ಸಾಲದಿಂದ ಪಾರಾಗಲು ಕಿಡ್ನ್ಯಾಪ್‌ ಡ್ರಾಮಾ! ಡಿಸಿಪಿ ಅಣ್ಣಾಮಲೈಗೂ ಕರೆ!

By Web DeskFirst Published Nov 19, 2018, 7:35 AM IST
Highlights

ವ್ಯಕ್ತಿಯೋರ್ವ ಖತರ್ನಾಕ್ ಐಡಿಯಾ ಮಾಡಿ ಪೊಲೀಸರಿಗೆ ಕರೆ ಮಾಡಿ ಇದೀಗ ಜೈಲು ಸೇರಿದ್ದಾನೆ. ಸಾಲಗಾರರಿಂದ ತಪ್ಪಿಸಿಕೊಳ್ಳಲು ಪೊಲೀಸ್‌ ನಿಯಂತ್ರಣ ಕೊಠಡಿಗೆ (ಡಯಲ್‌-100) ಕರೆ ಮಾಡಿ ಯಾರೋ ಅಪರಿಚಿತರು ತನ್ನನ್ನು ಅಪಹರಣ ಮಾಡಿದ್ದಾರೆ ಎಂದು ಹುಸಿ ಕರೆ ಮಾಡಿ ಸಿಕ್ಕಿ ಬಿದ್ದಿದ್ದಾನೆ. 

ಬೆಂಗಳೂರು :  ಸಾಲಗಾರರಿಂದ ತಪ್ಪಿಸಿಕೊಳ್ಳಲು ಪೊಲೀಸ್‌ ನಿಯಂತ್ರಣ ಕೊಠಡಿಗೆ (ಡಯಲ್‌-100) ಕರೆ ಮಾಡಿ ಯಾರೋ ಅಪರಿಚಿತರು ತನ್ನನ್ನು ಅಪಹರಣ ಮಾಡಿದ್ದಾರೆ ಎಂದು ಹುಸಿ ಕರೆ ಮಾಡಿದ್ದ ಫೋಟೋ ಸ್ಟುಡಿಯೋ ಮಾಲಿಕನೊಬ್ಬ ಜೈಲು ಸೇರಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪೊಲೀಸರ ಹಾದಿ ತಪ್ಪಿಸಿದ್ದ ಬೊಮ್ಮನಹಳ್ಳಿಯ ಕೋಡಿಚಿಕ್ಕನಹಳ್ಳಿ ನಿವಾಸಿ ಪ್ರತಾಪ್‌ (29) ಎಂಬಾತನನ್ನು ಕೋಣನಕುಂಟೆ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಮೂಲತಃ ಕನಕಪುರ ಜಿಲ್ಲೆಯ ಪ್ರತಾಪ್‌ ಕಳೆದ ಏಳೆಂಟು ವರ್ಷಗಳಿಂದ ಬೊಮ್ಮನಹಳ್ಳಿಯಲ್ಲಿ ನೆಲೆಸಿದ್ದು, ಕೃಷಿಕರಾದ ಈತನ ಪೋಷಕರು ಕನಕಪುರದಲ್ಲಿಯೇ ನೆಲೆಸಿದ್ದಾರೆ. ಆರೋಪಿ ಕೋಣನಕುಂಟೆಯಲ್ಲಿ ದೊಡ್ಡದಾದ ಫೋಟೋ ಸ್ಟುಡಿಯೋ ಹೊಂದಿದ್ದು, ಸ್ನೇಹಿತರ ಬಳಿ ಸುಮಾರು 40 ಲಕ್ಷ ಸಾಲ ಮಾಡಿದ್ದ. ಇತ್ತೀಚೆಗೆ ಸ್ನೇಹಿತರು ಸಾಲ ವಾಪಸ್‌ ನೀಡುವಂತೆ ಒತ್ತಡ ಹೇರುತ್ತಿದ್ದರು. ಸಾಲ ನೀಡಿದ್ದ ಸ್ನೇಹಿತರಿಂದ ತಪ್ಪಿಸಿಕೊಳ್ಳಲು ಉಪಾಯ ಹುಡುಕಿದ್ದ.

ಅದರಂತೆ ನ.11ರಂದು ಸಂಜೆ ಪೊಲೀಸ್‌ ನಿಯಂತ್ರಣ ಕೊಠಡಿ (ಡಯಲ್‌-100)ಗೆ ಕರೆ ಮಾಡಿ, ‘ಯಾರೋ ಅಪರಿಚಿತರು ಕೊತ್ತನೂರು ದಿಣ್ಣೆ ಬಳಿ ನನ್ನನ್ನು ಅಪಹರಣ ಮಾಡಿದ್ದು, ಕೆಂಗೇರಿ ಬಳಿ ಕರೆದೊಯ್ಯುತ್ತಿದ್ದಾರೆ’ ಎಂದು ಹೇಳಿ ಕರೆ ಸ್ಥಗಿತಗೊಳಿಸಿದ್ದ. ಕೂಡಲೇ ಪೊಲೀಸ್‌ ನಿಯಂತ್ರಣ ಕೊಠಡಿಯಿಂದ ಕೋಣನಕುಂಟೆ ಪೊಲೀಸರಿಗೆ ಮಾಹಿತಿ ರವಾನೆಯಾಗಿತ್ತು. ಕೋಣನಕುಂಟೆ ಇನ್ಸ್‌ಪೆಕ್ಟರ್‌ ನೇತೃತ್ವದ ತಂಡ ಪ್ರತಾಪ್‌ನ ಮೊಬೈಲ್‌ಗೆ ಕರೆ ಮಾಡಿದ ವೇಳೆ ಕೆಂಗೇರಿ ಬಳಿ ಆರೋಪಿಗಳು ಇನ್ನೋವಾ ಕಾರಿನಲ್ಲಿ ಕರೆದುಕೊಂಡು ಹೋಗುತ್ತಿದ್ದಾರೆ ಎಂದು ಹೇಳಿದ್ದ.

ಪೊಲೀಸರು ಕೆಂಗೇರಿ ಬಳಿ ಹೋಗುತ್ತಿದ್ದಂತೆ ಮೈಸೂರಿಗೆ ಕರೆದೊಯ್ಯುತ್ತಿದ್ದಾರೆ ಎಂದು ಪುನಃ ಕರೆ ಮಾಡಿದ್ದ. ಇದನ್ನು ನಂಬಿದ ಪೊಲೀಸರು ಮೈಸೂರಿಗೆ ತೆರಳುವಾಗ ಮಡಿಕೇರಿ ಮಾರ್ಗದಲ್ಲಿ ಹೋಗುತ್ತಿರುವುದಾಗಿ ಹೇಳಿ ಕರೆ ಸ್ಥಗಿತಗೊಳಿಸಿದ್ದ. ಇತ್ತ ಪೊಲೀಸರು ಪ್ರತಾಪ್‌ನ ರಕ್ಷಣೆಗೆ ಇನ್ನಿಲ್ಲದ ಕಸರತ್ತು ಮುಂದುವರೆಸಿದ್ದರು. ಪ್ರತಾಪ್‌ನ ಮೊಬೈಲ್‌ ಕೊನೆ ಬಾರಿ ಮೈಸೂರಿನ ಕೊಲಂಬಿಯಾ ಏಷ್ಯಾ ಬಳಿ ದೊರೆತಿತ್ತು. ಇನ್ನು ಮೊಬೈಲ್‌ ಫೋನ್‌ ಸ್ವಿಚ್‌ಆಫ್‌ ಆದ ಕಾರಣ ಪೊಲೀಸರಿಗೆ ಪ್ರಕರಣ ತಲೆನೋವಾಗಿ ಪರಿಣಮಿಸಿತ್ತು.

ತಾನೇ ಕರೆ ಮಾಡಿ ಬಂದ ಭೂಪ

ನ.13ರಂದು ರಾತ್ರಿ 9.30ರ ಸುಮಾರಿಗೆ ಪುನಃ ಪೊಲೀಸ್‌ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದ ಪ್ರತಾಪ್‌, ‘ನನ್ನನ್ನು ಅಪಹರಣ ಮಾಡಿದ್ದ ವ್ಯಕ್ತಿಗಳು ನೈಸ್‌ ರಸ್ತೆಯಲ್ಲಿ ಬಿಟ್ಟು ಹೋಗಿದ್ದಾರೆ’ ಎಂದಿದ್ದ. ಕೂಡಲೇ ಸ್ಥಳಕ್ಕೆ ತೆರಳಿದ್ದ ಪೊಲೀಸರು ಆತನನ್ನು ಠಾಣೆಗೆ ಕರೆ ತಂದು ವಿಚಾರಣೆ ನಡೆಸಿದ್ದರು. ಈ ವೇಳೆ ಸರಿಯಾಗಿ ಪ್ರತಿಕ್ರಿಯಿಸದ ಆರೋಪಿ, ಅಪರಿಚಿತರು ತನ್ನ ಬಳಿ ಇದ್ದ ಎಲ್ಲ ಹಣವನ್ನು ಕಸಿದುಕೊಂಡರು, ಈಗ ಮಾತನಾಡುವ ಸ್ಥಿತಿಯಲಿಲ್ಲ ಎಂದು ಹೇಳಿದ್ದ.

ಆಯಾಸಗೊಂಡಿದ್ದಾನೆ ಎಂದು ಪೊಲೀಸರು ಪ್ರತಾಪ್‌ನನ್ನು ಮನೆಗೆ ಕಳುಹಿಸಿಕೊಟ್ಟಿದ್ದರು. ಮರುದಿನ ಪ್ರತಾಪ್‌ನನ್ನು ವಿಚಾರಣೆ ನಡೆಸಿದಾಗ ನಾನು ಸ್ನೇಹಿತರಿಂದ ಸುಮಾರು 40 ಲಕ್ಷ ಸಾಲ ಮಾಡಿದ್ದು, ಸಾಲಗಾರರ ಒತ್ತಡ ಹೆಚ್ಚಾಗಿತ್ತು. ಸಾಲ ತೀರಿಸುವ ದಾರಿ ಕಾಣದೆ ಅಪರಿಚಿತರು ಅಪಹರಣ ಮಾಡಿ ಹಣ ಕಸಿದುಕೊಂಡು ಹೋಗಿದ್ದಾರೆ. ಎಂದು ನಂಬಿಸುವ ಸಲುವಾಗಿ ಈ ರೀತಿ ಮಾಡಿದೆ. ಅಲ್ಲದೆ ಸ್ನೇಹಿತರು ನನ್ನನ್ನು ರಕ್ಷಿಸಲು ಹಣ ತಂದು ಕೊಡುತ್ತಾರೆ ಎಂಬ ನಂಬಿಕೆಯಲ್ಲಿ ಸುಳ್ಳು ಹೇಳಿದ್ದಾಗಿ ಆರೋಪಿ ತನಿಖಾಧಿಕಾರಿಗಳ ವೇಳೆ ಬಾಯ್ಬಿಟ್ಟಿದ್ದಾನೆ. ಹೀಗಾಗಿ ಪೊಲೀಸರಿಗೆ ಸುಳ್ಳು ಹೇಳಿ ಹಾದಿ ತಪ್ಪಿಸಿದ ಆರೋಪದ ಮೇಲೆ ಐಪಿಸಿ ಸೆಕ್ಷನ್‌ 182 ಪ್ರಕರಣದಡಿ ದೂರು ದಾಖಲಿಸಿ ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಡಿಸಿಪಿ ಅಣ್ಣಾಮಲೈಗೂ ಕರೆ!

ಆರೋಪಿ ಕೇವಲ ಪೊಲೀಸ್‌ ನಿಯಂತ್ರಣ ಕೊಠಡಿಗೆ ಮಾತ್ರವಲ್ಲ, ನ.12ರಂದು ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಅವರಿಗೂ ಕರೆ ಮಾಡಿ ‘ನಿಮ್ಮ ಪೊಲೀಸರು ನನ್ನನ್ನು ರಕ್ಷಣೆ ಮಾಡಿಲ್ಲ. ಅಪಹರಣಕಾರರಿಂದ ಶೀಘ್ರ ನನ್ನನ್ನು ರಕ್ಷಿಸಿ ಎಂದು ಮನವಿ ಮಾಡಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಡಿಸಿಪಿ ಠಾಣಾಧಿಕಾರಿಗೆ ಕೂಡಲೇ ಪ್ರಕರಣ ಪತ್ತೆ ಹಚ್ಚುವಂತೆ ಸೂಚಿಸಿದ್ದರು. ಆರೋಪಿ ಪ್ರತಾಪ್‌ನ ನಾಟಕದಿಂದ ಡಿಸಿಪಿ ಅವರೇ ಬೆಸ್ತು ಬಿದ್ದಿದ್ದಾರೆ. ಇಷ್ಟುಮಾತ್ರವಲ್ಲದೆ, ತನ್ನ ಸ್ನೇಹಿತರಿಗೂ ಕರೆ ಮಾಡಿ ಅಪಹರಣ ಮಾಡಲಾಗಿದೆ ಎಂದು ಹೇಳಿದ್ದ. ಆತನ ಸ್ನೇಹಿತರು ಸ್ನೇಹಿತನನ್ನು ರಕ್ಷಣೆ ಮಾಡಲು ಸುಮಾರು 15 ಲಕ್ಷ ಹಣ ಹೊಂದಿಸಿದ್ದರು. ಈತನ ನಿಜ ಬಣ್ಣ ಬಯಲಾಗುತ್ತಿದ್ದಂತೆ ಎಲ್ಲರೂ ಛೀಮಾರಿ ಹಾಕಿ ತೆರಳಿದರು ಎಂದು ತನಿಖಾಧಿಕಾರಿ ‘ಕನ್ನಡಪ್ರಭ’ಕ್ಕೆ ವಿವರಿಸಿದರು.

click me!