
ನವದೆಹಲಿ(ಸೆ. 17): ಪಾಕಿಸ್ತಾನ ಸರಕಾರದ ದೌರ್ಜನ್ಯದಿಂದ ಮುಕ್ತವಾಗಲು ಹೋರಾಟ ನಡೆಸುತ್ತಿರುವ ಬಲೂಚಿಸ್ತಾನದ ಜನರ ಪರವಾಗಿ ನರೇಂದ್ರ ಮೋದಿ ಧ್ವನಿ ಎತ್ತಿರುವುದು ಪಾಕಿಸ್ತಾನಕ್ಕೆ ಭಯ ತಂದಿದೆ ಎಂದು ವಿಶ್ವ ಸಂಸ್ಥೆ ಮಾನವ ಹಕ್ಕು ಸಂಸ್ಥೆಯ ಪ್ರತಿನಿಧಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಬಲೂಚಿಸ್ತಾನದ ಬಗ್ಗೆ ಮೋದಿ ಮಾತನಾಡಿದ ಬಳಿಕ ಪಾಕ್ ಆಡಳಿತ ಹಾಗೂ ಸೇನೆಯಲ್ಲಿ ನಡುಕ ಹುಟ್ಟಿದೆ. ಹೀಗಾಗಿ, ಬಲೂಚಿ ಪ್ರದೇಶದಲ್ಲಿ ಮಿಲಿಟರಿ ಕಾರ್ಯಾಚರಣೆ ತೀವ್ರಗೊಂಡಿದೆ ಎಂದವರು ದೂರಿದ್ದಾರೆ. ವಿಶ್ವ ಸಂಸ್ಥೆಯ ಮಾನವ ಹಕ್ಕು ಆಯೋಗದಲ್ಲಿ ಬಲೂಚಿಸ್ತಾನೀ ಸಮುದಾಯದ ಪ್ರತಿನಿಧಿ ಆಗಿರುವ ಮೆಹ್ರಾನ್ ಮರ್ರಿ ಅವರು ಎಎನ್'ಐ ಸುದ್ದಿ ಸಂಸ್ಥೆಗೆ ಈ ವಿಚಾರ ತಿಳಿಸಿದ್ದಾರೆ.
ಭಾರತ ನೀಡಿರುವ ನೈತಿಕ ಬೆಂಬಲಕ್ಕೆ ತಮ್ಮ ಸಮುದಾಯ ಋಣಿಯಾಗಿದೆ. ನಮ್ಮ ಹೋರಾಟಕ್ಕೆ ಯಶಸ್ಸು ಸಿಗುತ್ತದೆಂಬ ನಂಬಿಕೆ ಬಲಗೊಳ್ಳುತ್ತಿದೆ ಎಂದು ಮೆಹ್ರಾನ್ ಅಭಿಪ್ರಾಯಪಟ್ಟಿದ್ದಾರೆ.
ಆಗಸ್ಟ್ 15ರ ಸ್ವಾತಂತ್ರ್ಯೋತ್ಸವ ಭಾಷಣದ ವೇಳೆ ಮೋದಿಯವರು ಬಲೂಚಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪಾಕ್ ಸೇನೆಯಿಂದ ಮಾನವ ಹಕ್ಕು ಉಲ್ಲಂಘನೆಯಾಗುತ್ತಿದೆ. ಇದನ್ನು ತಡೆಯಲು ಅಂತಾರಾಷ್ಟ್ರೀಯ ಸಮುದಾಯ ಮಧ್ಯಪ್ರವೇಶಿಸಬೇಕು ಎಂದು ಕೋರಿದ್ದರು. ಅಲ್ಲದೇ, ಕೆಲ ದಿನಗಳ ಹಿಂದಷ್ಟೇ ವಿಶ್ವ ಸಂಸ್ಥೆಯಲ್ಲೂ ಮೋದಿ ಈ ವಿಚಾರ ಪ್ರಸ್ತಾಪ ಮಾಡಿದ್ದರು. ಇದೀಗ ಬಲೂಚಿಸ್ತಾನದ ಪ್ರತ್ಯೇಕತಾವಾದಿ ಹೋರಾಟಗಾರರಿಗೆ ಭಾರತದಲ್ಲಿ ರಾಜ್ಯಾಶ್ರಯ ನೀಡುವುದಾಗಿಯೂ ನಿನ್ನೆ ಪ್ರಧಾನಿ ಮೋದಿ ಘೋಷಣೆ ಮಾಡಿದ್ದರು. ಬಲೂಚಿಸ್ತಾನದ ನೇತಾರರು ಮೋದಿಯವರ ಅಭಯಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಅತ್ತ, ಪಾಕಿಸ್ತಾನದಲ್ಲಿ ಈ ಬೆಳವಣಿಗೆ ಇರಿಸುಮುರಿಸು ಮೂಡಿಸಿದೆ. ತನ್ನ ಆಂತರಿಕ ವಿಚಾರದಲ್ಲಿ ಭಾರತ ಮೂಗು ತೂರಿಸುತ್ತಿರುವುದಕ್ಕೆ ಇದು ಸ್ಪಷ್ಟ ಸಾಕ್ಷ್ಯವೆನಿಸಿದೆ ಎಂದು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಹೇಳಿಕೊಳ್ಳಲು ಪಾಕಿಸ್ತಾನ ಪ್ರಯತ್ನಿಸುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.