ಲಿಂಗಾಯತ ಧರ್ಮ: ಬೆಂಗಳೂರಿನಲ್ಲಿ ಇಂದು ಬೃಹತ್ ಸಮಾವೇಶ

By Suvarna Web DeskFirst Published Nov 19, 2017, 7:55 AM IST
Highlights

ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬೃಹತ್ ಸಮಾವೇಶ

ಬೆಂಗಳೂರು: ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮ ಸ್ಥಾನಮಾನ ನೀಡುವಂತೆ ಈವರೆಗೆ ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕ ಪ್ರದೇಶಗಳಲ್ಲಿ ನಡೆಯುತ್ತಿದ್ದ ಲಿಂಗಾಯತ ಸಮಾವೇಶ ಈಗ ದಕ್ಷಿಣ ಕರ್ನಾಟಕದ ಬೆಂಗಳೂರಿನಲ್ಲಿ ಇಂದು ನಡೆಯಲಿದ್ದು, ಸಕಲ ಸಿದ್ಧತೆ ಮಾಡಲಾಗುತ್ತಿದೆ.

ಬೀದರ್, ಮಹಾರಾಷ್ಟ್ರದ ಲಾತೂರು, ಕಲಬುರ್ಗಿ ಹಾಗೂ ಹುಬ್ಬಳ್ಳಿಯಲ್ಲಿ ಸ್ವತಂತ್ರ ಧರ್ಮ ನೀಡುವಂತೆ ಒತ್ತಾಯಿಸಿ ನಡೆದ ರ್ಯಾಲಿಯಿಂದ ಉತ್ತೇಜಿತರಾಗಿರುವ ಮುಖಂಡರು ಭಾನುವಾರ ನಗರದ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಲಿಂಗಾಯತ ಧರ್ಮೀಯರ ರಾಷ್ಟ್ರೀಯ ಸಮಾವೇಶ ಆಯೋಜಿಸಿದ್ದಾರೆ.

Latest Videos

ಬೆಳಗ್ಗೆ 10.30ಕ್ಕೆ ಆರಂಭವಾಗುವ ಸಮಾವೇಶಕ್ಕೆ ಸುಮಾರು 40 ಸಾವಿರಕ್ಕೂ ಹೆಚ್ಚು ಜನರು ಆಗಮಿಸುವ ನಿರೀಕ್ಷೆ ಇದೆ, ಸಮಾವೇಶಕ್ಕೆ ಬೃಹತ್ ಪೆಂಡಾಲ್ ಹಾಕಲಾಗುತ್ತಿದೆ, 20 ಸಾವಿರಕ್ಕೂ ಹೆಚ್ಚು ಆಸನ ವ್ಯವಸ್ಥೆ ಮಾಡಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಬರುವವರಿಗೆ ಬೆಳಗಿನ ಉಪಹಾರ, ಊಟದ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ರಾಷ್ಟ್ರೀಯ ಬಸವದಳದ ಅಧ್ಯಕ್ಷ ಮಂಜುನಾಥ ಬಂಡಿ ತಿಳಿಸಿದ್ದಾರೆ.

ಪ್ರಗತಿಪರರು ಭಾಗಿ: ಸಮಾವೇಶದಲ್ಲಿ ಪ್ರಗತಿಪರ ಲೇಖಕರು, ದಲಿತ ಸಂಘಟನೆಗಳ ಮುಖಂಡರು ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ.  ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್. ದ್ವಾರಕಾನಾಥ್, ಪ್ರಗತಿಪರ ಲೇಖಕರಾದ ಅಗ್ನಿ ಶ್ರೀಧರ್, ಕೆ.ಎಸ್.ಭಗವಾನ್, ಅರವಿಂದ ಮಾಲಗತ್ತಿ, ಮಹೇಶ್‌ಚಂದ್ರಗುರು, ಬಂಜಗೆರೆ ಜಯಪ್ರಕಾಶ್, ಇಂದೂಧರ ಹೊನ್ನಾಪುರ,ದಲಿತ ಮುಖಂಡರಾದ

ಮಾವಳ್ಳಿ ಶಂಕರ್, ಲಕ್ಷ್ಮೀನಾರಾಯಣ್, ಬಿ. ಗೋಪಾಲ್, ರುದ್ರಪ್ಪ ಹನಗವಾಡಿ, ವೆಂಕಟಸ್ವಾಮಿ, ಯೋಗೇಶ್ ಮಾಸ್ಟರ್ ,ಕೋದಂಡರಾಮ್, ಅಶೋಕ್ ಹೊನ್ನಾಪುರ, ನಾಗರಾಜು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

ವಾರ್ಷಿಕೋತ್ಸವ: ಮಾತೆ ಮಹಾದೇವಿ ಅವರು ಸ್ಥಾಪಿಸಿದ ಲಿಂಗಾಯತ ಧರ್ಮ ಮಹಾಸಭಾದ 22 ವಾರ್ಷಿಕೋತ್ಸವ ಇದಾಗಿದೆ. ಈ ಕಾರ್ಯಕ್ರಮದ ಜೊತೆಗೆ ಪ್ರಸ್ತುತ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ನೀಡಬೇಕೆಂದು ನಡೆಯುತ್ತಿರುವ ಹೋರಾಟದ ಮುಂದುವರೆದ ಭಾಗವಾಗಿದೆ. ಹೀಗಾಗಿ ಗೃಹ ಸಚಿವ ರಾಮಲಿಂಗಾರೆಡ್ಡಿ. ಸಚಿವರಾದ ಎಂ.ಬಿ. ಪಾಟೀಲ್, ಎಂ. ಕೃಷ್ಣಪ್ಪ, ವಿನಯ್ ಕುಲಕರ್ಣಿ, ಡಾ. ಶರಣಪ್ರಕಾಶ್ ಪಾಟೀಲ್, ವಿವಿಧ ಮಠಗಳ ಮಠಾಧೀಶರು ಆಗಮಿಸಲಿದ್ದಾರೆ.

ಗಡುವು ವಿಧಿಸುವ ಸಾಧ್ಯತೆ: ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಮಾನ್ಯತೆ ನೀಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಿದ್ದರೂ, ಈವರೆಗೆ ರಾಜ್ಯ ಸರ್ಕಾರ ನಿರ್ಧಾರ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಸಮಾವೇಶದಲ್ಲಿ ನಿಗದಿತ ದಿನದೊಳಗೆ ನಿರ್ಧಾರ ತೆಗೆದುಕೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸುವ ನಿರ್ಣಯ ಸೇರಿದಂತೆ 3 ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಧರ್ಮ ಸ್ಥಾಪನೆ ವಿರುದ್ಧ ಪ್ರತಿಭಟನೆ

ಬೆಂಗಳೂರು: ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಭಾನುವಾರ ಲಿಂಗಾಯತ ಧರ್ಮ ಮಹಾಸಭಾ ಏರ್ಪಡಿಸಿರುವ ಬೃಹತ್ ಲಿಂಗಾಯತರ ಸಮಾವೇಶಕ್ಕೆ ವಿರುದ್ಧವಾಗಿ ‘ವೀರಶೈವ-ಲಿಂಗಾಯತ ಒಂದೇ’ ಎಂಬ ಶೀರ್ಷಿಕೆಯಡಿ ‘ಬೆಂಗಳೂರು ದಕ್ಷಿಣ ವೀರಶೈವ ಲಿಂಗಾಯತ ಸಂಘಗಳ ಒಕ್ಕೂಟ’ ಭಾನುವಾರ ಪ್ರತಿಭಟನೆ ಹಮ್ಮಿಕೊಂಡಿದೆ.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಹರಿಕೆರೆ ವೀರಶೈವ ಸಮಾಜದ ಅಧ್ಯಕ್ಷ ಚನ್ನಬಸಪ್ಪ, ವೀರಶೈವ-ಲಿಂಗಾಯತ ಎರಡೂ ಒಂದೇ. ರಾಜಕೀಯ ದುರುದ್ದೇಶದಿಂದ ಜನರ ಮಧ್ಯೆ ಒಡೆದಾಡುವ ನೀತಿ ಸಲ್ಲದು. ಬಸವಣ್ಣ ಎಲ್ಲಿಯೂ ಲಿಂಗಾಯತ ಧರ್ಮ ಸ್ಥಾಪಿಸಿದ್ದೇನೆ ಎಂದು ಪ್ರಸ್ತಾಪಿಸಿಲ್ಲ. ಆದರೂ, ವೀರಶೈವ ಧರ್ಮ ಇತ್ತೀಚಿನ ಧರ್ಮವೆಂದು ಅಪಪ್ರಚಾರ ಮಾಡಲಾಗುತ್ತಿದೆ. ಇದರ ಹಿಂದೆ ಪಟ್ಟಭದ್ರಹಿತಾಸಕ್ತಿ ಅಡಗಿದೆ ಎಂದು ಆರೋಪಿಸಿದರು.

ವೀರಶೈವ-ಲಿಂಗಾಯತ ಎರಡೂ ಒಂದೇ ಎಂಬುದನ್ನು ಪ್ರತಿಪಾದಿಸಲು ಪ್ರತಿಭಟನೆ ಸಂಘಟಿಸಲಾಗಿದೆ. ಹೊಸೂರು ರಸ್ತೆಯ ಸ್ವಾಮಿ ವಿವೇಕಾನಂದ ಸರ್ಕಲ್‌ನಲ್ಲಿರುವ ಬೊಮ್ಮನಹಳ್ಳಿ ಗಣೇಶ ದೇವಸ್ಥಾನದ ಬಳಿ ಬೆಳಗ್ಗೆ 9 ಗಂಟೆಗೆ ಪ್ರತಿಭಟನೆ ನಡೆಯಲಿದೆ.

 

click me!