರ್ ತಮ್ಮ ಜಾಲದ ಮೂಲಕ ತೆರಿಗೆ ವಂಚನೆ ಮಾಡಿರುವುದು ತನಿಖೆ ವೇಳೆ ಗೊತ್ತಾಗಿದೆ. ಬೆಂಗಳೂರು ಸೇರಿದಂತೆ ಇತರೆ ಪ್ರದೇಶಗಳಿಗೆ ಹಣ ವರ್ಗಾವಣೆ ಮಾಡಲಾಗುತ್ತಿತ್ತು. ಆಪ್ತರ ಮೂಲಕ ಬೇರೆ ಬೇರೆ ಕಡೆ ಬಂಡವಾಳ ಹೂಡಿಕೆ ಮಾಡ ಲಾಗುತ್ತಿತ್ತು ಎಂಬುದು ತನಿಖೆ ವೇಳೆ ಗೊತ್ತಾಗಿದೆ ಎಂದು ಐಟಿ ಮೂಲಗಳು ಹೇಳಿವೆ.

click me!