
ಬೆಂಗಳೂರು[ಆ.24]: ಮದುವೆಗೆ ಒತ್ತಾಯಿಸಿದರೆ ನಮ್ಮಿಬ್ಬರ ಆಪ್ತ ಘಳಿಗೆಗಳ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿದುಬಿಡುವುದಾಗಿ ತನ್ನ ಪ್ರಿಯಕರ ಬೆದರಿಕೆಯೊಡ್ಡುತ್ತಿದ್ದಾನೆ ಎಂದು ಆರೋಪಿಸಿ ವೈದ್ಯೆಯೊಬ್ಬರು ಮಡಿವಾಳ ಠಾಣೆಗೆ ದೂರು ನೀಡಿದ್ದಾರೆ. ವೈದ್ಯಗೆ ಬೆದರಿಕೆಯೊಡ್ಡಿದ ಆರೋಪಹೊತ್ತಿರುವ ಕೇರಳ ಮೂಲದ ಅಜ್ಮಲ್ ಮೊಹಮ್ಮದ್ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಸಂತ್ರಸ್ತ ವೈದ್ಯೆ ಮೂಲತಃ ಕೇರಳದವರೇ ಆಗಿದ್ದು, ಐದು ವರ್ಷಗಳಿಂದ ನಗರದಲ್ಲಿ ವಾಸವಿದ್ದಾರೆ.
ಖಾಸಗಿ ಆಸ್ಪತ್ರೆಯಲ್ಲಿ ಚರ್ಮ ತಜ್ಞೆಯಾಗಿರುವ ಸಂತ್ರಸ್ತೆಗೆ ಸಾಮಾಜಿಕ ಜಾಲತಾಣ ಫೇಸ್‌ಬುಕ್ ಮೂಲಕ ಆರೋಪಿ ಕೇರಳದ ಮಣಪ್ಪುರನಲ್ಲಿ ಕೆಲಸ ಮಾಡುತ್ತಿದ್ದ ಮೊಹಮ್ಮದ್ ಪರಿಚಯವಾಗಿತ್ತು. ಆತ್ಮೀಯರಾಗಿದ್ದ ಇಬ್ಬರು ಮೊಬೈಲ್ ಸಂಖ್ಯೆ ವಿನಿಮಯ ಮಾಡಿಕೊಂಡು ನಿತ್ಯ ಸಂದೇಶ ವಿನಿಮಯ ಮಾಡಿಕೊಳ್ಳುತ್ತಿದ್ದರು. ಕ್ರಮೇಣ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು.
ಅನಂತರ ಆತ ಹಲವು ಕಾರಣ ನೀಡಿ ಸಂತ್ರಸ್ತೆ ಬಳಿಯಿಂದ ಲಕ್ಷಾಂತರ ಹಣವನ್ನು ತನ್ನ ಖಾತೆಗೆ ಹಾಕಿಸಿಕೊಂಡಿದ್ದ. ಈ ಪೈಕಿ ₹30 ಸಾವಿರ ಹಣವನ್ನು ಆರೋಪಿ ಮರಳಿಸಿದ್ದ. ಬೆಂಗಳೂರಿಗೆ
ಬಂದ ಬಳಿಕ ಪೂರ್ಣ ಹಣವನ್ನು ಮರಳಿಸುವುದಾಗಿ ಹೇಳಿದ್ದ. ಅದರಂತೆ ಆರೋಪಿ ಕಳೆದ ಜೂನ್ ತಿಂಗಳಿನಲ್ಲಿ ನಗರಕ್ಕೆ ಬಂದಿದ್ದು, ಮಡಿವಾಳದಲ್ಲಿ ಲಾಡ್ಜ್‌ವೊಂದನ್ನು ಮಾಡಿ 20 ದಿನ ಅಲ್ಲಿಯೇ ಇದ್ದ. ಅಲ್ಲಿಗೆ ಸಂತ್ರಸ್ತ ವೈದ್ಯೆಯನ್ನು ಆರೋಪಿ ಕರೆಸಿಕೊಂಡಿದ್ದ. ಈ ವೇಳೆ ಲಾಡ್ಜ್‌ನಲ್ಲಿ ಮೊಹಮ್ಮದ್ ವೈದ್ಯೆ ಜತೆ ದೈಹಿಕ ಸಂಪರ್ಕ ಸಾಧಿಸುವಂತೆ ಒತ್ತಾಯಿಸಿದ್ದ. ಇದಕ್ಕೆ ವೈದ್ಯೆ ನಿರಾಕರಿಸಿದ್ದಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದಿದ್ದ.
ಇದರಿಂದ ವೈದ್ಯೆ ಆತನೊಂದಿಗೆ ಆಪ್ತ ಕ್ಷಣಗಳನ್ನು ಕಳೆದಿದ್ದು, ಅದರ ಫೋಟೋಗಳನ್ನು ತೆಗೆದುಕೊಂಡಿದ್ದ ಆರೋಪಿ ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಸಿ ಮಹಿಳೆ ಜತೆ ಹಲವು ಬಾರಿ ದೈಹಿಕ ಸಂಪರ್ಕವನ್ನು ಸಾಧಿಸಿದ್ದ. ಅನಂತರ ಕೇರಳಕ್ಕೆ ಹೋಗುವಾಗ ಪುನಃ ಮಹಿಳೆಯಿಂದ 70 ಸಾವಿರ ಹಣ ಪಡೆದುಕೊಂಡಿದ್ದ. ಈ ಘಟನೆಗಳ ನಂತರ ಮಹಿಳೆಯು ಗರ್ಭ ಧರಿಸಿದ್ದು, ನ್ಯಾಯಾ ಕೊಡಿಸುವಂತೆ ಠಾಣೆ ಮೆಟ್ಟಿಲೇರಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಪತ್ತೆಗೆ ಕ್ರಮಕೈಗೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.