
ಬೆಂಗಳೂರು(ನ.12): ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೇನು 6 ತಿಂಗಳು ಬಾಕಿ ಇದೆ. ಈಗಾಗಲೇ ರಾಜಕೀಯದಾಟ ಚುರುಕಾಗಿದೆ. ಚುನಾವಣೆ ಹತ್ತಿರವಾದಂತೆ ಅಲ್ಲಿಂದಿಲ್ಲಿಗೆ, ಇಲ್ಲಿಂದಲ್ಲಿಗೆ ನಾಯಕರ ಜಿಗಿತವೂ ಹೆಚ್ಚುತ್ತಿದೆ. ಬಹಳ ದಿನದಿಂದ ಜೆಡಿಎಸ್‌ನ ಬಂಡಾಯ ಶಾಸಕರು ಕಾಂಗ್ರೆಸ್ ಸೇರಲು ತುದಿಗಾಲಲ್ಲಿದ್ದಾರೆ. ಇತ್ತೀಚೆಗಷ್ಟೇ ಶಾಸಕರಾದ ಯೋಗೇಶ್ವರ್, ರಾಜೀವ್ ಬಿಜೆಪಿ ಸೇರಿದ್ದಾರೆ. ಅಂತೆಯೇ, ಇನ್ನಷ್ಟು ಜನ ಸ್ಥಾನ ಪಲ್ಲಟದ ಸುಳಿವು ನೀಡಿದ್ದಾರೆ. ರಾಜಕೀಯ ಜಿಗಿಜಿಗಿತದ ಲೇಟೆಸ್ಟ್ ಝಲಕ್ ಇಲ್ಲಿದೆ.
ಹಾಲಾಡಿ ಸದ್ಯದಲ್ಲೇ ಬಿಜೆಪಿಗೆ
ತಮ್ಮ ಮುಂದಿನ ರಾಜಕೀಯ ಹೆಜ್ಜೆಯ ಗೊಂದಲಕ್ಕೆ ತೆರೆ ಎಳೆದಿರುವ ಕುಂದಾಪುರದ ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ,ಶೀಘ್ರ ಬಿಜೆಪಿ ಸೇರುವುದಾಗಿ ಘೋಷಿಸಿದ್ದಾರೆ. ಬೆಂಬಲಿಗರು ಹೇಳಿದ್ದರಿಂದ ಬಿಜೆಪಿ ತೊರೆದೆ, ಅವರ ಅಭಿ ಮತದ ಪ್ರಕಾರ ಮತ್ತೆ ಬಿಜೆಪಿ ಸೇರುತ್ತಿದ್ದೇನೆ ಎಂದಿದ್ದಾರೆ.
ಕಾಂಗ್ರೆಸ್ ಬಗ್ಗೆ ಅತೃಪ್ತಿ: ಮಾಲಕರೆಡ್ಡಿ
ಕಾಂಗ್ರೆಸ್‌ನಲ್ಲಿ ಅಸಮಾಧಾನ ನಿಜ. ಅದನ್ನು ಹೇಳಿಕೊಳ್ಳಲು ಅವಕಾಶವೇ ಇಲ್ಲದಂತಾಗಿದೆ. 40 ವರ್ಷ ದಿಂದ ಕಾಂಗ್ರೆಸ್‌ನಲ್ಲಿದ್ದೇನೆ. ಹಾಗಂತ ನಾನು ಜೆಡಿಎಸ್ ಸೇರುತ್ತೇನೆ ಎಂಬುದೆಲ್ಲ ಊಹಾಪೋಹ ಎಂದಿದ್ದಾರೆ ಯಾದಗಿರಿಯ ಕಾಂಗ್ರೆಸ್ ಶಾಸಕ ಡಾ. ಎ.ಬಿ.ಮಾಲಕರೆಡ್ಡಿ.
2 ಪಕ್ಷಗಳು ಆಹ್ವಾನಿಸಿನೆ : ಶಿವರಾಜ್
ಕಾಂಗ್ರೆಸ್, ಬಿಜೆಪಿಯಿಂದ ಆಹ್ವಾನವಿದ್ದರೂ ಚುನಾವಣೆಯಲ್ಲಿ ಜೆಡಿಎಸ್ ನಿಂದಲೇ ಸ್ಪರ್ಧಿಸುತ್ತೇನೆ. ಪಕ್ಷವೂ ಈಗಾಗಲೇ ಬಿ.ಫಾರಂ ನೀಡುವ ಭರವಸೆ ಇತ್ತಿದೆ ಎಂದು ವಲಸೆ ವದಂತಿ ಕುರಿತು ರಾಯಚೂರು ನಗರ ಶಾಸಕ ಡಾ. ಶಿವರಾಜ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.
ಕೈ, ಬಿಜೆಪಿ ಶಾಸಕರಿಗೆ ಅತೃಪ್ತಿ ಇದೆ
ಕಾಂಗ್ರೆಸ್, ಬಿಜೆಪಿಯ ಹಲವು ಶಾಸಕರು ತಮ್ಮ ಪಕ್ಷದಲ್ಲಿ ಅಸಮಾಧಾನಗೊಂಡಿದ್ದು, ಕೆಲವರು ನೇರವಾಗಿ ತಮ್ಮ ಅತೃಪ್ತಿ ಹೊರಹಾಕುತ್ತಿದ್ದಾರೆ ಎನ್ನುವ ಮೂಲಕ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಪಕ್ಷಾಂತರ ಪರ್ವದ ಸುಳಿವಿತ್ತಿದ್ದಾರೆ.
ಅಸ್ನೋ'ಟಿಕರ್ ಜೆಡಿಎಸ್ ಸೇರ್ತಾರಾ?
ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಕಾರವಾರ ಮೂಲದ ಆನಂದ್ ಅಸ್ನೋಟಿಕರ್ ಜೆಡಿಎಸ್ ಸೇರುವ ಸುದ್ದಿ ಬಲವಾಗಿದೆ. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಕುಮಾರ ಸ್ವಾಮಿ, ಮಾಧ್ಯಮಗಳಲ್ಲಿ ವರದಿಯಾದದ್ದು ಗಮನಿಸಿದ್ದೇನೆಯೇ ಹೊರತು ಮಾತುಕತೆ ನಡೆಸಿಲ್ಲ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.