
ಬೆಂಗಳೂರು (ಜೂ. 28): ಕರ್ನಾಟಕಕ್ಕೆ ತನ್ನದೇ ಬಾವುಟ ಹೊಂದುವ ಉದ್ದೇಶದಿಂದ ರಾಜ್ಯ ಸರ್ಕಾರ ಕಳುಹಿಸಿರುವ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಬೇಕು ಎಂದು ಕಾಂಗ್ರೆಸ್ ಸಂಸದ ಜಿ.ಸಿ. ಚಂದ್ರಶೇಖರ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಕರ್ನಾಟಕಕ್ಕೆ ತನ್ನದೇ ಬಾವುಟ ಹೊಂದುವ ಸಂಬಂಧ ರಾಜ್ಯ ಸರ್ಕಾರ ಕೇಂದ್ರ ಹಣಕಾಸು ಇಲಾಖೆಗೆ ಸಲ್ಲಿಸಿರುವ ಪ್ರಸ್ತಾವನೆ ಬಹಳ ದಿನಗಳಿಂದ ಅನುಮೋದನೆ ಸಿಗದೆ ಉಳಿದುಕೊಂಡಿದೆ. 2018ರ ಮಾರ್ಚ್ ಕರ್ನಾಟಕ ಈ ಸಂಬಂಧ ಪ್ರಸ್ತಾವನೆ ಸಲ್ಲಿಸಿತ್ತು.
ಆ ವೇಳೆಗೆ ಕರ್ನಾಟಕ ವಿಧಾನಸಭಾ ಚುನಾವಣೆ ಎದುರಾದ ಹಿನ್ನೆಲೆಯಲ್ಲಿ ಹಣಕಾಸು ಇಲಾಖೆ ಪ್ರಸ್ತಾವನೆ ತಡೆಹಿಡಿಯಲಾಗಿದೆ ಎಂದು ಹೇಳಿತ್ತು. ಆದರೆ, ಚುನಾವಣೆ ಮುಗಿದು ಒಂದು ವರ್ಷವಾದರೂ ಪ್ರಸ್ತಾವನೆಯನ್ನು ಅನುಮೋದಿಸುವ ವಿಚಾರದಲ್ಲಿ ಯಾವುದೇ ಕ್ರಮ ಆಗಿಲ್ಲ ಎಂದು ಸದನದ ಗಮನ ಸೆಳೆದರು.
ಕನ್ನಡದಲ್ಲಿ ಮಾತು:
ಇನ್ನು ಐಬಿಪಿಎಸ್ ಪರೀಕ್ಷೆಯಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಕನ್ನಡದಲ್ಲೇ ಮಾತನಾಡಿದ ಜಿ.ಸಿ.ಚಂದ್ರಶೇಖರ್ ಅವರು, ಕೇಂದ್ರ ಸರ್ಕಾರದ ನೀತಿಯಿಂದಾಗಿ ಕನ್ನಡಿಗರೂ ಸೇರಿದಂತೆ ನಾನಾ ರಾಜ್ಯಗಳಲ್ಲಿ ಸ್ಥಳೀಯರಿಗೆ ಬ್ಯಾಂಕಿಂಗ್ ಪರೀಕ್ಷೆಯಲ್ಲಿ ಅವಕಾಶ ವಂಚನೆಯಾಗುತ್ತಿದೆ.
ಇದನ್ನು ಸರಿಪಡಿಸಿ ಮೊದಲಿನಂತೆ ಬ್ಯಾಂಕಿಂಗ್ ಕ್ಷೇತ್ರದ ನೇಮಕಾತಿಗೆ ಕನ್ನಡವೂ ಸೇರಿದಂತೆ ಆಯಾ ರಾಜ್ಯ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ಚಂದ್ರಶೇಖರ್ ಅವರ ಮಾತು ಮುಗಿದ ಬಳಿಕ ರಾಜ್ಯಸಭೆ ಅಧ್ಯಕ್ಷ ಪೀಠದಲ್ಲಿದ್ದ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಕೂಡ ಕುಳಿತುಕೊಳ್ಳಿ ಎಂದು ಕನ್ನಡದಲ್ಲೆ ಹೇಳಿದರು.
ಬಳಿಕ ಮಾತನಾಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಜಿ.ಸಿ.ಚಂದ್ರಶೇಖರ್ ಅವರ ಕಳಕಳಿ ಅರ್ಥವಾಗಿದೆ. ಇದೇ ವಿಚಾರವಾಗಿ ಕರ್ನಾಟಕ ಸಂಸದರು ಕೂಡ ನನ್ನನ್ನು ಭೇಟಿ ಮಾಡಿದ್ದರು. ಈ ವಿಷಯ ಎಲ್ಲ ರಾಜ್ಯಗಳಿಗೂ ಸಂಬಂಧಿಸಿದ್ದಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಲಾಗುವುದು, ಪೂರ್ಣ ಮಾಹಿತಿ ಪಡೆದು ಸಭೆಗೆ ಉತ್ತರ ನೀಡುವುದಾಗಿ ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.