
ಬೆಂಗಳೂರು : ಈ ತಿಂಗಳಾಂತ್ಯಕ್ಕೆ ಮತ್ತೆ ರಾಜ್ಯ ಪೊಲೀಸ್ ಇಲಾಖೆಯ ಪ್ರಮುಖ ಅಧಿಕಾರಿಗಳ ಸ್ಥಾನ ಪಲ್ಲಟವಾಗುವ ಸಾಧ್ಯತೆಗಳಿದ್ದು, ಡಿಜಿಪಿ ಹುದ್ದೆಗೆ ಹಿರಿಯ ಐಪಿಎಸ್ ಅಧಿಕಾರಿ ಪ್ರವೀಣ್ ಸೂದ್ ಮುಂಬಡ್ತಿ ಪಡೆಯಲಿದ್ದಾರೆ.
ಪ್ರಸ್ತುತ ರಾಜ್ಯದಲ್ಲಿ 6 ಡಿಜಿಪಿ ಹುದ್ದೆಗಳಿದ್ದು, ಇದರಲ್ಲಿ ರಾಜ್ಯಪೊಲೀಸ್ ಮಹಾನಿರ್ದೇಶಕ ಹುದ್ದೆಯೂ ಕೂಡ ಸೇರಿದೆ. ಡಿಜಿಪಿ ಹುದ್ದೆಯಿಂದ ಆರ್.ಕೆ.ದತ್ತಾ ಅವರು ಅ.31ಕ್ಕೆ ನಿವೃತ್ತಿ ಹೊಂದಲಿದ್ದು, ಎಡಿಜಿಪಿಯಾಗಿರುವ ಪ್ರವೀಣ್ ಸೂದ್ ಅವರು ಡಿಜಿಪಿಯಾಗಿ ಮುಂಬಡ್ತಿ ಹೊಂದಲಿದ್ದಾರೆ.
ಡಿಜಿಪಿ ರೂಪಕ್ ಕುಮಾರ್ ದತ್ತಾ ಅವರ ನಿವೃತ್ತಿ ಹಿನ್ನೆಲೆಯಲ್ಲಿ ಖಾಲಿಯಾಗಲಿರುವ ಡಿಜಿಪಿ ಸ್ಥಾನಕ್ಕೆ ಪ್ರವೀಣ್ ಸೂದ್ ಅವರು ಮುಂಬಡ್ತಿ ಪಡೆಯಲಿದ್ದು, ಪೊಲೀಸ್ ಇತಿಹಾಸದಲ್ಲೇ ಸುದೀರ್ಘ ಕಾಲ ಡಿಜಿಪಿ ಹುದ್ದೆಯಲ್ಲಿ ಸೇವೆ ಸಲ್ಲಿಸಿದ ಕೀರ್ತಿಗೂ ಅವರು ಭಾಜನರಾಗಲಿದ್ದಾರೆ.
1985ನೇ ಸಾಲಿನ ಐಪಿಎಸ್ ಅಧಿಕಾರಿ ಆಗಿರುವ ಸೂದ್ ಅವರು, 2024ಕ್ಕೆ ಸೇವೆಯಿಂದ ನಿವೃತ್ತರಾಗಲಿದ್ದಾರೆ. ಇನ್ನು ಡಿಜಿ-ಐಜಿ ಸ್ಥಾನಕ್ಕೆ ಹಿರಿಯ ಅಧಿಕಾರಿ ಗಳಾದ ನೀಲಮಣಿ, ಸಿ.ಎಚ್.ಕಿಶೋರ್ ಚಂದ್ರ, ಎಂ.ಎನ್.ರೆಡ್ಡಿ ಅವರ ಮಧ್ಯೆ ತೀವ್ರ ಪೈಪೋಟಿ ನಡೆದಿದ್ದು, ಅಂತಿಮವಾಗಿ ಒಬ್ಬರ ಆಯ್ಕೆ ನಡೆಯಲಿದೆ.
ಆದರೆ ಕಿಶೋರ್ ಚಂದ್ರ ಅಥವಾ ರೆಡ್ಡಿ ಅವರಿಗೆ ಹುದ್ದೆ ಒಲಿದರೆ, ಅವರಿಂದ ತೆರವಾಗಲಿರುವ ಸಿಐಡಿ ಮತ್ತು ಎಸಿಬಿ ಮುಖ್ಯಸ್ಥ ಸ್ಥಾನಕ್ಕೆ ಮತ್ತೊಬ್ಬರು ನೇಮಕವಾಗಲಿದ್ದಾರೆ. ಆದರೆ ಡಿಜಿ-ಐಜಿ ಹುದ್ದೆ ತಪ್ಪಿದ ಕಾರಣಕ್ಕೆ ಬೇಸರಗೊಂಡು ಕೇಂದ್ರ ಸೇವೆಗೆ ನೀಲಮಣಿ ಅವರು ಏನಾದರೂ ಮರಳಿದರೆ ಆಗ ಮತ್ತೊಂದು ಡಿಜಿಪಿ ಹುದ್ದೆ ಖಾಲಿಯಾಗಲಿದೆ.
ಈ ಸ್ಥಾನಕ್ಕೆ ಸೇವಾ ಹಿರಿತನ ಆಧಾರದಡಿ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಆಗಿರುವ ಪಿ.ಕೆ.ಗರ್ಗ್ ಮುಂಬಡ್ತಿ ಪಡೆಯಲಿದ್ದಾರೆ. ಹೀಗಾಗಿ ಅಪರಾಧ ತನಿಖಾ ದಳ (ಸಿಐಡಿ) ಅಥವಾ ಕಾರಾಗೃಹ ಇಲಾಖೆ ಮುಖ್ಯಸ್ಥ ಹುದ್ದೆಯು ಪ್ರವೀಣ್ ಸೂದ್ ಅವರಿಗೆ ಸಿಗುವ ಸಾಧ್ಯತೆಗಳಿವೆ ಎಂದು ಮೂಲಗಳು ಮಾಹಿತಿ ನೀಡಿವೆ. ಪ್ರಸುತ್ತ ಕಾರಾಗೃಹ ಮುಖ್ಯಸ್ಥರಾಗಿರುವ ಎನ್.ಎಸ್.ಮೇಘರಿಕ್ ತಾಂತ್ರಿಕ ವಿಭಾಗಕ್ಕೆ ನಿಯೋಜನೆಗೊಳ್ಳಲಿದ್ದಾರೆ. ಚುನಾವಣೆಗೆ ಕಾರಣಕ್ಕೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಸ್ಥಾನದಿಂದ ಅಲೋಕ್ ಮೋಹನ್ ಅವರನ್ನು ಬದಲಾಯಿಸಲು ಸಹ ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ.
ಬೆಳಗಾವಿಗೆ ನೂತನ ಆಯುಕ್ತ: ಬೆಳಗಾವಿ ಆಯುಕ್ತರಾಗಿರುವ ಪಿ.ಕೃಷ್ಣಭಟ್ ಅವರು ಸಹ ಇದೇ ತಿಂಗಳಾಂತ್ಯಕ್ಕೆ ನಿವೃತ್ತ ಹೊಂದಲಿದ್ದು, ಅವರಿಂದ ತೆರವಾಗುವ ಸ್ಥಾನಕ್ಕೆ ಕೆಲವು ಅಧಿಕಾರಿಗಳು ಪ್ರಯತ್ನಿಸಿದ್ದಾರೆ. ಬೆಳಗಾವಿ ಜಿಲ್ಲೆ ರಾಜಕಾರಣಿಗಳ ಮೂಲಕ ಹುದ್ದೆಗೆ ಅಧಿಕಾರಿಗಳು ಲಾಬಿ ನಡೆಸಿದ್ದು, ಈ ಹುದ್ದೆಗೆ ಸಹ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡೇ ಆಯ್ಕೆ ನಡೆಯಲಿದೆ ಎಂದು ಗೊತ್ತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.