
ಮಂಗಳೂರು(ಫೆ.25): ಕೇರಳ ಸಿಎಂ ಪಿಣರಾಯಿ ವಿಜಯನ್ ಮಂಗಳೂರಿಗೆ ಬರುವುದನ್ನು ವಿರೋಧಿಸಿ ಸಂಘಪರಿವಾರ ಕರೆ ನೀಡಿರುವ ಬಂದ್ ತೀವ್ರ ಸ್ವರೂಪ ಪಡೆದುಕೊಂಡಿದೆ. ಜಿಲ್ಲೆಯ ಖಾಸಗಿ ಬಸ್ ಸಂಚಾರ ಬಹುತೇಕ ಸ್ಥಗಿತಗೊಂಡಿದ್ದು , ವಿರಳ ಸಂಖ್ಯೆಯಲ್ಲಿ ಕೆ ಎಸ್ ಆರ್ ಟಿ ಸಿ, ಖಾಸಗಿ ಬಸ್ ಗಳ ಸಂಚಾರ ನಡೆಯುತ್ತಿದೆ. ರಿಕ್ಷಾ, ದ್ವಿಚಕ್ರ ವಾಹನಗಳ ಸಂಚಾರ ಸಾಮಾನ್ಯವಾಗಿದೆ. ಬಂದ್ ನಡೆದಿರುವುದರಿಂದ ಜನಜೀವನ ಅಸ್ತವ್ಯಸ್ತವಾಗಿದೆ.
ಬೆಳಗ್ಗೆಯೇ ಪಂಪ್ ವೆಲ್ ಬಳಿಯ ಕಪಿತಾನಿಯದಲ್ಲಿ ಬಸ್ಸಿಗೆ ಕಲ್ಲೆಸೆಯಲಾಗಿದೆ. ಬಸ್ಸಿಗೆ ಕಲ್ಲೆಸೆದ 6 ಮಂದಿ ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪಡೀಲ್ ನಲ್ಲಿ ಟಯರ್ ಗೆ ಬೆಂಕಿ ಹಚ್ಚಲು ಯತ್ನಿಸಿದ್ದ ಇಬ್ಬರನ್ನು ಬಂಧಿಸಲಾಗಿದೆ. ಅಲ್ಲಲ್ಲಿ ಬಸ್ ಸಂಚಾರಕ್ಕೆ ತಡೆಯೊಡ್ಡುವ ಪ್ರಯತ್ನವನ್ನು ಪೊಲೀಸರು ತೆರವುಗೊಳಿಸಿದ್ದಾರೆ.
ಎಡ - ಬಲ ಸಂಘಟನೆಗಳ ತಾತ್ವಿಕ ಸಂಘರ್ಷಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೇದಿಕೆ ಸಿದ್ಧವಾಗಿದೆ. ಸಂಘ ಪರಿವಾರ ಕರೆ ನೀಡಿದ ಬಂದ್ ಜೊತೆಗೆ ಇಂದು ಸಿಪಿಎಂ ನೇತೃತ್ವದ ಐಕ್ಯತಾ ಱಲಿಯೂ ನಡೆಯಲಿದೆ. ಕಣ್ಣೂರು ಸೇರಿದಂತೆ ಕೇರಳದಲ್ಲಿ ಸಂಘ ಪರಿವಾರದ ಕಾರ್ಯಕರ್ತರ ಹತ್ಯೆ ನಡೆಯುತ್ತಿದ್ದು, ಇದಕ್ಕೆ ಕೇರಳ ಸಿಎಂ ಪಿಣರಾಯಿ ನೇರ ಹೊಣೆ ಎಂದು ಆರೋಪಿಸಿ ಸಂಘ ಪರಿವಾರ ಮಂಗಳೂರು ಬಂದ್ಗೆ ಕರೆ ನೀಡಿದೆ.
ಇದೇ ವೇಳೆ, ಕೇರಳ ಸಿಎಂ ಪಿಣರಾಯಿ ಕಾರ್ಯಕ್ರಮದಲ್ಲಿ ಯಾವುದೇ ರಾಜಿ ಇಲ್ಲ. ನಿಗದಿತ ಕಾರ್ಯಕ್ರಮ ನಡೆದೇ ನಡೆಯುತ್ತದೆ ಎಂದು ಸಿಪಿಎಂ ಹೇಳಿದೆ. ಹಿಂದೂ ಸಂಘಟನೆಗಳ ಬೆದರಿಕೆಗೆ ಮಣಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿರುವ ಎಡ ಸಂಘಟನೆಗಳು ಐಕ್ಯತಾ ಱಲಿಯ ಯಶಸ್ವಿಗೆ ಕರೆ ನೀಡಿದೆ.
ಈ ಮಧ್ಯೆ, ರಾಜ್ಯ ಸರ್ಕಾರಕ್ಕೂ ಪಿಣರಾಯಿ ಭೇಟಿ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಕೇರಳ ಸಿಎಂ ರಾಜ್ಯದ ಅತಿಥಿಯಾಗಿದ್ದು, ಅವರ ಭೇಟಿಗೆ ಗರಿಷ್ಠ ಭದ್ರತೆಯನ್ನು ವ್ಯವಸ್ಥೆಗೊಳಿಸಲಾಗಿದೆ. ಆರು ಡ್ರೋಣ್ ಕ್ಯಾಮರಾಗಳು, 600ಕ್ಕೂ ಹೆಚ್ಚು ಸಿಸಿ ಕ್ಯಾಮರಾಗಳ ಸೆಕ್ಯೂರಿಟಿ ವ್ಯವಸ್ಥೆ ಮಾಡಲಾಗಿದೆ. ಹೊರ ರಾಜ್ಯದ ಪೊಲೀಸರು ಸೇರಿದಂತೆ 3200 ಸಿಬ್ಬಂದಿಯನ್ನು ಶಾಂತಿ ಸುವ್ಯವಸ್ಥೆ ಕಾಪಾಡಲು ನಿಯೋಜಿಸಲಾಗಿದೆ. ಪಿಯುಸಿ ಪರೀಕ್ಷೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ 17 ಸಾವಿರ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.