ವಾಚ್‌ಮ್ಯಾನ್‌ಗೆ ಮಂಗಳೂರು ಮೇಯರ್ ಕರಾಟೆ ಪಂಚ್!

By Suvarna Web Desk  |  First Published Oct 28, 2017, 6:00 PM IST

ಮಕ್ಕಳ ಜಗಳದಲ್ಲಿ ಮಧ್ಯಪ್ರವೇಶಿಸಿ ಹಲ್ಲೆ: ದೂರು

ಆರೋಪ ಸುಳ್ಳು, ಪ್ರತಿ ದೂರು ಕೊಡುವೆ: ಮೇಯರ್


ಮಂಗಳೂರು: ಸ್ವತಃ ಕರಾಟೆ ಪಟುವಾಗಿರುವ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಕವಿತಾ ಸನಿಲ್ ಅವರು ತಾವು ವಾಸಿಸುವ ಫ್ಲ್ಯಾಟ್‌ನ ವಾಚ್‌ಮ್ಯಾನ್ ಕುಟುಂಬದ ಮೇಲೆಯೇ ಕರಾಟೆ ಪ್ರಯೋಗ ಮಾಡಿದ ಆರೋಪ ಎದುರಿಸುತ್ತಿದ್ದು, ಈ ಸಂಬಂಧ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಘಟನೆಗೆ ಸಂಬಂಧಿಸಿ ವಾಚ್‌ಮ್ಯಾನ್ ಕುಟುಂಬ ಶುಕ್ರವಾರ ನಗರದ ಮಹಿಳಾ ಪೊಲೀಸ್ ಠಾಣೆಗೆ ಮೇಯರ್ ವಿರುದ್ಧ ದೂರು ಕೂಡ ನೀಡಿದೆ. ದೀಪಾವಳಿ ಹಬ್ಬದ ವೇಳೆ ಪಟಾಕಿ ಸಿಡಿಸುವ ವಿಚಾರದಲ್ಲಿ ಮಕ್ಕಳ ಜಗಳದಲ್ಲಿ ಮಧ್ಯಪ್ರವೇಶಿಸಿದ ಮೇಯರ್ ಕವಿತಾ ಸನಿಲ್, ಫ್ಲ್ಯಾಟ್‌ನ ವಾಚ್ ಮ್ಯಾನ್‌ನ ಆರು ವರ್ಷದ ಮಗಳನ್ನು ಎತ್ತಿ ಬಿಸಾಡಿ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Tap to resize

Latest Videos

ಆಗ ಇದನ್ನು ತಡೆಯಲು ಬಂದ ವಾಚ್‌ಮ್ಯಾನ್‌ನ ಪತ್ನಿಯ ಮೇಲೂ ಅವರು ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ. ಅಲ್ಲದೆ ವಾಚ್‌ಮ್ಯಾನ್ ಕುಟುಂಬಕ್ಕೆ ಬೆದರಿಕೆ ಕೂಡ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಕುರಿತು ಸಂಜೆ ಸುದ್ದಿಗೋಷ್ಠಿ ನಡೆಸಿದ ಮೇಯರ್ ಕವಿತಾ ಸನಿಲ್, ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ. ನಾನು ಮಗುವನ್ನು ಎತ್ತಿ ಬಿಸಾಡಿಲ್ಲ. ನನ್ನ ವಿರುದ್ಧದ ಆರೋಪಗಳೆಲ್ಲ ಸುಳ್ಳು, ವಾಚ್‌ಮ್ಯಾನ್ ಕುಟುಂಬದ ವಿರುದ್ಧವೇ ಪ್ರತಿ ದೂರು ನೀಡುವುದಾಗಿ ಅವರು ಸ್ಪಷ್ಟನೆ ನೀಡಿದ್ದಾರೆ.

 

click me!