ಕೇವಲ ₹.55 ಲಕ್ಷದಲ್ಲಿ 193 ದೇಶ ಸುತ್ತಿದ ಸಾಹಸಿ..!

Published : Jan 29, 2017, 05:34 AM ISTUpdated : Apr 11, 2018, 12:48 PM IST
ಕೇವಲ ₹.55 ಲಕ್ಷದಲ್ಲಿ 193 ದೇಶ ಸುತ್ತಿದ ಸಾಹಸಿ..!

ಸಾರಾಂಶ

‘‘ಭಾರತ ನನಗೆ ಅಚ್ಚುಮೆಚ್ಚು. ಅದೊಂದು ವೈವಿಧ್ಯತೆಯ ರಾಷ್ಟ್ರ. ನಾನು ಎಷ್ಟೋ ದೇಶಗಳಲ್ಲಿ ಸುತ್ತಿದ್ದೇನೆ. ಆದರೆ, ಭಾರತದಲ್ಲಿ ಜೀವಿತಾವಧಿಯವರೆಗೂ ಸುತ್ತಲು ಸಾಕಷ್ಟಿದೆ. ಆಗಮನ ವೀಸಾದ ಅವಕಾಶ ಕಲ್ಪಿಸಿದ ಭಾರತ ಸರ್ಕಾರಕ್ಕೆ ನಾನು ಧನ್ಯವಾದ ಹೇಳಬಯಸುತ್ತೇನೆ,’’

ನವದೆಹಲಿ(ಜ.29): ಈತ ಸಿರಿಯಾದ ಕಣ್ಣೀರನ್ನೂ ಕಂಡಿದ್ದಾನೆ, ಇರಾಕ್‌'ನ ಹತಾಶೆಯನ್ನೂ ನೋಡಿದ್ದಾನೆ, ದಕ್ಷಿಣ ಆಫ್ರಿಕಾದ ದಟ್ಟಾರಣ್ಯದಲ್ಲೂ ಟ್ರಕ್ ಮಾಡಿದ್ದಾನೆ, ಭಾರತೀಯ ಸಂಸ್ಕೃತಿಯಲ್ಲೂ ಮಿಂದೆದ್ದಿದ್ದಾನೆ!

ಯಾರೀತ ಎಂದು ಯೋಚಿಸುತ್ತಿದ್ದೀರಾ? ‘ದೇಶ ಸುತ್ತಬೇಕು, ಕೋಶ ಓದಬೇಕು’ ಎಂಬ ಮಾತಿನಂತೆ, ಕೇವಲ 28ನೆಯ ವಯಸ್ಸಿಗೇ ಜಗತ್ತಿನ 193 ದೇಶಗಳನ್ನು ಸುತ್ತಿದ ಸಾಹಸಿ. ಇವರ ಹೆಸರು ಹೆನ್ರಿಕ್ ಜೆಪ್ಪೆಸೆನ್. ತಮ್ಮ 17ನೇ ವಯಸ್ಸಿನಲ್ಲಿ ಈಜಿಪ್ಟ್‌ನಿಂದ ಆರಂಭವಾದ ಇವರ ಪಯಣ 193 ರಾಷ್ಟ್ರಗಳ ಸುತ್ತಿದ ಅನುಭವದೊಂದಿಗೆ 28ನೇ ವಯಸ್ಸಿಗೆ ಬಂದು ತಲುಪಿದೆ. ಇನ್ನೂ ವಿಶೇಷವೆಂದರೆ, ಜೆಪ್ಪರ್‌'ಸೆನ್ ಇಷ್ಟೆಲ್ಲ ತಿರುಗಾಟ ನಡೆಸಿದ್ದು ಬರೀ ₹55 ಲಕ್ಷ ವೆಚ್ಚದಲ್ಲಿ.

17ರಲ್ಲಿ ಊರು ಬಿಟ್ಟ:

ಟ್ರಾವೆಲ್ ಶೋ ನೋಡುತ್ತಿದ್ದ ಜೆಪ್ಪರ್‌'ಸೆನ್ 13ನೇ ವಯಸ್ಸಿನಲ್ಲೇ ದೇಶ ಸುತ್ತುವ ಕನಸು ಕಾಣತೊಡಗಿದರಂತೆ. ಆದರೆ, ಈ ಆಸೆ ಕೈಗೂಡಿದ್ದು 17 ವರ್ಷವಾದಾಗ. ಈಜಿಪ್ಟ್ ಅನ್ನು ಪಯಣದ ಮೊದಲ ಗುರಿಯಾಗಿಟ್ಟುಕೊಂಡ ಇವರು, ನಂತರ ಹಿಂದಿರುಗಿ ನೋಡಿದ್ದೇ ಇಲ್ಲ. 2010ರಲ್ಲಿ ಎಷ್ಟು ಸಾಧ್ಯವೋ ಅಷ್ಟು ಅಗ್ಗವಾಗಿ ಪೂರ್ಣಪ್ರಮಾಣದಲ್ಲಿ ದೇಶ ಸುತ್ತಲು ಹೊರಟರು. ತಮ್ಮ ಪಯಣವನ್ನು ಬ್ಲಾಗ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ದಾಖಲಿಸುತ್ತಾ ಸಾಗಿದರು.

3 ಸಾವಿರ ದಿನಗಳು:

ಜೆಪ್ಪೆರ್‌'ಸೆನ್ ಈವರೆಗೆ ₹55 ಲಕ್ಷದಲ್ಲಿ ಸುಮಾರು 3000 ದಿನಗಳ ಪ್ರಯಾಣ ಕೈಗೊಂಡಿದ್ದಾರೆ. 200 ವಿವಿಧ ಏರ್‌'ಲೈನ್ಸ್‌ಗಳಲ್ಲಿ 900 ಬಾರಿ ಪ್ರಯಾಣಿಸಿದ್ದಾರೆ. ಸಾವಿರಕ್ಕೂ ಹೆಚ್ಚು ಹೋಟೆಲ್‌'ಗಳಲ್ಲಿ ತಂಗಿದ್ದಾರೆ. 2016ರಲ್ಲಿ ಎರಿಟ್ರಿಯಾ ಪ್ರವಾಸದ ಮೂಲಕ ತಮ್ಮ ಗುರಿ ಮುಟ್ಟುವವರೆಗೆ 9 ಪಾಸ್‌'ಪೋರ್ಟ್‌ಗಳನ್ನು ಬಳಸಿದ್ದಾರೆ. ಇವರ ಪ್ರಯಾಣದ ಅಭಿರುಚಿಯನ್ನು ಮನಗಂಡು, 100ರಷ್ಟು ವೈಮಾನಿಕ ಸಂಸ್ಥೆಗಳು, ಸಾವಿರದಷ್ಟು ಹೋಟೆಲ್‌ಗಳು ಇವರ ಖರ್ಚನ್ನು ನೋಡಿಕೊಂಡಿವೆ. ‘‘ಇರಾನ್ ಅನ್ನು ಎಲ್ಲರೂ ನಕಾರಾತ್ಮಕವಾಗಿ ನೋಡುತ್ತಾರೆ. ಆದರೆ, ಅಲ್ಲಿನ ಜನ ಜಗತ್ತಿನಲ್ಲೇ ಅತ್ಯಂತ ಸ್ನೇಹಪರರು. ಸಿರಿಯಾ, ಇರಾಕ್‌'ನ ಕೆಲವು ಭಾಗಗಳಲ್ಲಿ ಐಎಸ್ ಉಗ್ರರ ಉಪಟಳವಿದೆಯಾದರೂ, ಇತರೆ ಭಾಗಗಳಿಗೆ ಭೇಟಿ ನೀಡಲು ತೊಂದರೆಯಿಲ್ಲ’’ ಎನ್ನುತ್ತಾರೆ ಜೆಪ್ಪೆರ್‌ಸೆನ್.

ಭಾರತವೆಂದರೆ ಇಷ್ಟ:

ಭಾರತದಲ್ಲಿ ಬರೋಬ್ಬರಿ ಒಂದು ತಿಂಗಳು ತಂಗಿದ್ದು, ಬೆಂಗಳೂರು, ಕೋಲ್ಕತಾ, ಕಾಶ್ಮೀರ, ಮುಂಬೈ, ದೆಹಲಿ, ಗೋವಾ, ಸಿಕ್ಕಿಂ, ಜೈಪುರ, ಉದಯಪುರ, ಆಗ್ರಾ, ಅಂಡಮಾನ್ ದ್ವೀಪ, ಪಶ್ಚಿಮ ಬಂಗಾಳಗಳಲ್ಲಿ ಪಯಣಿಸಿದ್ದಾಗಿ ಜೆಪ್ಪೆರ್‌ಸೆನ್ ಹೇಳಿಕೊಂಡಿದ್ದಾರೆ. ‘‘ಭಾರತ ನನಗೆ ಅಚ್ಚುಮೆಚ್ಚು. ಅದೊಂದು ವೈವಿಧ್ಯತೆಯ ರಾಷ್ಟ್ರ. ನಾನು ಎಷ್ಟೋ ದೇಶಗಳಲ್ಲಿ ಸುತ್ತಿದ್ದೇನೆ. ಆದರೆ, ಭಾರತದಲ್ಲಿ ಜೀವಿತಾವಧಿಯವರೆಗೂ ಸುತ್ತಲು ಸಾಕಷ್ಟಿದೆ. ಆಗಮನ ವೀಸಾದ ಅವಕಾಶ ಕಲ್ಪಿಸಿದ ಭಾರತ ಸರ್ಕಾರಕ್ಕೆ ನಾನು ಧನ್ಯವಾದ ಹೇಳಬಯಸುತ್ತೇನೆ,’’ ಎಂದೂ ಹೇಳಿದ್ದಾರೆ ಜೆಪ್ಪೆರ್‌'ಸೆನ್.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಕೆ ಶಿವಕುಮಾರ್‌ಗೆ ಕೇಂದ್ರ ನಾಯಕತ್ವ ಸ್ಥಾನ : ಕಾಂಗ್ರೆಸ್‌ನಲ್ಲಿ ಕೂಗು
ನಾಯಕತ್ವ ಬದಲಾವಣೆ ಹೇಳಿಕೆ ಒಂದು ತಿಂಗಳ ಮೌನವ್ರತ : ಪಿ.ರವಿಕುಮಾರ್