ವಿಧಾನಸಭೆಯಲ್ಲಿ ಗಲಿಬಿಲಿ ಸೃಷ್ಟಿಸಿದ ಮಸಾಲೆ ದೋಸೆ!

By Suvarna Web DeskFirst Published Jun 20, 2017, 9:54 AM IST
Highlights

ವಿಧಾನಸಭೆಯ ಆಡಳಿತ ಪಕ್ಷದ ಮೊಗಸಾಲೆಯಲ್ಲಿರುವ ಉಪಾಹಾರ ಕೇಂದ್ರದಲ್ಲಿ ಮಸಾಲೆ ದೋಸೆ ಮಾಡುವಾಗ ಉಂಟಾದ ಹೊಗೆಯಿಂದಾಗ ಅಗ್ನಿಸೂಚಕ ಗಂಟೆ (ಫೈರ್‌ ಸೈರನ್‌) ಬಾರಿಸಿದ ಪರಿಣಾಮ ಕೆಲಕಾಲ ಗಲಿಬಿಲಿ ಉಂಟಾದ ಘಟನೆ ಸೋಮವಾರ ನಡೆಯಿತು.

ಬೆಂಗಳೂರು: ವಿಧಾನಸಭೆಯ ಆಡಳಿತ ಪಕ್ಷದ ಮೊಗಸಾಲೆಯಲ್ಲಿರುವ ಉಪಾಹಾರ ಕೇಂದ್ರದಲ್ಲಿ ಮಸಾಲೆ ದೋಸೆ ಮಾಡುವಾಗ ಉಂಟಾದ ಹೊಗೆಯಿಂದಾಗ ಅಗ್ನಿಸೂಚಕ ಗಂಟೆ (ಫೈರ್‌ ಸೈರನ್‌) ಬಾರಿಸಿದ ಪರಿಣಾಮ ಕೆಲಕಾಲ ಗಲಿಬಿಲಿ ಉಂಟಾದ ಘಟನೆ ಸೋಮವಾರ ನಡೆಯಿತು.

ಬೆಳಗ್ಗೆ ವಿಧಾನಸಭೆ ಸಮಾವೇಶಗೊಳ್ಳಲು ಕೆಲವೇ ನಿಮಿಷಗಳ ಮುಂಚೆ ಇದ್ದಕ್ಕಿದ್ದಂತೆ ಅಗ್ನಿ ಸೂಚಕ ಅಪಾಯದ ಗಂಟೆ ಬಾರಿಸಿದ್ದರಿಂದ ಮೊಗಸಾಲೆಯಲ್ಲಿದ್ದ ಶ್ವೇತ ಸಮವಸ್ತ್ರ ಧರಿಸಿದ್ದ ಪೊಲೀಸರು ಹಾಗೂ ಸಚಿವಾಲಯದ ಸಿಬ್ಬಂದಿ ಗೊಂದಲಕ್ಕೆ ಒಳಗಾದರು. ವಿಧಾನಸಭೆಯ ಪ್ರವೇಶದ ದ್ವಾರದ ಬಲಬದಿ ಇರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕೊಠಡಿ ಎದುರೇ ಅಳವಡಿಸಲಾಗಿರುವ ಅಗ್ನಿಸೂಚಕ ಗಂಟೆ ಬೆಳಗ್ಗೆ ಸುಮಾರು 10.30ರ ವೇಳೆಗೆ ಬಾರಿಸಲಾರಂಭಿಸಿತು.

ಆರಂಭದ ಒಂದೆರಡು ನಿಮಿಷಗಳ ಕಾಲ ಅಗ್ನಿಸೂಚಕ ಗಂಟೆ ಏಕೆ ಬಾರಿಸುತ್ತದೆ ಎಂಬುದೇ ಯಾರಿಗೂ ತಿಳಿಯಲಿಲ್ಲ. ಕೆಲ ನಿಮಿಷಗಳ ಬಳಿಕ ಆಡಳಿತ ಪಕ್ಷದ ಮೊಗಸಾಲೆಯಲ್ಲಿರುವ ಉಪಾಹಾರ ಕೇಂದ್ರದಲ್ಲಿ ತಯಾರಾಗುತ್ತಿದ್ದ ಮಸಾಲೆ ದೋಸೆಯೇ ಇದಕ್ಕೆ ಕಾರಣ ಎಂಬುದು ತಿಳಿಯಿತು.

ಉಪಾಹಾರ ಕೇಂದ್ರದ ಮುಂದೆ ಅಳವಡಿಸಲಾಗಿದ್ದ ಅಗ್ನಿಸೂಚಕ ಉಪಕರಣಕ್ಕೆ ತುಸು ಹೆಚ್ಚಾಗಿಯೇ ಮಸಾಲೆ ದೋಸೆಯ ಹಂಚಿನಿಂದ ಹೊರಹೊಮ್ಮಿದ ಹೊಗೆ ತಾಗಿದ್ದರಿಂದ ಅಪಾಯದ ಗಂಟೆ ಬಾರಿಸಲು ಕಾರಣವಾಯಿತು. ಉಪಾಹಾರ ಕೇಂದ್ರದಿಂದ ಹೊಗೆ ಹೊರ ಹೋಗಲು ಸೂಕ್ತ ಕಿಟಕಿ ವ್ಯವಸ್ಥೆ ಇಲ್ಲದ ಪರಿಣಾಮ ಹೊಗೆ ಮೊಗಸಾಲೆಯಲ್ಲೇ ಹರಿದಾಡುತ್ತಿತ್ತು. ಕೇಂದ್ರೀಕೃತ ಹವಾನಿಯಂತ್ರಣ ವ್ಯವಸ್ಥೆ ಇರುವುದರಿಂದ ಹೊಗೆ ಹೋಗಲು ಕಿಟಕಿ ಅಳವಡಿಸಲೂ ಸಾಧ್ಯವಿಲ್ಲದಿರುವುದು ಘಟನೆಗೆ ಕಾರಣವಾಯಿತು.

click me!