
ಬೆಂಗಳೂರು: ರಾಜ್ಯ ವಿಧಾನಸಭೆಯಲ್ಲಿ ಅಂಗೀಕೃತಗೊಂಡಿರುವ ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ವಿಧೇಯಕ - 2017ಕ್ಕೆ ಸೋಮವಾರ ವಿಧಾನಪರಿಷತ್‌ನಲ್ಲಿ ಸರ್ವಾನುಮತದ ಅಂಗೀಕಾರ ದೊರೆಯಿತು.
ವಿಧೇಯಕದಲ್ಲಿ ಕೆಲವು ಸಣ್ಣಪುಟ್ಟತಿದ್ದುಪಡಿಗಳನ್ನು ಮಾಡುವ ಸಂಬಂಧ ಜಿಎಸ್‌ಟಿ ಕೌನ್ಸಿಲ್ ಗಮನಕ್ಕೆ ತರುವಂತೆ ಸಲಹೆ ನೀಡಿದ ಸದಸ್ಯರು ಸರ್ವಾನುಮತದಿಂದ ವಿಧೇಯಕಕ್ಕೆ ಒಪ್ಪಿಗೆ ನೀಡಿದ್ದು, ಜುಲೈ 1ರಿಂದ ರಾಜ್ಯದಲ್ಲಿ ಜಿಎಸ್‌ಟಿ ಪದ್ಧತಿ ಜಾರಿಗೆ ಬರಲಿದೆ.
ವಿಧೇಯಕ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜಿಎಸ್‌ಟಿಯನ್ನು ಯಥಾವತ್ತಾಗಿ ರಾಜ್ಯದಲ್ಲಿ ಅಳವಡಿಸಿಕೊಳ್ಳುತ್ತಿದ್ದೇವೆ. ಕೇಂದ್ರ ಸರಕು ಮತ್ತು ಸೇವೆಗಳ ತೆರಿಗೆ ವಿಧೇಯಕದ ಹೆಸರಿನ ಬದಲು ‘ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ವಿಧೇಯಕ' ಎಂದು ಮಾಡಲಾಗಿದೆ. ನಾವು ಇಲ್ಲಿ ಈ ವಿಧೇಯಕದ ಬಗ್ಗೆ ಚರ್ಚಿಸಿ ಉಪಯೋಗವಿಲ್ಲ. ಇಲ್ಲಿ ಸದಸ್ಯರು ಸಲಹೆ ನೀಡಿದರೂ ಪರಿಹಾರ ಸಿಗುವುದಿಲ್ಲ. ನಿಮ್ಮ ಸಲಹೆ ಕ್ರೋಡೀಕರಿಸಿ ಜಿಎಸ್‌ಟಿ ಕೌನ್ಸಿಲ್‌ಗೆ ಕಳುಹಿಸಬಹುದು ಅಷ್ಟೇ. ಹೀಗಾಗಿ ಸರ್ವಾನುಮತದಿಂದ ಒಪ್ಪಿಗೆ ನೀಡಿ ಎಂದು ಹೇಳಿದರು.
2004 ಏಪ್ರಿಲ್ 1ರಿಂದ ವ್ಯಾಟ್ (ವಿಎಟಿ) ತೆರಿಗೆ ಪದ್ಧತಿ ರಾಜ್ಯದಲ್ಲಿ ಜಾರಿಗೆ ಇದೆ. ಇದರಡಿ ಶೇ.4 ಹಾಗೂ ಶೇ. 12.5 ಎರಡು ಮಾದರಿ ತೆರಿಗೆಗಳು ಅನ್ವಯವಾಗುತ್ತವೆ. ಮದ್ಯ ಹಾಗೂ ಪೆಟ್ರೋಲಿಯಂ ವ್ಯಾಟ್‌ನಿಂದ ಹೊರಗಿತ್ತು. ಇದೀಗ ಮದ್ಯವನ್ನು ಜಿಎಸ್‌ಟಿಯಿಂದ ಹೊರಗಿಡಲಾಗಿದೆ. ಪೆಟ್ರೋಲಿಯಂ ಉತ್ಪನ್ನಗಳು ಜಿಎಸ್‌ಟಿ ಅಡಿಗೆ ಬರುತ್ತಿವೆಯಾದರೂ ಯಾವಾಗನಿಂದ ಇದು ಅನ್ವಯವಾಗಬೇಕು ಎಂಬುದು ಇನ್ನೂ ನಿರ್ಧಾರವಾಗಿಲ್ಲ . ಜಿಎಸ್‌ಟಿ ಅಡಿ ಪ್ರಸ್ತುತ 5-12-18-28 ನಾಲ್ಕು ಹಂತದ ತೆರಿಗೆಗಳು ಜಾರಿಗೆ ಬರಲಿವೆ. ಇವುಗಳಲ್ಲಿ ಶೇ. 50 ರಷ್ಟುಸರಕುಗಳು ಶೇ. 18ರ ತೆರಿಗೆ ವ್ಯಾಪ್ತಿಯಲ್ಲಿ ಬರುತ್ತವೆ ಎಂದರು.
ವಿಧೇಯಕದಲ್ಲಿ ಸ್ಪಷ್ಟತೆ ಇಲ್ಲ: ಜೆಡಿಎಸ್ ಸದಸ್ಯ ರಮೇಶ್ ಬಾಬು, ಜಿಎಸ್‌ಟಿಯಿಂದ ರಾಜ್ಯಗಳಿಗೆ ಬರುವ ಆದಾಯ ಕಡಿಮೆ ಆಗಲಿದೆ ಎಂದರು. ಈ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯಕ್ಕೆ ಶೇ.14 ರಷ್ಟುತೆರಿಗೆ ಹಣ ಬರಬೇಕು. ಒಂದು ವೇಳೆ ಪ್ರಾರಂಭದಲ್ಲಿ ಇಷ್ಟುಪ್ರಮಾಣದ ತೆರಿಗೆ ಸಂಗ್ರಹವಾಗದಿದ್ದರೆ ಕೇಂದ್ರ ಸರ್ಕಾರವೇ ಮುಂದಿನ 5 ವರ್ಷಗಳವರೆಗೆ ರಾಜ್ಯಕ್ಕಾಗುವ ನಷ್ಟಭರಿಸಬೇಕು ಎಂಬ ನಿಯಮವಿದೆ. ಹೀಗಾಗಿ ದೀರ್ಘ ಕಾಲದಲ್ಲಿ ರಾಜ್ಯಕ್ಕೆ ಜಿಎಸ್‌ಟಿಯಿಂದ ಅನುಕೂಲವಾಗಲಿದೆ. ಇನ್ನು ಜಿಎಸ್‌ಟಿ ವಿಧೇಯಕದ ಜತೆಗೆ ರಾಜ್ಯದಲ್ಲಿ ನಿಯಮಗಳನ್ನು ರೂಪಿಸಲಾಗುವುದು. ಆಗ ವಿಧೇಯಕದ ಬಗ್ಗೆ ಸ್ಪಷ್ಟತೆ ದೊರೆಯಲಿದೆ ಎಂದರು.
ಕೊಬ್ಬರಿ ಹಾಗೂ ಒಣ ದ್ರಾಕ್ಷಿಗೆ ಶೇ.2 ರಷ್ಟುಇದ್ದ ತೆರಿಗೆಯನ್ನು ರಾಜ್ಯ ಸರ್ಕಾರ ತೆಗೆದು ಹಾಕಿತ್ತು. ಇದೀಗ ಜಿಎಸ್‌ಟಿ ಅಡಿ ಶೇ. 5 ರಷ್ಟುತೆರಿಗೆ ವಿಧಿಸಲಿದೆ. ಈ ಬಗ್ಗೆ ಜಿಎಸ್‌ಟಿ ಕೌನ್ಸಿಲ್ ಗಮನಕ್ಕೆ ತರಲಾಗುವುದು ಎಂದು ಬಸನಗೌಡ ಪಾಟೀಲ್ ಅವರ ಪ್ರಶ್ನೆಗೆ ಸಿದ್ದರಾಮಯ್ಯ ಉತ್ತರಿಸಿದರು. ಜೆಡಿಎಸ್‌ನ ಮತ್ತೊಬ್ಬ ಸದಸ್ಯ ಟಿ.ಎ. ಶರವಣ, ಚಿನ್ನಕ್ಕೆ ಶೇ.1ರಷ್ಟುತೆರಿಗೆ ಇದ್ದದ್ದನ್ನು ಜಿಎಸ್‌ಟಿ ಅಡಿ ಶೇ.5ಕ್ಕೆ ಹೆಚ್ಚಿಸಲಾಗಿದೆ. ಇದನ್ನು ಶೇ.2ಕ್ಕೆ ಇಳಿಕೆ ಮಾಡಬೇಕು ಎಂದು ಒತ್ತಾಯಿಸಿದರು. ಈ ವೇಳೆ ಸಿದ್ದರಾಮಯ್ಯ, ನಮ್ಮಲ್ಲೊಬ್ಬ ಚಿನ್ನದ ವ್ಯಾಪಾರಿ ಇದ್ದಾರೆ. ತೆರಿಗೆ ಕಡಿಮೆ ಮಾಡಿ ಎಂದು ಕೇಂದ್ರಕ್ಕೆ ಹೇಳುತ್ತೇನೆ, ಕುಳಿತುಕೋ ಎಂದು ಹಾಸ್ಯಮಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.