
ಬೆಂಗಳೂರು: ‘ಮುಖ್ಯಮಂತ್ರಿಗಳನ್ನು ಭೇಟಿಯಾಗಬೇಕು ಎಂದು ಬಿಗ್ ಬಾಸ್ ನನಗೆ ನೀಡಿದ್ದ ಟಾಸ್ಕ್ ಪೂರೈಸಲು ವಿಧಾನಸೌಧಕ್ಕೆ ಬಂದಿದ್ದೆ..! ಇದು ನಿಜವಾಗಲೂ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಬಿಗ್ ಬಾಸ್’ ಸ್ಪರ್ಧಿ ಹೇಳಿದ್ದಲ್ಲ.
ಬದಲಿಗೆ, ವಿಧಾನಸೌಧದಲ್ಲಿ ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ಒಳಗಡೆ ಪ್ರವೇಶಿಸಿ ಅನುಮಾನಾಸ್ಪದವಾಗಿ ಓಡಾಡುವಾಗ ಸಿಕ್ಕಿ ಬಿದ್ದ ಆರೋಪಿ ಭಾಸ್ಕರ್ (33) ಎಂಬಾತನ ಹೇಳಿಕೆ. ಸೋಮವಾರ ಬೆಳಗ್ಗೆ ಭಾಸ್ಕರ್ ವಿಧಾನಸೌಧದಲ್ಲಿ ಕೆಲಸ ಮಾಡುವ ಸರ್ಕಾರಿ ಉದ್ಯೋಗಿ ಎಂದು ಹೇಳಿಕೊಂಡು ವಿಧಾನಸೌಧದ ಪಶ್ವಿಮ ದ್ವಾರದ ಮೂಲಕ ಆವರಣ ಪ್ರವೇಶಿಸಿದ್ದ. ವಿಧಾನಸೌಧದ ಒಳಗಡೆ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ.
ಇದರಿಂದ ಅನುಮಾನಗೊಂಡ ಭದ್ರತಾ ಸಿಬ್ಬಂದಿ ಭಾಸ್ಕರ್‌ನನ್ನು ವಶಕ್ಕೆ ಪಡೆದು ವಿಧಾನಸೌಧ ಠಾಣೆ ಪೊಲೀಸರಿಗೆ ಒಪ್ಪಿಸಿದ್ದರು. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮಾನಸಿಕ ಅಸ್ವಸ್ಥನಂತೆ ವರ್ತಿಸಿದ್ದು, ಸೂಕ್ತವಾಗಿ ವಿಚಾರಣೆಗೆ ಸ್ಪಂದಿಸಲಿಲ್ಲ. ಬಿಸ್ ಬಾಸ್ ಸ್ಪರ್ಧಿ ನಾನು, ಬಿಗ್‌ಬಾಸ್ ನೀಡುವ ಟಾಸ್ಕ್ ಪೂರೈಸಲು ಇಲ್ಲಿಗೆ ಬಂದಿದ್ದಾಗಿ ಹೇಳಿಕೆ ನೀಡುತ್ತಿದ್ದ. ಹೀಗಾಗಿ ಚಿಕಿತ್ಸೆಗಾಗಿ ಭಾಸ್ಕರ್‌ನನ್ನು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವಿಧಾನಸೌಧ ಪೊಲೀಸರು ಹೇಳಿದರು.
ಭದ್ರತಾ ಲೋಪ: ಆರೋಪಿ ವಿಧಾನಸೌಧದ ಉದ್ಯೋಗಿ ಎಂದು ಹೇಳಿದ ಕೂಡಲೇ ಪ್ರವೇಶ ದ್ವಾರದಲ್ಲಿದ್ದ ಭದ್ರತಾ ಸಿಬ್ಬಂದಿ ಆತನನ್ನು ಒಳಗೆ ಹೋಗಲು ಅನುಮತಿ ನೀಡಿದ್ದಾರೆ. ಸರಿಯಾಗಿ ಆತನ ಗುರುತಿನ ಚೀಟಿ ನೋಡದೆ ವಿಧಾನಸೌಧ ಒಳಗಡೆ ಪ್ರವೇಶಿಸಲು ಅನುಮತಿ ನೀಡಲಾಗಿದೆ. ಇದರಿಂದ ಮೇಲ್ನೋಟಕ್ಕೆ ಭದ್ರತಾ ಸಿಬ್ಬಂದಿಯ ಲೋಪ ಕಂಡು ಬಂದಿದ್ದು, ವಿವರಣೆ ಕೇಳಿ ಮೆಮೋ ನೀಡಲಾಗಿದೆ ಎಂದು ಹಿರಿಯ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.