ಅಟಲ್‌ ಉದಾಹರಿಸಿ ಮತ್ತೆ ಮೋದಿಗೆ ಸಿಂಗ್‌ ಪತ್ರ

By Web DeskFirst Published Jun 28, 2019, 9:01 AM IST
Highlights

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತ್ತೊಮ್ಮೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಯಾವ ವಿಚಾರ ಪ್ರಸ್ತಾಪಿಸಿದ್ದಾರೆ ಇಲ್ಲಿದೆ ಮಾಹಿತಿ

ನವದೆಹಲಿ [ಜೂ.28] : ತಮಗೆ ನೀಡಲಾಗಿರುವ ಸಿಬ್ಬಂದಿ ಸಂಖ್ಯೆಯನ್ನು ಕಡಿತ ಮಾಡದಂತೆ ಮಾಜಿ ಪ್ರಧಾನಿ ಮನಮೋಹನ್‌ಸಿಂಗ್‌ ಕೇಂದ್ರ ಸರ್ಕಾರಕ್ಕೆ ಮತ್ತೆ ಪತ್ರ ಬರೆದಿದ್ದಾರೆ. ಇದಕ್ಕೆ ತಮ್ಮ ಯುಪಿಎ ಸರ್ಕಾರ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿಗೆ ನೀಡಿದ್ದ ಗೌರವವನ್ನು ಸಿಂಗ್‌ ಉದಾಹರಿಸಿದ್ದಾರೆ.

ಮಾಜಿ ಪ್ರಧಾನಿಗಳಿಗೆ 14 ಸಿಬ್ಬಂದಿಗಳ ಸೇವೆ ಒದಗಿಸಬೇಕು. ನಿವೃತ್ತಿಯ 5 ವರ್ಷ ಬಳಿಕ ಆ ಸಂಖ್ಯೆಯನ್ನು 5ಕ್ಕೆ ಇಳಿಸಬೇಕು ಎಂದು ನರಸಿಂಹರಾವ್‌ ಪ್ರಧಾನಿಯಾಗಿದ್ದಾಗ ನಿರ್ಧರಿಸಲಾಗಿತ್ತು. ಅದರಂತೆ ಕಳೆದ ಮೇ 25ರಂದು ಮಾಜಿ ಪ್ರಧಾನಿ ಸಿಂಗ್‌ಗೆ ನೀಡಿದ್ದ ಸಿಬ್ಬಂದಿ ಸಂಖ್ಯೆಯನ್ನು 5ಕ್ಕೆ ಇಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸಿಬ್ಬಂದಿ ಸಂಖ್ಯೆ ಕಡಿತ ಮಾಡದಂತೆ ಸಿಂಗ್‌ ಪ್ರಧಾನಿ ಕಾರ್ಯಾಲಯಕ್ಕೆ ಪತ್ರ ಬರೆದಿದ್ದರು. ಆದರೆ ಈ ಮನವಿಯನ್ನು ತಿರಸ್ಕರಿಸಲಾಗಿದೆ ಎಂದು ಪ್ರಧಾನಿ ಕಾರ್ಯಾಲಯ ಮೇ 26 ರಂದು ಸ್ಪಷ್ಟಪಡಿಸಿತ್ತು.

ಈ ಹಿನ್ನೆಲೆಯಲ್ಲಿ ಇದೀಗ ಮತ್ತೊಮ್ಮೆ ಪ್ರಧಾನಿ ಕಾರ್ಯಾಲಯಕ್ಕೆ ಪತ್ರ ಬರೆದಿರುವ ಸಿಂಗ್‌, ಯುಪಿಎ ಸರ್ಕಾರದ ಅವಧಿಯಲ್ಲಿ ಅಟಲ್‌ ಅವರ ಬೇಡಿಕೆಯಂತೆ ಅವರಿಗೆ 12 ಸಿಬ್ಬಂದಿಗಳನ್ನು ಸರ್ಕಾರದ ಪರವಾಗಿ ಒದಗಿಸಲಾಗಿತ್ತು. ಅದೇ ರೀತಿಯ ಕೃತಜ್ಞತೆಯನ್ನು ಸರ್ಕಾರ ತಮಗೂ ತೋರಬೇಕು ಎಂದು ಸಿಂಗ್‌ ಕೋರಿದ್ದಾರೆ.

click me!