ಭುಗಿಲೆದ್ದ ಅಸಮಾಧಾನ | ಇತರರಿಗಿದೆ, ನಮಗ್ಯಾಕಿಲ್ಲ : ಎಂ.ಬಿ. ಪಾಟೀಲ್ ಗರಂ

By Web DeskFirst Published Dec 11, 2018, 10:04 AM IST
Highlights

ಮಾಜಿ ಸಚಿವ ಕಾಂಗ್ರೆಸ್ ಮುಖಂಡ ಎಂ.ಬಿ. ಪಾಟೀಲ್ ಇದೀಗ ಮತ್ತೊಮ್ಮೆ ಗರಂ ಆಗಿದ್ದಾರೆ. ಕೇಂದ್ರ ಸರ್ಕಾರ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರಕ್ಕೆ ಮಾನ್ಯತೆ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಅಸಮಾಧಾನ ಹೊರಹಾಕಿದ್ದಾರೆ. 

ಬೆಂಗಳೂರು :  ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆ ಒಪ್ಪಲು ಸಾಧ್ಯವಿಲ್ಲ ಎಂದಿರುವ ಕೇಂದ್ರ ಸರ್ಕಾರದ ನಿಲುವು ಅತಾರ್ಕಿಕವಾದದ್ದು ಎಂದಿರುವ ಜಾಗತಿಕ ಲಿಂಗಾಯತ ಮಹಾಸಭಾದ ಮುಖಂಡರೂ ಆದ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಎಂ.ಬಿ.ಪಾಟೀಲ್‌, ಸಂಬಂಧಪಟ್ಟ ಎಲ್ಲರೊಂದಿಗೆ ಚರ್ಚೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಕೇಂದ್ರ ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿರುವಂತೆ, 1871ರ ಜನಗಣತಿ ವೇಳೆ ಲಿಂಗಾಯತರು ಹಿಂದೂ ಧರ್ಮದ ಭಾಗವಾಗಿರಲಿಲ್ಲ. ಆವತ್ತು ಲಿಂಗಾಯತವು ಸ್ವತಂತ್ರ  ಧರ್ಮದ ಮಾನ್ಯತೆ ಹೊಂದಿತ್ತು ಎಂಬುದು ಗಮನಾರ್ಹ. ಬೌದ್ಧ, ಸಿಖ್‌ ಮತ್ತು ಜೈನ ಧರ್ಮದಂತೆ ಬಸವ ಧರ್ಮವೂ ಪ್ರತ್ಯೇಕ ಧರ್ಮದ ಮಾನ್ಯತೆ ಹೊಂದಿದೆ. ಬಸವ ಧರ್ಮ ಮತ್ತು ಸಂಸ್ಕೃತಿ ಇಂದಲ್ಲ ನಾಳೆ ಜಾಗತಿಕ ಮಾನ್ಯತೆ ಪಡೆದೇ ತೀರುತ್ತದೆ ಎಂದು ಅವರು ಹೇಳಿದ್ದಾರೆ.

ಪ್ರತ್ಯೇಕ ಧರ್ಮದ ಮಾನ್ಯತೆ ನೀಡಿದರೆ ಲಿಂಗಾಯತ-ವೀರಶೈವರಲ್ಲಿ ಈಗಾಗಲೇ ಪರಿಶಿಷ್ಟಜಾತಿ ಸೌಲಭ್ಯ ಪಡೆಯುತ್ತಿರುವವರು ಅದರಿಂದ ವಂಚಿತರಾಗುತ್ತಾರೆ ಎಂಬುದು ಸುಳ್ಳು. ಈಗಾಗಲೇ ಈ ವಿಷಯದ ಬಗ್ಗೆ ಸಿಖ್‌ ಮತ್ತು ಜೈನ ಧರ್ಮಗಳಿಗೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡುವಾಗ ಯುಕ್ತಾಯುಕ್ತ ರೀತಿಯಲ್ಲಿ ಪರಿಣಿಸಿ ನಿರ್ಧಾರ ಕೈಗೊಳ್ಳಲಾಗಿದೆ. 

ಆ ಎರಡು ಧರ್ಮಗಳಲ್ಲಿಯೂ ಪರಿಶಿಷ್ಟಜಾತಿಯ (ಎಸ್‌ಸ್ಸಿ) ಜನರಿದ್ದಾರೆ ಎಂಬುದನ್ನು ಮರೆಯುವಂತಿಲ್ಲ. ಹೀಗಿರುವಾಗ ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡುವ ಪ್ರಸ್ತಾವದ ವೇಳೆಯಲ್ಲೂ ಆ ಅಂಶವನ್ನು ಪರಿಗಣಿಸುವ ಅಗತ್ಯ ಇತ್ತು ಎಂದು ಮಾಜಿ ಸಚಿವರೂ ಆದ ಎಂ.ಬಿ.ಪಾಟೀಲ್‌ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ನಿಲುವಿನಿಂದ ಬಸವ ಮತ್ತು ಲಿಂಗಾಯತ ಧರ್ಮದ ಅನುಯಾಯಿಗಳು ಆತಂಕಪಡುವ ಅಗತ್ಯವಿಲ್ಲ. ಲಿಂಗಾಯತ ಧರ್ಮ ಅಂದು, ಇಂದು ಮತ್ತು ಎಂದೆಂದಿಗೂ ಸ್ವತಂತ್ರ ಧರ್ಮ. ಆದ್ದರಿಂದ ಲಿಂಗಾಯತರು ಈ ಸಂದರ್ಭದಲ್ಲಿ ಸಂಯಮದಿಂದಿದ್ದು, ಶಾಂತಿ ಕಾಪಾಡಿಕೊಂಡು ಹೋಗಬೇಕು. ಮುಂದಿನ ನಡೆಯನ್ನು ಲಿಂಗಾಯತ ಮಹಾಸಭಾದ ಪದಾಧಿಕಾರಿಗಳು, ಕಾನೂನು ತಜ್ಞರು, ಮಠಾಧೀಶರು ಮತ್ತು ಸಮಾಜದ ಹಿರಿಯರ ಜೊತೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಮನವಿ ಮಾಡಿದ್ದಾರೆ.

click me!