ಪ್ರಧಾನಿ ಹೆಸರಲ್ಲಿ ನಕಲಿ ದಾಖಲೆ : ಹೈಕೋರ್ಟ್‌ನಲ್ಲಿ ಕೆಲಸಕ್ಕೆ ಅರ್ಜಿ!

By Web DeskFirst Published Dec 29, 2018, 9:04 AM IST
Highlights

ಟೈಪಿಸ್ಟ್‌ ಹುದ್ದೆ ಪಡೆಯಲು ಪ್ರಧಾನ ಮಂತ್ರಿಗಳ ಹೆಸರಿನಲ್ಲಿ ಹೈಕೋರ್ಟ್‌ ರಿಜಿಸ್ಟ್ರಾರ್‌ ಅವರಿಗೆ ನಕಲಿ ಶಿಫಾರಸು ಪತ್ರ ಕಳುಹಿಸಿದ್ದ ಖಾಸಗಿ ಕಂಪನಿ ಉದ್ಯೋಗಿಯೊಬ್ಬನನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು :  ನ್ಯಾಯಾಲಯದಲ್ಲಿ ಟೈಪಿಸ್ಟ್‌ ಹುದ್ದೆ ಪಡೆಯಲು ಪ್ರಧಾನ ಮಂತ್ರಿಗಳ ಹೆಸರಿನಲ್ಲಿ ಹೈಕೋರ್ಟ್‌ ರಿಜಿಸ್ಟ್ರಾರ್‌ ಅವರಿಗೆ ನಕಲಿ ಶಿಫಾರಸು ಪತ್ರ ಕಳುಹಿಸಿದ್ದ ಖಾಸಗಿ ಕಂಪನಿ ಉದ್ಯೋಗಿಯೊಬ್ಬನನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಸಂಜಯ್‌ ಕುಮಾರ್‌ ಬಂಧಿತನಾಗಿದ್ದು, ಕೆಲ ದಿನಗಳ ಹಿಂದೆ ಹೈಕೋರ್ಟ್‌ ರಿಜಿಸ್ಟ್ರಾರ್‌ ಅವರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನಕಲಿ ಶಿಫಾರಸು ಪತ್ರ ಸೃಷ್ಟಿಸಿ ಕಳುಹಿಸಿದ್ದ. ಈ ಪತ್ರದ ಬಗ್ಗೆ ಶಂಕೆಗೊಂಡ ರಿಜಿಸ್ಟ್ರಾರ್‌ ರಾಜೇಶ್ವರಿ ಅವರು, ವಿಧಾನಸೌಧ ಠಾಣೆಗೆ ಡಿ.17ರಂದು ದೂರು ನೀಡಿದ್ದರು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಪತ್ರದಲ್ಲಿದ್ದ ವಿಳಾಸದ ಬೆನ್ನಹತ್ತಿ ಹೋಗಿ ಆರೋಪಿಯನ್ನು ಸೆರೆ ಹಿಡಿದು ನಗರಕ್ಕೆ ಕರೆ ತಂದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬಿಎಸ್ಸಿ ಪದವೀಧರನಾಗಿರುವ ಸಂಜಯ್‌, ಬೆಳಗಾವಿ ನಗರದಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದಾನೆ. ಟೈಪಿಂಗ್‌ ಕೋರ್ಸ್‌ ಸಹ ಮುಗಿಸಿದ್ದ ಆತ, ಸರ್ಕಾರಿ ಉದ್ಯೋಗ ಕನಸು ಕಂಡಿದ್ದ. ಆದರೆ ಈ ನಿಟ್ಟಿನಲ್ಲಿ ಸತತವಾಗಿ ಪ್ರಯತ್ನಿಸಿದರೂ ಫಲ ಸಿಗದೆ ಹೋದಾಗ ಪ್ರಧಾನಿ ಅವರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳಲು ನಿರ್ಧರಿಸಿದ್ದಾನೆ. ಹಾಗಾಗಿ ಇಂಟರ್‌ನೆಟ್‌ನಲ್ಲಿ ಪ್ರಧಾನ ಮಂತ್ರಿಗಳ ಕಚೇರಿ ಕುರಿತು ಮಾಹಿತಿ ಪಡೆದು ನಕಲಿ ಪತ್ರ ಸೃಷ್ಟಿಸಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.

ಪ್ರಧಾನಮಂತ್ರಿ ಕಚೇರಿ ಎಂಬ ಲೆಟರ್‌ ಹೆಡ್‌ನಲ್ಲಿ ನಕಲಿ ಶಿಫಾರಸು ಪತ್ರ ಸೃಷ್ಟಿಸಿದ್ದ ಆರೋಪಿ, ‘ಇವರ ಹೆಸರು ಸಂಜಯ್‌ ಕುಮಾರ್‌. ಬಿಎಎಸ್ಸಿ ಓದಿದ್ದಾರೆ. ಟೈಪಿಂಗ್‌ ಸಹ ಕಲಿತಿದ್ದಾರೆ. ಹೀಗಾಗಿ ಇವರಿಗೆ ಹೈಕೋರ್ಟ್‌ನಲ್ಲಿ ಟೈಪಿಸ್ಟ್‌ ಹುದ್ದೆಗೆ ಪರಿಗಣಿಸಬೇಕು’ಎಂದು ಮೋದಿ ಅವರೇ ಸೂಚಿಸಿರುವಂತೆ ಬರೆದಿದ್ದ. ಪತ್ರದ ಕೊನೆಗೆ ಅವರ ಸಹಿಯನ್ನು ತಾನೇ ಮಾಡಿ, ಅದನ್ನು ಅಂಚೆ ಮೂಲಕ ಹೈಕೋರ್ಟ್‌ಗೆ ಕಳುಹಿಸಿದ್ದ. ಆ ಪತ್ರವು ರಿಜಿಸ್ಟ್ರಾರ್‌ ರಾಜೇಶ್ವರಿ ಅವರ ಕೈ ಸೇರಿತ್ತು. ಟೈಪಿಸ್ಟ್‌ ಕೆಲಸಕ್ಕೆ ಪ್ರಧಾನಿಗಳು ಶಿಫಾರಸು ಮಾಡುತ್ತಾರಾ ಎಂದು ಗುಮಾನಿಗೊಂಡ ಅವರು, ತಕ್ಷಣವೇ ಹೈಕೋರ್ಟ್‌ ವಿಚಕ್ಷಣಾ ದಳಕ್ಕೆ ಮಾಹಿತಿ ಕೊಟ್ಟಿದ್ದರು. ಬಳಿಕ ಪ್ರಧಾನ ಮಂತ್ರಿಗಳ ಕಚೇರಿಯನ್ನು ಸಂಪರ್ಕಿಸಿ ವಿಚಾರಿಸಿದಾಗ, ಅಂತಹ ಯಾವುದೇ ಶಿಫಾರಸು ಪತ್ರ ಕಳುಹಿಸಿಲ್ಲ ಎಂಬ ಉತ್ತರ ಬಂದಿತ್ತು.

ತರುವಾಯ ರಾಜೇಶ್ವರಿ ಅವರು ಡಿ.17 ರಂದು ವಿಧಾನಸೌಧ ಠಾಣೆಗೆ ದೂರು ಕೊಟ್ಟಿದ್ದರು. ಅದರನ್ವಯ ವಂಚನೆ (ಐಪಿಸಿ 420), ನಕಲಿ ದಾಖಲೆ ಸೃಷ್ಟಿ(ಐಪಿಸಿ 465, 467) ಆರೋಪದಡಿ ಎಫ್‌ಐಆರ್‌ ದಾಖಲಿಸಿಕೊಂಡ ಪೊಲೀಸರು, ಪತ್ರದಲ್ಲಿದ್ದ ವಿಳಾಸದ ಜಾಡು ಹಿಡಿದು ಬೆಳಗಾವಿಯಲ್ಲಿ ಸಂಜಯ್‌ನನ್ನು ಬಂಧಿಸಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಆತನನ್ನು ನ್ಯಾಯಾಲಯವು ಪೊಲೀಸ್‌ ಕಸ್ಟಡಿಗೆ ನೀಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

click me!