ತಾಯಿಯನ್ನು ಕೊಚ್ಚಿ ಕೊಂದಿದ್ದ ದುರುಳ ಪುತ್ರನಿಗೆ ಗಲ್ಲು ಶಿಕ್ಷೆ

First Published Jun 5, 2018, 9:30 AM IST
Highlights

ಹೆತ್ತ ತಾಯಿಯನ್ನೆ ನಿರ್ದಯವಾಗಿ ಮಚ್ಚಿನಿಂದ ಕೊಚ್ಚಿ ಕೊಂದಿದ್ದ ಮಗನಿಗೆ ಚಿತ್ರದುರ್ಗದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ.
 

ಚಿತ್ರದುರ್ಗ: ಹೆತ್ತ ತಾಯಿಯನ್ನೆ ನಿರ್ದಯವಾಗಿ ಮಚ್ಚಿನಿಂದ ಕೊಚ್ಚಿ ಕೊಂದಿದ್ದ ಮಗನಿಗೆ ಇಲ್ಲಿನ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ.

ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ದುಮ್ಮಿ ಗೊಲ್ಲರಹಟ್ಟಿಯ ತಿಮ್ಮಪ್ಪ ಮರಣದಂಡನೆಗೆ ಗುರಿಯಾದ ಅಪರಾಧಿ. ತಿಮ್ಮಪ್ಪನ ತಾಯಿ ಸಾವಿತ್ರಮ್ಮ ಆಗಿಂದಾಗ್ಗೆ ಸೊಸೆ ಹಾಗೂ ಮೊಮ್ಮಕ್ಕಳೊಂದಿಗೆ ಜಗಳ ವಾಡುತ್ತಿದ್ದರು. ಇದರಿಂದ ಬೇಸತ್ತ ತಿಮ್ಮಪ್ಪನ ಪತ್ನಿ, ಆತನನ್ನು ತೊರೆದು ತವರುಮನೆ ಸೇರಿದ್ದರು. ಪತ್ನಿ ತೊರೆದ ನಂತರ ಏಕಾಂಗಿಯಾಗಿದ್ದ ತಿಮ್ಮಪ್ಪ ನಿತ್ಯ ತಾಯಿ ಜೊತೆ ಜಗಳವಾಡುತ್ತಿದ್ದ. 

ಹೆಂಡತಿ, ಮಕ್ಕಳು ಮನೆ ಬಿಟ್ಟು ಹೋಗಲು ನೀನೆ ಕಾರಣವೆಂದು ದೂರುತ್ತಿದ್ದ. ತಾಯಿಯ ಮೇಲೆ ಆಕ್ರೋಶಭರಿತನಾಗಿದ್ದ. ಇದೇ ಕೋಪದಲ್ಲಿ 2017ರ ಫೆ.21ರಂದು ರಾತ್ರಿ 8.30ರ ಸಮಯದಲ್ಲಿ ಗ್ರಾಮದ ದೇವಸ್ಥಾನದ ಕಡೆಯಿಂದ ಬರುತ್ತಿದ್ದ ಸಾವಿತ್ರಮ್ಮಳ ಮೇಲೆ ಏಕಾಏಕಿ ದಾಳಿ ನಡೆಸಿದ ತಿಮ್ಮಪ್ಪ ಮಚ್ಚಿನಿಂದ ಹಲ್ಲೆ ನಡೆಸಿ, ಅವರ ತಲೆಯನ್ನು ತುಂಡರಿಸಿದ್ದ.

ಈ ಸಂಬಂಧ ಹೊಳಲ್ಕೆರೆ ಪೊಲೀಸರು ಆರೋಪಿ ತಿಮ್ಮಪ್ಪನ ವಿರುದ್ಧ ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸತ್ರ ನ್ಯಾಯಾ ಧೀಶ ಬಸವರಾಜ ಎಸ್‌. ಚೇಗರೆಡ್ಡಿ, ಆರೋಪಿ ತಿಮ್ಮಪ್ಪಗೆ ಕಲಂ 302 ಐಪಿಸಿ ಅಡಿಯಲ್ಲಿ ಕೊಲೆ ಅಪರಾಧಕ್ಕೆ ಗಲ್ಲು ಶಿಕ್ಷೆ ಮತ್ತು .10 ಸಾವಿರ ದಂಡ ವಿಧಿಸಿ ಸೋಮವಾರ ತೀರ್ಪು ನೀಡಿದರು. ಅಭಿಯೋಜಕ ಎಂ.ಚಂದ್ರಪ್ಪ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.

click me!