ಬರ: ಶಿಕ್ಷಣಕ್ಕಾಗಿ ಸಿದ್ಧಗಂಗೆ ಮಠಕ್ಕೆ ವಿದ್ಯಾರ್ಥಿಗಳ ದಂಡು

By Shrilakshmi Shri  |  First Published Jun 5, 2019, 8:41 AM IST

ಬರ: ಶಿಕ್ಷಣಕ್ಕಾಗಿ ಸಿದ್ಧಗಂಗೆ ಮಠಕ್ಕೆ ವಿದ್ಯಾರ್ಥಿಗಳ ಗುಳೆ |  ಶ್ರೀಮಠದಲ್ಲಿ ಪ್ರವೇಶ ಕೋರಿ ಉ.ಕರ್ನಾಟಕ ಜಿಲ್ಲೆಗಳಿಂದ 4 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಂದ ಅರ್ಜಿ


ತುಮಕೂರು (ಜೂ. 05):  ತೀವ್ರ ಬರದಿಂದ ತತ್ತರಿಸಿರುವ ಉತ್ತರ ಕರ್ನಾಟಕದಿಂದ ಸಾವಿರಾರು ಮಕ್ಕಳು ವಿದ್ಯಾಭ್ಯಾಸಕ್ಕೆಂದು ವಿದ್ಯಾಕಾಶಿ ಸಿದ್ಧಗಂಗೆಯತ್ತ ಮುಖಮಾಡಿದ್ದು, ಮಠದ ಆವರಣದಲ್ಲಿ ಎಲ್ಲಿ ನೋಡಿದರೂ ಉತ್ತರ ಕರ್ನಾಟಕದ ಮಂದಿಯ ದಂಡೇ ಕಾಣ ಸಿಗುತ್ತಿದೆ.

ಪ್ರಸ್ತುತ ಮಠದಲ್ಲಿ 8 ಸಾವಿರ ವಿದ್ಯಾರ್ಥಿಗಳಿದ್ದು, ಗರಿಷ್ಠ 10 ಸಾವಿರ ವಿದ್ಯಾರ್ಥಿಗಳಿಗೆ ಮಠದಲ್ಲಿ ಸ್ಥಳಾವಕಾಶ ಕಲ್ಪಿಸಬಹುದಾಗಿದೆ. ಹಾಗಾಗಿ ಇನ್ನು 2 ಸಾವಿರ ಮಕ್ಕಳನ್ನು ಈ ಬಾರಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಆದರೆ, ಈಗಾಗಲೇ 6 ಸಾವಿರಕ್ಕೂ ಅಧಿಕ ಅರ್ಜಿಗಳು ಬಂದಿದ್ದು, ಇದರಲ್ಲಿ 4,500ಕ್ಕೂ ಹೆಚ್ಚಿನ ಅರ್ಜಿಗಳು ಉತ್ತರ ಕರ್ನಾಟಕ ಭಾಗದಿಂದಲೇ ಆಗಮಿಸಿವೆ. ಮಠದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಇಷ್ಟುದೊಡ್ಡ ಪ್ರಮಾಣದಲ್ಲಿ ಅರ್ಜಿಗಳ ಆಗಮನವಾಗಿದ್ದು, ಏನು ಮಾಡಬೇಕೆಂದು ಶ್ರೀಗಳು ಯೋಚಿಸುತ್ತಿದ್ದಾರೆ.

Tap to resize

Latest Videos

ಏಕೆಂದರೆ, ಮಠಕ್ಕೆ ಆಗಮಿಸಿದ ವಿದ್ಯಾರ್ಥಿಗಳು ಹಿಂದಿರುಗಿ ಕಳುಹಿಸಿದ ಇತಿಹಾಸವೇ ಇಲ್ಲ. ಆದರೆ, ಈ ಬಾರಿ 4 ಸಾವಿರ ಹೆಚ್ಚುವರಿ ವಿದ್ಯಾರ್ಥಿಗಳಿಂದ ಅರ್ಜಿ ಬಂದಿವೆ. ಅಲ್ಲದೇ ಅರ್ಜಿ ಸಲ್ಲಿಸದೇ ಅನೇಕರು ನೇರವಾಗಿ ಶ್ರೀಮಠಕ್ಕೆ ಆಗಮಿಸಿದ್ದಾರೆ. ಪ್ರತಿಯೊಬ್ಬರಿಗೂ ಅವಕಾಶ ಮಾಡಿಕೊಡಲು ಶ್ರೀಗಳು ಚಿಂತನೆ ನಡೆಸುತ್ತಿದ್ದಾರೆ.

ಮಕ್ಕಳಾದರೂ ಉನ್ನತಿ ಸಾಧಿಸಲಿ:

ಉತ್ತರ ಕರ್ನಾಟಕ ಭಾಗದಲ್ಲಿ ಬರದ ತೀವ್ರತೆ ಬಹುವಾಗಿ ಕಾಡುತ್ತಿದ್ದು, ಇದರಿಂದ ತತ್ತರಿಸುವ ಮಂದಿ ತಾವು ಕಷ್ಟುಪಟ್ಟಿದ್ದು ಸಾಕು ತಮ್ಮ ಮಕ್ಕಳಾದರೂ ಜೀವನದಲ್ಲಿ ಉನ್ನತಿ ಸಾಧಿಸಲಿ. ಅವರಾದರೂ ವಿದ್ಯಾವಂತರಾಗಲಿ ಎಂಬ ಆಶಯದೊಂದಿಗೆ ಸಾವಿರಾರು ಪೋಷಕರು ತಮ್ಮ ಮಕ್ಕಳೊಂದಿಗೆ ತ್ರಿವಿಧ ದಾಸೋಹಕ್ಕೆ ಪ್ರಸಿದ್ಧವಾಗಿರುವ ಶ್ರೀಮಠಕ್ಕೆ ಧಾವಿಸುತ್ತಿದ್ದಾರೆ.

ರಾಯಚೂರು, ಕೊಪ್ಪಳ, ಬಳ್ಳಾರಿ, ಹೂವಿನಹಡಗಲಿ, ಧಾರವಾಡ, ಹುಬ್ಬಳಿ ಸೇರಿದಂತೆ ಉತ್ತರ ಕರ್ನಾಟಕ ಹಾಗೂ ಹೈದರಾಬಾದ್‌ ಕರ್ನಾಟಕ ಭಾಗದಿಂದ ಸಾವಿರಾರು ವಿದ್ಯಾರ್ಥಿಗಳು ನೂರಾರು ಆಸೆಗಳನ್ನು ಹೊತ್ತು ತಮ್ಮ ಪೋಷಕರೊಂದಿಗೆ ಶ್ರೀಮಠದ ಆವರಣದಲ್ಲಿ ಬೀಡುಬಿಟ್ಟಿದ್ದಾರೆ.

ಬೆಳಗ್ಗೆ 8 ಗಂಟೆಗೆ ಸಿದ್ಧಗಂಗಾ ಮಠದ ತಮ್ಮ ಆಡಳಿತ ಕಚೇರಿಗೆ ಬರುವ ಸಿದ್ಧಲಿಂಗ ಸ್ವಾಮೀಜಿಗಳು ಸಂಜೆಯ ತನಕ ವಿದ್ಯಾರ್ಥಿಗಳ ಅರ್ಜಿಗಳನ್ನು ಖದ್ದು ಪರಿಶೀಲನೆ ನಡೆಸುತ್ತಿದ್ದಾರೆ.

- ಉಗಮ ಶ್ರೀನಿವಾಸ್ 

click me!