ಗೌರಿ, ಕಲಬುರ್ಗಿ ಹತ್ಯೆ ಆರೋಪಿ ಕುಟುಂಬ ಬೀದಿಗೆ! ಇದ್ದ ಕೆಲಸ ಕಳೆದುಕೊಂಡ ಸಹೋದರ ನಿರುದ್ಯೋಗಿ | ರಾತ್ರೋರಾತ್ರಿ ಬಾಡಿಗೆ ಮನೆ ಬಿಡಿಸಿದ ಮಾಲೀಕರು | ಸದ್ಯಕ್ಕೆ ಗೂಡಿನಂತ ಕೊಠಡಿಯಲ್ಲಿ ಕುಟುಂಬ ವಾಸ | ತಾಯಿಗೆ ಹೃದ್ರೋಗ, ಚಿಕಿತ್ಸೆ ಕೊಡಿಸಲು ಪರದಾಟ
ಹುಬ್ಬಳ್ಳಿ (ಜೂ. 05): ಪತ್ರಕರ್ತೆ ಗೌರಿ ಲಂಕೇಶ್ ಹಾಗೂ ಹಿರಿಯ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಹತ್ಯೆಯ ಆರೋಪ ಎದುರಿಸುತ್ತಿರುವ ಮತ್ತು ಸದ್ಯ ನ್ಯಾಯಾಂಗ ಬಂಧನದಲ್ಲಿ ಇರುವ ಇಲ್ಲಿನ ಗಣೇಶ್ ಮಿಸ್ಕಿನ್ ಕುಟುಂಬ ಅಕ್ಷರಶಃ ಬೀದಿಗೆ ಬಿದ್ದಿದೆ. ಎಲ್ಲರಿಂದಲೂ ದೂರವಾಗಿರುವ ಗಣೇಶನ ಸಹೋದರ ಹಾಗೂ ತಾಯಿ ನರಕಯಾತನೆ ಅನುಭವಿಸುತ್ತಿದ್ದಾರೆ. ದಿನ ದೂಡುವುದೇ ಅವರಿಗೆ ದುಸ್ತರವಾಗಿದೆ.
2015 ಆಗಸ್ಟ್ 30 ಬೆಳಗ್ಗೆ ಡಾ.ಕಲಬುರ್ಗಿ ಅವರನ್ನು ಧಾರವಾಡದ ಕಲ್ಯಾಣ ನಗರದ ಸ್ವಗೃಹದಲ್ಲೇ ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆಗೈದಿದ್ದರು. ಈ ಪ್ರಕರಣದ ತನಿಖೆಗಾಗಿ ಸರ್ಕಾರ ವಿಶೇಷ ತನಿಖಾ ದಳ (ಎಸ್‌ಐಟಿ) ರಚಿಸಿತ್ತು.
ಪ್ರಕರಣ ಭೇದಿಸಿರುವ ಎಸ್‌ಐಟಿ, ಗಣೇಶ್ ಮಿಸ್ಕಿನ್‌ನೇ ಡಾ.ಕಲಬುರ್ಗಿ ಹಂತಕ ಎಂದು ಆರೋಪಿಸಿ ನ್ಯಾಯಾಲಯಕ್ಕೆ ಚಾಜ್‌ರ್‍ಶೀಟ್ ಸಲ್ಲಿಸಲು ಮುಂದಾಗಿದೆ. ಡಾ.ಕಲಬುರ್ಗಿ ಮತ್ತು ಗೌರಿ ಲಂಕೇಶ್ ಹತ್ಯೆ ಪ್ರಕರಣಗಳಲ್ಲಿ ಗಣೇಶ್ ಹೆಸರು ಮೊದಲ ಬಾರಿಗೆ ಕೇಳಿ ಬಂದಾಗಲೇ ಮಿಸ್ಕಿನ್ ಕುಟುಂಬ ತೀವ್ರ ಆಘಾತಕ್ಕೆ ಒಳಗಾಗಿತ್ತು.
ಇದೀಗ ಎಸ್‌ಐಟಿ ಡಾ.ಕಲಬುರ್ಗಿ ಹಂತಕ ಈತನೇ ಮತ್ತು ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲೂ ಭಾಗಿಯಾಗಿದ್ದಾನೆ ಎಂದು ಆರೋಪಿಸಿರುವುದು ಗಣೇಶನ ವೃದ್ಧ ತಾಯಿ, ತಮ್ಮನನ್ನು ಮತ್ತಷ್ಟುಕಂಗಾಲು ಮಾಡಿದೆ.
ಗೂಡಿನಂಥ ಮನೆಯಲ್ಲಿ ವಾಸ:
ಗೌರಿ ಲಂಕೇಶ್ ಹತ್ಯೆಯಲ್ಲಿ ಗಣೇಶ್ ಭಾಗಿಯಾಗಿದ್ದಾನೆ ಎನ್ನುವ ಮಾಹಿತಿ ದೊರೆಯುತ್ತಿದ್ದಂತೆ ಎಸ್‌ಐಟಿ ಅಧಿಕಾರಿಗಳು ಗಣೇಶ್‌ನನ್ನು ಬಂಧಿಸಿದ್ದರು. ಈ ಬೆಳವಣಿಗೆ ಗಮನಿಸಿದ ಬಾಡಿಗೆ ಮನೆ ಮಾಲೀಕರು ತಾಯಿ-ಮಗನನ್ನು ರಾತ್ರೋರಾತ್ರಿ ಹೊರದಬ್ಬಿದ್ದರು.
ಅಷ್ಟೇ ಅಲ್ಲ, ಅವರಿಗೆ ತಾತ್ಕಾಲಿಕ ಆಶ್ರಯ ನೀಡಲಿಕ್ಕೂ ಯಾರೂ ಮುಂದಾಗಲಿಲ್ಲ. ಹುಬ್ಬಳ್ಳಿ ನಗರದಲ್ಲಿ ಯಾರೂ ಬಾಡಿಗೆ ಮನೆಯನ್ನೂ ನೀಡಲಿಲ್ಲ. ಕೊನೆಗೆ ಇಲ್ಲಿನ ಗೋಕುಲ ರಸ್ತೆಯ ನಿವಾಸಿಯೊಬ್ಬರು ತಮಗೆ ಉಪಯೋಗಕ್ಕೆ ಬಾರದ ಗೂಡಿನಂತಹ ಕೋಣೆಯೊಂದನ್ನು ನೀಡಿದ್ದಾರೆ. ಸದ್ಯ ಅದರಲ್ಲಿಯೇ ತಾಯಿ-ಮಗ ರವಿ ಮಿಸ್ಕಿನ್ ದಿನದೂಡುತ್ತಿದ್ದಾರೆ.
ಸೋದರನ ನೌಕರಿ ಹೋಯ್ತು:
ಆರೋಪಿ ಗಣೇಶ್‌ನ ಸೋದರ ತಾಯಿಯ ಜೊತೆ ವಾಸವಿದ್ದಾರೆ. ತಂದೆಯದ್ದು ಸಣ್ಣ ಹೋಟೆಲ್ ಇತ್ತು. ಮೂರು ವರ್ಷಗಳ ಹಿಂದೆ ಅವರೂ ನಿಧನರಾಗಿದ್ದಾರೆ. ಗಣೇಶನ ಹಿರಿಯ ಮಗ ಆಗಿದ್ದರಿಂದ ಕುಟುಂಬದ ಜವಾಬ್ದಾರಿ ಆತನ ಮೇಲೆಯೇ ಇತ್ತು. ಇದಕ್ಕಾಗಿ ಅಗರಬತ್ತಿ ಫ್ಯಾಕ್ಟರಿ ಹಾಕಿಕೊಂಡಿದ್ದ. ತಾಯಿ ಹಾಗೂ ಸಹೋದರನೊಂದಿಗೆ ಹುಬ್ಬಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಹೀಗೆ ಅಗರಬತ್ತಿ ಫ್ಯಾಕ್ಟರಿ ನೋಡಿಕೊಳ್ಳುತ್ತಲೇ ಹಿಂದುಪರ ಸಂಘಟನೆಯಲ್ಲೂ ಗುರುತಿಸಿಕೊಂಡಿದ್ದ. ಹಿಂದುಪರ ಸಂಘಟನೆಯೊಂದರಲ್ಲಿ ವಾದ್ಯಮೇಳದ ಪ್ರಮುಖನಾಗಿ ಕೆಲಸ ಮಾಡುತ್ತಿದ್ದ.
ಈತನನ್ನು ಗೌರಿ ಲಂಕೇಶ್ ಹತ್ಯೆಯಲ್ಲಿ ಬಂಧಿಸುತ್ತಿದ್ದಂತೆ ಅಗರಬತ್ತಿ ಫ್ಯಾಕ್ಟರಿ ತೆರೆಯಲು ಸಾಲ ನೀಡಿದವರೂ ಮರುಪಾವತಿಗೆ ಪೀಡಿಸಲು ಪ್ರಾರಂಭಿಸಿದ್ದಾರೆ. ಇದರಿಂದ ಸಹೋದರ ರವಿ ಮಿಸ್ಕಿನ್, ಫ್ಯಾಕ್ಟರಿಯಲ್ಲಿ ಅಳವಡಿಸಿದ್ದ ಯಂತ್ರಗಳನ್ನೆಲ್ಲ ಮಾರಾಟ ಮಾಡಿ ಸಹೋದರ ಮಾಡಿದ್ದ ಸಾಲವನ್ನು ತೀರಿಸಿದ್ದಾನೆ. ಇದರಿಂದ ಅಗರಬತ್ತಿ ಫ್ಯಾಕ್ಟರಿ ಬಂದ್ ಆಗಿದೆ.
ರವಿ ಮಿಸ್ಕಿನ್ ಮೊಬೈಲ್ ಕಂಪನಿಯೊಂದರಲ್ಲಿ ಪ್ರಮೋಟರ್ ಆಗಿ ಕೆಲಸ ಮಾಡುತ್ತಿದ್ದ. ಗಣೇಶನ ಬಂಧನವಾಗುತ್ತಿದ್ದಂತೆ ಈತನ ನೌಕರಿಗೂ ಸಂಚಕಾರ ಬಂದಿತ್ತು. ಈತನನ್ನು ಕಂಪನಿ ಹೇಳದೇ ಕೇಳದೆ ಕೆಲಸದಿಂದ ತೆಗೆದುಹಾಕಿದೆ. ಅದಾದ ಬಳಿಕ ಹತ್ತಾರು ಕಡೆಗಳಲ್ಲಿ ಕೆಲಸಕ್ಕೆ ಪ್ರಯತ್ನ ಪಟ್ಟರೂ ಯಾರು ಕೆಲಸ ನೀಡಿಲ್ಲ. ಸದ್ಯ ನಿರುದ್ಯೋಗಿಯಾಗಿದ್ದಾನೆ. ಪಿಎಫ್‌ನಿಂದ ಬಂದ ಹಣದಲ್ಲಿ ಸದ್ಯ ಜೀವನ ಹೇಗೋ ಸಾಗಿಸುವಂತಾಗಿದೆ.
ತಾಯಿಗೆ ಹೃದ್ರೋಗ:
ಇನ್ನು ಮಗ ಗಣೇಶನ ತಾಯಿ ಪುಷ್ಪಾ ಮಿಸ್ಕಿನ್‌ಗೆ ಹೃದಯದ ಸಮಸ್ಯೆ ಕಾಣಿಸಿಕೊಂಡಿದೆ. ಅವರಿಗೆ ಕಿಮ್ಸ್‌ನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಗನ ಬಂಧನವಾದಾಗಿನಿಂದ ತಾಯಿಯ ಆರೋಗ್ಯ ಕ್ಷೀಣಿಸುತ್ತಲೇ ಸಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ದುಡ್ಡಿನ ಸಮಸ್ಯೆ ಕಾಡುತ್ತಿದೆ ಎಂದು ಗಣೇಶನ ಸಹೋದರ ರವಿ ನೊಂದು ನುಡಿಯುತ್ತಾನೆ.
ಮೊದಮೊದಲು ಸಂಬಂಧಿಕರು ಇವರಿಂದ ಅಂತರ ಕಾಯ್ದುಕೊಂಡಿದ್ದರು. ಯಾವಾಗ ಪುಷ್ಪಾ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತೋ ಆಗ ಮತ್ತೆ ಹತ್ತಿರವಾಗಿದ್ದಾರೆ. ಹೀಗಾಗಿ ಕೆಲವೊಂದಿಷ್ಟು ದಿನ ತಾಯಿಯನ್ನು ಸಂಬಂಧಿಕರ ಮನೆಯಲ್ಲಿ ಬಿಟ್ಟು ಹೊರಗೆ ಕೆಲಸ ಹುಡುಕುತ್ತಿದ್ದಾನೆ ರವಿ ಮಿಸ್ಕಿನ್. ಗಣೇಶ ತಪ್ಪು ಮಾಡಿದ್ದಾನೋ ಇಲ್ಲವೋ ಅದನ್ನು ಕೋರ್ಟ್ ನಿರ್ಧರಿಸುತ್ತದೆ. ಆದರೆ ಆತನ ಬಂಧನದಿಂದ ತಾಯಿ ಹಾಗೂ ಸಹೋದರ ಬೀದಿಗೆ ಬಿದ್ದಿರುವುದಂತೂ ಸತ್ಯ!
- ಶಿವಾನಂದ ಗೊಂಬಿ