ಎಂಆರ್’ಐ ಯಂತ್ರಕ್ಕೆ ಸಿಲುಕಿ ವ್ಯಕ್ತಿ ಸಾವು..

By Suvarna Web DeskFirst Published Jan 29, 2018, 7:27 AM IST
Highlights

ಇಲ್ಲಿನ ಆಸ್ಪತ್ರೆಯೊಂದರಲ್ಲಿ ಎಂಆರ್‌ಐ (ಮ್ಯಾಗ್ನೆಟಿಕ್ ರಿಸೋನನ್ಸ್ ಇಮೇಜಿಂಗ್) ಯಂತ್ರದ ಆಯಸ್ಕಾಂತ ಪ್ರಭಾವಕ್ಕೆ ಸಿಲುಕಿ 32 ವರ್ಷ ವಯಸ್ಸಿನ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.

ಮುಂಬೈ: ಇಲ್ಲಿನ ಆಸ್ಪತ್ರೆಯೊಂದರಲ್ಲಿ ಎಂಆರ್‌ಐ (ಮ್ಯಾಗ್ನೆಟಿಕ್ ರಿಸೋನನ್ಸ್ ಇಮೇಜಿಂಗ್) ಯಂತ್ರದ ಆಯಸ್ಕಾಂತ ಪ್ರಭಾವಕ್ಕೆ ಸಿಲುಕಿ 32 ವರ್ಷ ವಯಸ್ಸಿನ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.

ರಾಜೇಶ್ ಮಾರು ಎಂಬುವರೇ ಸಾವಿಗೀಡಾದವರು. ನಾಯರ್ ಆಸ್ಪತ್ರೆಗೆ ದಾಖಲಾಗಿದ್ದ ತಮ್ಮ ಬಂಧು ಹರೀಶ್ ಸೋಳಂಕಿ ಅವರ ತಾಯಿಯನ್ನು ನೋಡಲು ಆಸ್ಪತ್ರೆಗೆ ರಾಜೇಶ್ ಹೋಗಿದ್ದರು. ಆಗ ವಾರ್ಡ್ ಬಾಯ್ ಓರ್ವನು, ರಾಜೇಶ್ ಅವರ ಕೈಗೆ ಆಕ್ಸಿಜನ್ ಸಿಲಿಂಡರ್ ನೀಡಿ, ಇದನ್ನು ಎಂಆರ್‌ಐ ಕೋಣೆಗೆ ತೆಗೆದುಕೊಂಡು ಬನ್ನಿ ಎಂದು ಕೋರಿದ.

ಎಂಆರ್‌ಐ ಕೋಣೆಗೆ ಸಾರ್ವಜನಿಕರ ಪ್ರವೇಶ ನಿಷಿದ್ಧವಿದೆ. ಆದಾಗ್ಯೂ ಸಾರ್ವಜನಿಕರಾದ ರಾಜೇಶ್ ಅವರಿಗೆ ಆಕ್ಸಿಜನ್ ಸಿಲಿಂಡರ್ ತೆಗೆದುಕೊಂಡು ಬಾ ಎಂದು ವಾರ್ಡ್‌ಬಾಯ್ ಸೂಚಿಸಿದ್ದು ಇಲ್ಲಿ ಪ್ರಶ್ನಾರ್ಹ. ಈ ಸಂದರ್ಭದಲ್ಲಿ ಎಂಆರ್‌ಐ ಕೋಣೆಗೆ ಸೆಕ್ಯೂರಿಟಿ ಗಾರ್ಡ್ ಕೂಡ ಇರಲಿಲ್ಲ. ಆಕ್ಸಿಜನ್ ಸಿಲಿಂಡರ್‌ನೊಂದಿಗೆ ರಾಜೇಶ್ ಅವರು ಎಂಆರ್‌ಐ ಕೋಣೆಗೆ ಪ್ರವೇಶಿಸಿದಾಗ ಎಂಆರ್‌ಐ ಯಂತ್ರ ಚಾಲ್ತಿ ಸ್ಥಿತಿಯಲ್ಲಿತ್ತು.

ತಕ್ಷಣ ಕಬ್ಬಿಣದ ಸಿಲಿಂಡರನ್ನು ಯಂತ್ರ ಎಳೆದುಕೊಂಡಿತು. ಯಂತ್ರದಲ್ಲಿ ಸಿಲುಕಿ ಗಾಯಗೊಂಡು ಕೇವಲ 2 ನಿಮಿಷದಲ್ಲೇ ಅವರು ಅಸುನೀಗಿದರು ಎಂದು ಹರೀಶ್ ಸೋಳಂಕಿ ಅವರು ಘಟನೆಯ ಬಗ್ಗೆ ವಿವರಿಸಿದ್ದಾರೆ.

ಅಲ್ಲದೆ, ಇದು ಸಂಪೂರ್ಣ ಆಸ್ಪತ್ರೆಯದ್ದೇ ನಿರ್ಲಕ್ಷ್ಯ ಎಂದು ಅವರು ಕಿಡಿಕಾರಿದ್ದಾರೆ. ಘಟನೆಯ ಹಿನ್ನೆಲೆಯಲ್ಲಿ ಆಸ್ಪತ್ರೆಯ ವೈದ್ಯ ರಾದ ಸಿದ್ಧಾಂತ್ ಶಾ, ವಾರ್ಡ್ ಬಾಯ್ ವಿಠ್ಠಲ ಚವಾಣ್, ಲೇಡಿ ವಾರ್ಡ್ ಅಟೆಂಡೆಂಟ್ ಸುನಿತಾ ಸುರ್ವೆ ಅವರ ವಿರುದ್ಧ ಪರಿಚ್ಛೇದ 304 ಎ (ನಿರ್ಲಕ್ಷ್ಯದಿಂದ ಸಾವು) ಅಡಿ ಪ್ರಕರಣ ದಾಖಲಾಗಿದೆ.

click me!