
ಬೆಂಗಳೂರು (ನ.24): ರಾಜ್ಯ ಸರ್ಕಾರ ವಿವಿಧ ಯೋಜನೆಗಳಿಗೆ ಇಲಾಖಾವಾರು ಕೋಟ್ಯಂತರ ರುಪಾಯಿ ಬಿಡುಗಡೆ ಮಾಡಿದ್ದರೂ ನಿಗದಿತ ಗುರಿ ಮುಟ್ಟುವಲ್ಲಿ ಸಮಾಜ ಕಲ್ಯಾಣ ಇಲಾಖೆ ಸೇರಿ ಹಲವು ಇಲಾಖೆಗಳು ಹಿಂದೆ ಬಿದ್ದಿರುವುದು ಇದೀಗ ಬೆಳಕಿಗೆ ಬಂದಿದೆ.
ಬಿಡುಗಡೆಯಾಗಿರುವ ಹಣವನ್ನು ಖರ್ಚು ಮಾಡುವಲ್ಲಿ ಹಲವು ಇಲಾಖೆಗಳು ಹಿನ್ನಡೆ ಅನುಭವಿಸಿದ್ದರೆ, ಹಣವನ್ನು ಖರ್ಚು ಮಾಡಿರುವ ಕೆಲ ಇಲಾಖೆಗಳು ಅರ್ಧ ವರ್ಷ ಕಳೆದರೂ ಭೌತಿಕ ಪ್ರಗತಿ ಸಾಧಿಸುವಲ್ಲಿ ವಿಫಲವಾಗಿವೆ. ಇದರಿಂದಾಗಿ ರಾಜ್ಯ ಸರ್ಕಾರ ಘೋಷಿಸಿದ್ದ ಯೋಜನೆಗಳು ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಸಾಧಿಸದಿರುವುದು ಬಹಿರಂಗವಾಗಿದೆ.
ಇಲಾಖೆಗಳ ಕಾರ್ಯವೈಖರಿ ಮತ್ತು ಗುರಿ ಮುಟ್ಟುವಲ್ಲಿ ಹಿನ್ನಡೆ ಸಾಧಿಸಿರುವ ಕುರಿತು ಕರ್ನಾಟಕ ಪ್ರಗತಿ ಕಾರ್ಯಕ್ರಮಗಳ ಪರಿಶೀಲನಾ (ಕೆಡಿಪಿ) ಸಭೆಯಲ್ಲಿ ಮುಖ್ಯ ಕಾರ್ಯದರ್ಶಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಸಮಾಜ ಕಲ್ಯಾಣ, ನಗರಾಭಿವೃದ್ಧಿ, ಕನ್ನಡ ಸಂಸ್ಕೃತಿ ಮೂಲ ಸೌಕರ್ಯ, ಪಶು ಸಂಗೋಪನೆ, ಸಣ್ಣ ನೀರಾವರಿ ಸೇರಿದಂತೆ ಒಟ್ಟು 20 ಇಲಾಖೆಗಳು ಶೇ.50ಕ್ಕಿಂತಲೂ ಕಡಿಮೆ ಪ್ರಗತಿ ಸಾಧಿಸಿರುವುದು ವರದಿಯಿಂದ ಗೊತ್ತಾಗಿದೆ. ವಸತಿ ಮತ್ತು ಸಹಕಾರ ಇಲಾಖೆ ಶೇ.90ಕ್ಕಿಂತಲೂ ಹೆಚ್ಚಿನ ಪ್ರಗತಿ ಸಾಧಿಸಿದ್ದರೆ, ಪ್ರಾಥಮಿಕ, ಪ್ರೌಢಶಿಕ್ಷಣ, ಕಂದಾಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಶೇ.75ರಿಂದ 90ರಷ್ಟುಪ್ರಗತಿ ಸಾಧಿಸಿದೆ.ಅದೇ ರೀತಿ, ಸಾರಿಗೆ, ಉನ್ನತ ಶಿಕ್ಷಣ, ಹಿಂದುಳಿದ ವರ್ಗಗಳ ಇಲಾಖೆ, ಕೃಷಿ, ಲೋಕೋಪಯೋಗಿ, ಆರೋಗ್ಯ, ಕುಟುಂಬ ಕಲ್ಯಾಣ, ಮಹಿಳೆ, ಮಕ್ಕಳ ಅಭಿವೃದ್ಧಿ, ಯೋಜನೆ ಮತ್ತು ಜಲಸಂಪನ್ಮೂಲ ಇಲಾಖೆ ಶೇ. 50ರಿಂದ 75ರಷ್ಟುಪ್ರಗತಿ ಸಾಧಿಸಿರುವುದು ವರದಿಯಿಂದ ಗೊತ್ತಾಗಿದೆ.
ಸಮಾಜ ಕಲ್ಯಾಣ ಇಲಾಖೆಗೆ ಪ್ರಿ ಮೆಟ್ರಿಕ್ ವಿದ್ಯಾರ್ಥಿ ವೇತನ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ವಿತರಿಸಲು ಹಂಚಿಕೆಯಾಗಿದ್ದ ರೂ.364.59 ಕೋಟಿಯಲ್ಲಿ ರೂ.251.12 ಕೋಟಿ ಬಿಡುಗಡೆ ಆಗಿದೆ.
ಇದರಲ್ಲಿ ಕೇವಲ ಶೇ.16ರಷ್ಟುಪ್ರಗತಿ ಆಗಿದೆ. ಅಲ್ಲದೆ, 9,84,000 ವಿದ್ಯಾಥಿರ್ಗಳಿಗೆ ವಿದ್ಯಾರ್ಥಿ ವೇತನ ವಿತರಿಸಬೇಕಿದ್ದ ಇಲಾಖೆ, 98,233 ವಿದ್ಯಾರ್ಥಿಗಳಿಗಷ್ಟೇ ವಿದ್ಯಾರ್ಥಿ ವೇತನ ವಿತರಿಸಿರುವುದು ವರದಿಯಿಂದ ಗೊತ್ತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.