ಬೆಂಗಳೂರಲ್ಲಿ ಸಿನಿಮೀಯ ರೀತಿಯಲ್ಲಿ ಕಿಡ್ನಾಪ್; ಕೃತ್ಯಕ್ಕೆ ಓಲಾ ಕ್ಯಾಬ್, ಪೇಟಿಎಂ ಬಳಕೆ

By Suvarna Web DeskFirst Published Oct 23, 2017, 5:14 PM IST
Highlights

* ಲಗ್ಗೆರೆ ಬಳಿ ಕಾಲೇಜು ಉಪನ್ಯಾಸಕ ಸಂತೋಷ್'ನ ಅಪಹರಣ

* ಸಂತೋಷ್ ಬುಕ್ ಮಾಡಿದ್ದ ಓಲಾ ಶೇರ್ ಕ್ಯಾಬ್'ನಿಂದಲೇ ದುಷ್ಕರ್ಮಿಗಳ ಆಗಮನ

* ಪೇಟಿಎಂ ಮೂಲಕ ಹಣ ವಸೂಲಿ ಮಾಡಿದ ಗ್ಯಾಂಗ್

* ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಬೆಂಗಳೂರು(ಅ. 23): ನಗರದಲ್ಲಿ ಸಿನಿಮೀಯ ರೀತಿಯಲ್ಲಿ ಯುವಕನೊಬ್ಬ ಅಪಹರಣ ನಡೆದ ಘಟನೆ ಬೆಳಕಿಗೆ ಬಂದಿದೆ. ಮೊನ್ನೆ ಅ. 21ರಂದು ಲಗ್ಗೆರೆ ಬಳಿಯ ಕೆಂಪೇಗೌಡ ಲೇಔಟ್'ನಿಂದ ಸಂತೋಷ್ ಎಂಬುವವರ ಅಪಹರಣವಾಗಿದೆ. ಸಂತೋಷ್ ಅಂದು ದೇವಸ್ಥಾನಕ್ಕೆ ಹೋಗಲು ಶೇರಿಂಗ್'ನಲ್ಲಿ ಓಲಾ ಕ್ಯಾಬ್ ಬುಕ್ ಮಾಡಿರುತ್ತಾರೆ. ಆಗ ಅದೇ ಒಲಾ ಕಾರಿನಲ್ಲಿ ಬಂದ ದುಷ್ಕರ್ಮಿಗಳು ನಾರಾಯಣ ಇಟೆಕ್ನೋ ಶಾಲೆ ಬಳಿ ಸಂತೋಷ್'ರನ್ನು ಅಪಹರಿಸುತ್ತಾರೆ.

ಕಾರಿನಲ್ಲೇ ಸಂತೋಷ್'ಗೆ ಹಣಕ್ಕಾಗಿ ಪೀಡಿಸಿ ಹಲ್ಲೆ ನಡೆಸುತ್ತಾರೆ. ಸಂತೋಷ್'ನನ್ನು ಕಾರಿನಲ್ಲಿ ಕೂಡಿಸಿಕೊಂಡು ನೆಲಮಂಗಲ, ಜಾಲಹಳ್ಳಿ, ಬಿಇಎಲ್ ಸೇರಿ ನಗರ ಹಾಗೂ ನಗರದ ಸುತ್ತಮುತ್ತ ಹಲವೆಡೆ ಸುತ್ತುತ್ತಾರೆ. ಕೊನೆಗೆ ಪೇಟಿಎಂ ಮೂಲಕ ಸಂತೋಷ್'ನಿಂದ 18 ಸಾವಿರ ರೂ ಹಣ ವಸೂಲಿ ಮಾಡುತ್ತಾರೆ. ಹಣ ಸಿಕ್ಕ ಬಳಿಕ ಕಿಡ್ನಾಪರ್ಸ್ ಗ್ಯಾಂಗು ಲುಂಬಿನಿ ಗಾರ್ಡನ್ಸ್ ಬಳಿ ಸಂತೋಷ್'ನನ್ನು ಬಿಟ್ಟು ಪರಾರಿಯಾಗುತ್ತದೆ.

ದೊಡ್ಡಬಳ್ಳಾಪುರದ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಸಂತೋಷ್ ಅವರು ಸದ್ಯ ಮಹಾಲಕ್ಷ್ಮೀಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಕೃತ್ಯದಲ್ಲಿ ಒಲಾ ಕ್ಯಾಬ್ ಡ್ರೈವರ್'ನ ಪಾತ್ರವಿದೆಯಾ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ, ಈ ಘಟನೆಯಿಂದ ಕ್ಯಾಬ್'ಗಳ ಸುರಕ್ಷತೆಯ ಮಟ್ಟದ ಬಗ್ಗೆ ಅನುಮಾನ ಮೂಡುವುದಂತೂ ಹೌದು.

click me!