
ಬೆಂಗಳೂರು(ಜುಲೈ 18): ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿಯವರು ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ದೇಶಾದ್ಯಂತ, ಅದರಲ್ಲೂ ಉತ್ತರಪ್ರದೇಶದಲ್ಲಿ ದಲಿತರ ಮೇಲೆ ವಿಪರೀತ ದೌರ್ಜನ್ಯ ನಡೆಯುತ್ತಿದೆ. ಈ ಬಗ್ಗೆ ರಾಜ್ಯಸಭೆಯಲ್ಲಿ ತನಗೆ ಮಾತನಾಡಲು ಅವಕಾಶ ನಿರಾಕರಿಸಲಾಗುತ್ತಿದೆ ಎಂದು ಮಾಯಾವತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯಸಭಾ ಸ್ಪೀಕರ್ ಅವರ ವರ್ತನೆಯಿಂದ ಬೇಸರಗೊಂಡ ಮಾಯಾವತಿಯವರು ರಾಜ್ಯಸಭೆ ಕಲಾಪವನ್ನೇ ಬಹಿಷ್ಕರಿಸಿ ಹೊರನಡೆದರು.
ದಲಿತರ ಮೇಲಿನ ದೌರ್ಜನ್ಯದ ಬಗ್ಗೆ ರಾಜ್ಯಸಭೆಯಲ್ಲಿ ಮಾತನಾಡಲು ತನಗೆ ಅವಕಾಶ ಇಲ್ಲವೆಂದಾದರೆ ತಾನು ರಾಜೀನಾಮೆ ನೀಡುವುದೇ ಒಳ್ಳೆಯದು ಎಂದು ಮಾಯಾವತಿ ಹೇಳಿದ್ದಾರೆ.
"ದಲಿತ ಅಭ್ಯರ್ಥಿಯನ್ನು ನಿಲ್ಲಿಸಿದರೆ ದಲಿತ ವೋಟು ಸಿಗುತ್ತದೆ ಎಂದು ಬಿಜೆಪಿ ಭಾವಿಸಿದೆ. ಆದರೆ, ಕನಸು ಮನಸಿನಲ್ಲೂ ಅವರಿಗೆ ಒಂದು ವೋಟು ಸಿಗೋದಿಲ್ಲ.
"ಉತ್ತರಪ್ರದೇಶದಲ್ಲಿ ಮಹಾ ಗೂಂಡಾರಾಜ್ಯ ನಡೆಯುತ್ತಿದೆ. ಇಲ್ಲಿ ಯಾರೂ ಸುರಕ್ಷಿತರಲ್ಲ. ಸದನದಲ್ಲಿ 3 ನಿಮಿಷದಲ್ಲಿ ಮಾತನಾಡಲು ನನಗೆ ತಿಳಿಸಲಾಯಿತು. ನಾನು ಇದೇನು ಶೂನ್ಯ ವೇಳೆಯಲ್ಲ. ನಾನು 3 ನಿಮಿಷಕ್ಕಿಂತ ಹೆಚ್ಚು ಮಾತನಾಡಬಲ್ಲೆ ಎಂದು ಸಭೆಗೆ ತಿಳಿಸಿದೆ. ಸಂಸತ್ತು ಇರುವುದು ಜನತೆಯ ಕಲ್ಯಾಣಕ್ಕಾಗಿ. ಆದರೆ, ನನಗೆ ಮೂರು ನಿಮಿಷಕ್ಕಿಂತ ಹೆಚ್ಚಿಗೆ ಮಾತನಾಡಲು ಸ್ಪೀಕರ್ ಅವಕಾಶ ಕೊಡಲಿಲ್ಲ" ಎಂದು ಮಾಯಾವತಿ ವಿಷಾದಿಸಿದರು.
"ಉತ್ತರಪ್ರದೇಶದ ಸಹರಾನ್'ಪುರದಲ್ಲಿ ದಲಿತರ ಮೇಲೆ ದೌರ್ಜನ್ಯವಾಗುತ್ತಿರುವಾಗ ಸರಕಾರ ಮೂಕ ಪ್ರೇಕ್ಷಕನಂತಿತ್ತು. ಸ್ಥಳಕ್ಕೆ ಭೇಟಿ ಕೊಡಲು ಅನುಮತಿ ಕೇಳಿದಾಗ ಹೆಲಿಪ್ಯಾಡ್'ನ ನೆವ ಹೇಳಿ ಬೇಡ ಎನ್ನಲಾಯಿತು" ಎಂದು ಹೇಳಿದ ಮಾಯಾವತಿ, ದೇಶಾದ್ಯಂತ ದಲಿತರ ಮೇಲೆ ಅನ್ಯಾಯವಾಗುತ್ತಿರುವ ಪ್ರಕರಣ ಹೆಚ್ಚುತ್ತಿದೆ ಎಂದು ಅಭಿಪ್ರಾಯಪಟ್ಟರು.
"ಹೈದರಾಬಾದ್'ನಲ್ಲಿ ರೋಹಿತ್ ವೇಮುಲಾ ಪ್ರಕರಣವಾಯಿತು. ಗುಜರಾತ್'ನಲ್ಲಿ ಗೋ ವಿಷಯಕ್ಕೆ ಕೆಲ ಘಟನೆಗಳಾದವು. ಶೋಷಿತರ ಮೇಲೆ ಅನ್ಯಾಯವಾಗುತ್ತಿರುವುದು ಹೆಚ್ಚಾಗುತ್ತಿದೆ. ಸದ್ಯ ದೇಶದಲ್ಲಿ ದಲಿತರ ಸ್ಥಿತಿ ತೀರ ಹೀನವಾಗಿದೆ" ಎಂದು ಬಿಎಸ್'ಪಿ ನಾಯಕಿಯು ಕಿಡಿಕಾರಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.