ಲಂಡನ್ ಅಗ್ನಿ ದುರಂತ: 6 ಮಂದಿ ಸಾವು; ನೂರಾರು ಜನರು ಅಪಾಯದಲ್ಲಿ..!

By Suvarna Web DeskFirst Published Jun 14, 2017, 1:11 PM IST
Highlights

250ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳ ಮೂಲಕ ಬೆಂಕಿ ನಂದಿಸುವ ಕಾರ್ಯ ಮಾಡಲಾಗುತ್ತಿದೆಯಾದರೂ ಏನೂ ಪ್ರಯೋಜನವಾಗಿಲ್ಲ. ಬೆಂಕಿ ಸಿಕ್ಕು ಇಡೀ ಕಟ್ಟಡವೇ ಕುಸಿದುಬೀಳುವ ಅಪಾಯದಲ್ಲಿದೆ. ಇದೇ ವೇಳೆ, ಜನರನ್ನು ಕಟ್ಟಡದಿಂದ ಹೊರಗೆ ತರುವ ಪ್ರಯತ್ನಗಳು ನಡೆದಿವೆ. ಹತ್ತಾರು ಮಂದಿಯನ್ನು ಈಗಾಗಲೇ ರಕ್ಷಿಸಲಾಗಿದೆ.​

ಲಂಡನ್(ಜೂನ್ 14): ಪಶ್ಚಿಮ ಲಂಡನ್'ನಲ್ಲಿರುವ 24 ಅಂತಸ್ತಿನ ವಸತಿ ಸಮುಚ್ಚಯವೊಂದರಲ್ಲಿ ಅಗ್ನಿಅವಘಡ ಸಂಭವಿಸಿದೆ. ಬೆಂಕಿ ಅಪಘಾತದಲ್ಲಿ ಇದುವರೆಗೆ 6 ಮಂದಿ ಬಲಿಯಾಗಿರುವ ಬಗ್ಗೆ ಮಾಹಿತಿ ಲಭಿಸಿದೆ. ಗ್ರೆನ್'ಫೆಲ್ ಟವರ್'ನಲ್ಲಿ ನೂರಾರು ಜನರು ಬೆಂಕಿಯ ಕೆನ್ನಾಲಿಗೆಗೆ ಬಲಿಯಾಗುವ ಭೀತಿಯಲ್ಲಿದ್ದಾರೆ.

ಗ್ರೆನ್'ಫೆಲ್ ಟವರ್'ನ 2ನೇ ಮಹಡಿಯಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡು ಇಡೀ ಸಮುಚ್ಚಯಕ್ಕೆ ಅಗ್ನಿಜ್ವಾಲೆ ವ್ಯಾಪಿಸಿದೆ. ಜನರು ಸಹಾಯಕ್ಕಾಗಿ ಚೀತ್ಕರಿಸುತ್ತಿರುವ ದೃಶ್ಯ ಮನಕಲುಕುವಂತಿವೆ ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ. ಇಡೀ ಕಟ್ಟಡಕ್ಕೆ ಬೆಂಕಿ ಜ್ವಾಲೆ ಮತ್ತು ದಟ್ಟ ಹೊಗೆ ವ್ಯಾಪಿಸಿರುವುದರಿಂದ ರಕ್ಷಣಾ ಕಾರ್ಯ ಬಹಳ ಕ್ಷಿಷ್ಟಕರವಾಗಿ ಪರಿಣಮಿಸಿದೆ.

120 ಫ್ಲ್ಯಾಟ್'ಗಳಿರುವ ಈ ವಸತಿ ಸಮುಚ್ಚಯದಲ್ಲಿ ಒಟ್ಟು 600ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಸ್ಥಳೀಯ ಕಾಲಮಾನ ಮಧ್ಯಾಹ್ನ 1ಕ್ಕೆ ಬೆಂಕಿ ಆಕಸ್ಮಿಕವಾಗಿದ್ದು ಆ ಸಂದರ್ಭದಲ್ಲಿ ನಾನ್ನೂರಕ್ಕೂ ಹೆಚ್ಚು ಮಂದಿ ಅಲ್ಲಿದ್ದಿರಬಹುದೆಂದು ಅಂದಾಜಿಸಲಾಗಿದೆ.

ಉರುಳುರುಳಿ ಬಿದ್ದರು...
ಬೆಂಕಿ ಕೆನ್ನಾಲಿಗೆ ಇಡೀ ಕಟ್ಟಡವನ್ನು ವ್ಯಾಪಿಸಿ ಮೂಲೆಮೂಲೆಯಲ್ಲೂ ದಟ್ಟ ಹೊಗೆಯ ಕಾರ್ಮೋಡ ಕವಿದಿತ್ತು. ಮೇಲಿನ ಮಹಡಿಗಳಿಂದ ಸಹಾಯಕ್ಕಾಗಿ ಜನರ ಆರ್ತನಾದ ನಿಜಕ್ಕೂ ದಾರುಣವಾಗಿತ್ತು. ತಾಯಿ ತನ್ನ ಮಗುವನ್ನು ಹೊಗೆಯಿಂದ ಕಾಪಾಡಲು ಕಿಟಕಿ ಆಚೆ ಹಿಡಿದು ನಿಂತ ದೃಶ್ಯ; 9ನೇ ಮಹಡಿಯಿಂದ ಮತ್ತೊಂದು ಮಗು ಕೆಳಗೆ ಉರುಳಿದ್ದು; 6ನೇ ಮಹಡಿಯಿಂದ 5 ವರ್ಷದ ಮಗುವೊಂದು ಬಿದ್ದದ್ದು; ಇನ್ನೂ ಅನೇಕ ಜನರು ಒಳಗೆ ಉಸಿರುಗಟ್ಟುತ್ತಿದ್ದರಿಂದ ಹತಾಶೆಯಲ್ಲಿ ಹೊರಗೆ ಧುಮುಕುತ್ತಿದ್ದುದು; ಮೊಬೈಲ್ ಫೋನ್'ನಿಂದ ಲೈಟ್'ಗಳನ್ನು ಆನ್ ಮಾಡುವುದು, ಬಿಳಿ ಬಟ್ಟೆಗಳನ್ನು ಹಾರಿಸುವ ಮುಖಾಂತರ ಜನರು ಸಹಾಯಕ್ಕಾಗಿ ಬೇಡಿಕೊಳ್ಳುತ್ತಿದ್ದುದು; ಈ ದೃಶ್ಯಗಳು ಕಣ್ಣಿಗೆ ಕಟ್ಟುವಂತಿವೆ ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ.

250ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳ ಮೂಲಕ ಬೆಂಕಿ ನಂದಿಸುವ ಕಾರ್ಯ ಮಾಡಲಾಗುತ್ತಿದೆಯಾದರೂ ಏನೂ ಪ್ರಯೋಜನವಾಗಿಲ್ಲ. ಬೆಂಕಿ ಸಿಕ್ಕು ಇಡೀ ಕಟ್ಟಡವೇ ಕುಸಿದುಬೀಳುವ ಅಪಾಯದಲ್ಲಿದೆ. ಇದೇ ವೇಳೆ, ಜನರನ್ನು ಕಟ್ಟಡದಿಂದ ಹೊರಗೆ ತರುವ ಪ್ರಯತ್ನಗಳು ನಡೆದಿವೆ. ಹತ್ತಾರು ಮಂದಿಯನ್ನು ಈಗಾಗಲೇ ರಕ್ಷಿಸಲಾಗಿದೆ.

click me!