ಸೈಬರ್ ಅಟ್ಯಾಕ್: ದೇಶಾದ್ಯಂತ ಎಟಿಎಂಗಳು ಬಂದ್?

By Suvarna Web DeskFirst Published May 15, 2017, 1:07 PM IST
Highlights

ವೈರಸ್ ಕೋಡ್ ಮುಚ್ಚಿಟ್ಟಿರುವ ಇಮೇಲ್ ಅಟ್ಯಾಚ್ಮೆಂಟ್ ಮೂಲಕ ಇದು ಹರಡುತ್ತದೆ. ದುಷ್ಕರ್ಮಿಗಳು ಅನುಮಾನ ಬಾರದ ರೀತಿಯಲ್ಲಿ ಅಟ್ಯಾಚ್ಮೆಂಟ್'ವೊಂದಿಗೆ ಇಮೇಲ್ ಕಳುಹಿಸಿರುತ್ತಾರೆ. ಜನರು ಹಿಂದೆ ಮುಂದೆ ನೋಡದೇ ಆ ಇಮೇಲ್ ಓಪನ್ ಮಾಡಿ ಅಟ್ಯಾಚ್ಮೆಂಟ್ ಡೌನ್'ಲೋಡ್ ಮಾಡಿಕೊಂಡರೆ ಅಲ್ಲಿಗೆ ನಿಮ್ಮ ಕಂಪ್ಯೂಟರ್ ನಿಮ್ಮ ಕೈತಪ್ಪಿದಂತೆಯೇ.

ನವದೆಹಲಿ(ಮೇ 15): ವಾನ್ನಾ ಕ್ರೈ ಎಂಬ ರ್ಯಾನ್ಸಮ್'ವೇರ್ ವೈರಸ್ ದಾಳಿ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ಈ ವೈರಸ್ ದಾಳಿಯಿಂದ ಎಟಿಎಂಗಳ ಸುರಕ್ಷತೆ ಬಗ್ಗೆ ಅನುಮಾನದ ನೆರಳು ಬಿದ್ದಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕೇಂದ್ರ ಸರಕಾರವು ದೇಶಾದ್ಯಂತ ಅನೇಕ ಎಟಿಎಂಗಳನ್ನು ತಾತ್ಕಾಲಿಕವಾಗಿ ಮುಚ್ಚಿಸುತ್ತಿದೆ. ಆದರೆ, ಆರ್'ಬಿಐನಿಂದ ನೇರವಾಗಿ ಎಟಿಎಂಗಳನ್ನು ಮುಚ್ಚುವ ಆದೇಶ ಯಾವುದೇ ಬ್ಯಾಂಕುಗಳಿಗೆ ಹೋಗಿಲ್ಲ. ಮುಂಜಾಗ್ರತೆಯಾಗಿ ಎಟಿಎಂಗಳಲ್ಲಿ ಕೆಲ ಸಾಫ್ಟ್'ವೇರ್ ಅಪ್'ಗ್ರೇಡ್ ಮಾಡಬೇಕೆಂದು ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕುಗಳು ಆ ಸಾಫ್ಟ್'ವೇರ್ ಅಪ್'ಡೇಟ್ ಆಗುವವರೆಗೂ ಎಟಿಎಂಗಳನ್ನು ಮುಚ್ಚಲಾಗಿದೆ ಎನ್ನಲಾಗುತ್ತಿದೆ.

ಏನಿದು ರ್ಯಾನ್ಸಮ್'ವೇರ್?
ವಾನ್ನಾ ಕ್ರೈ ಎಂಬ ಹೊಸ ಮಾಲ್'ವೇರ್ ಎಂಬುದು ಹೊಸ ಆನ್'ಲೈನ್ ವೈರಸ್ ಆಗಿದೆ. ಮೊನ್ನೆಯಷ್ಟೇ ವಿಶ್ವದ ನೂರಕ್ಕೂ ಹೆಚ್ಚು ದೇಶಗಳ ಸೈಬರ್ ವ್ಯವಸ್ಥೆಯ ಮೇಲೆ ಈ ಮಾಲ್'ವೇರ್ ದಾಳಿ ನಡೆಸಿದೆ. ಅಮೆರಿಕದ ರಾಷ್ಟ್ರೀಯ ಭದ್ರತಾ ಸಂಸ್ಥೆಯಿಂದ ಕದ್ದ ಕೆಲವು ಕೋಡ್'ಗಳನ್ನು ಬಳಸಿ ದುಷ್ಕರ್ಮಿಗಳು ಶುಕ್ರವಾರ ಜಗತ್ತಿನಾದ್ಯಂತ ಕಂಪ್ಯೂಟರ್'ಗಳನ್ನು ಹ್ಯಾಕ್ ಮಾಡಿದ್ದಾರೆ.

ವೈರಸ್ ಕೋಡ್ ಮುಚ್ಚಿಟ್ಟಿರುವ ಇಮೇಲ್ ಅಟ್ಯಾಚ್ಮೆಂಟ್ ಮೂಲಕ ಇದು ಹರಡುತ್ತದೆ. ದುಷ್ಕರ್ಮಿಗಳು ಅನುಮಾನ ಬಾರದ ರೀತಿಯಲ್ಲಿ ಅಟ್ಯಾಚ್ಮೆಂಟ್'ವೊಂದಿಗೆ ಇಮೇಲ್ ಕಳುಹಿಸಿರುತ್ತಾರೆ. ಜನರು ಹಿಂದೆ ಮುಂದೆ ನೋಡದೇ ಆ ಇಮೇಲ್ ಓಪನ್ ಮಾಡಿ ಅಟ್ಯಾಚ್ಮೆಂಟ್ ಡೌನ್'ಲೋಡ್ ಮಾಡಿಕೊಂಡರೆ ಅಲ್ಲಿಗೆ ನಿಮ್ಮ ಕಂಪ್ಯೂಟರ್ ನಿಮ್ಮ ಕೈತಪ್ಪಿದಂತೆಯೇ. ಅಟ್ಯಾಚ್ಮೆಂಟ್ ಮೂಲಕ ಕಂಪ್ಯೂಟರ್ ಸಿಸ್ಟಂನ ಒಳ ಸೇರುವ ಈ ತಂತ್ರಾಂಶವು ಕಂಪ್ಯೂಟರ್'ನ ಆಪರೇಟಿಂಗ್ ಸಿಸ್ಟಂನ ಕೋಡ್'ನಲ್ಲಿ ಸ್ವಲ್ಪ ಬದಲಾವಣೆ ಮಾಡುತ್ತದೆ. ಕಂಪ್ಯೂಟರ್'ನಲ್ಲಿರುವ ಮಹತ್ವದ ಐಟಂಗಳಿದ್ದರೆ ದುಷ್ಕರ್ಮಿಗಳು ಅವುಗಳನ್ನು ಎನ್'ಕ್ರಿಪ್ಟ್ ಮಾಡುತ್ತಾರೆ. ಆಗ ಆ ಐಟಂಗಳು ಅಸಲಿ ಮಾಲಿಕರಿಂದ ಕಣ್ಮರೆಯಾಗುತ್ತದೆ. ನಿಮಗೆ ಆ ಡೇಟಾ ಬೇಕೆಂದರೆ ಇಂತಿಷ್ಟು ದುಡ್ಡು ಕೊಡಿ ಎಂದು ದುಷ್ಕರ್ಮಿಗಳು ದುಂಬಾಲು ಬಿದ್ದು ಕಂಪ್ಯೂಟರ್'ಗೆ ಮೆಸೇಜ್ ಹಾಕುತ್ತಾರೆ. ದುಡ್ಡು ಕೊಡಲಿಲ್ಲವೆಂದರೆ ಆ ಡೇಟಾವೆಲ್ಲವನ್ನೂ ಅಳಿಸಿಹಾಕುತ್ತೇವೆಂದು ಬೆದರಿಕೆ ಹಾಕುತ್ತಾರೆ. ಹಣದ ವಹಿವಾಟಿಗೆ ಸೈಬರ್ ಕ್ರಿಮಿನಲ್'ಗಳು ಬಿಟ್ ಕಾಯಿನ್ ವ್ಯವಸ್ಥೆಯನ್ನು ಉಪಯೋಗಿಸುತ್ತಾರೆ.

ದೇಶಾದ್ಯಂತ ಒಟ್ಟು 2 ಲಕ್ಷಕ್ಕೂ ಹೆಚ್ಚು ಎಟಿಎಂಗಳಿವೆ. ಹಳೆಯ ಎಟಿಎಂಗಳಲ್ಲಿ ವಿಂಡೋಸ್ ಎಕ್ಸ್'ಪಿ ತಂತ್ರಾಂಶವೇ ಇದೆ. ಈ ತಂತ್ರಾಂಶವು ಸೈಬರ್ ದಾಳಿಗೆ ಸುಲಭ ತುತ್ತಾಗಿದೆ ಎಂಬ ಮಾತು ತಜ್ಞರಿಂದ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಮೈಕ್ರೋಸಾಫ್ಟ್ ಸಂಸ್ಥೆಯು ತನ್ನ ತಂತ್ರಾಂಶದಲ್ಲಿ ಸ್ವಲ್ಪ ಅಪ್'ಗ್ರೆಡೇಶನ್ ಮಾಡುತ್ತಿದೆ.

ಕಳೆದ ವರ್ಷ ದೇಶದಲ್ಲಿ ಇಂಥದ್ದೇ ಮಾಲ್'ವೇರ್'ವೊಂದರ ದಾಳಿಯಾಗಿ ಲಕ್ಷಾಂತರ ಎಟಿಎಂ ಕಾರ್ಡ್'ಗಳು ಅಪಾಯಕ್ಕೆ ಸಿಲುಕಿದ್ದವು. 2016ರ ಮೇ, ಜೂನ್ ಮತ್ತು ಜುಲೈ ತಿಂಗಳಲ್ಲಿ ಹಿಟಾಚಿ ಸಂಸ್ಥೆಯ ಎಟಿಎಂ ಮೆಷೀನ್'ಗಳಲ್ಲಿ ಬಳಕೆ ಮಾಡಿದ್ದ ಎಟಿಎಂ ಕಾರ್ಡ್'ಗಳು ಸೈಬರ್ ದಾಳಿಗೆ ತುತ್ತಾಗಿದ್ದವು.

click me!