ಬಿಜೆಪಿ - ಮಮತಾ ಮಹಾಸಂಗ್ರಾಮ

By Web DeskFirst Published Aug 2, 2018, 11:12 AM IST
Highlights

ಎನ್ ಆರ್‌ಸಿಯಿಂದಾಗಿ ಬಂಗಾಳಿಗಳು ಹಾಗೂ ಬಾಂಗ್ಲಾದೇಶೀಗರಿಗೆ ಅನ್ಯಾಯವಾಗಲಿದೆ ಎಂದು ಆರೋಪಿಸಿ ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ದಿಲ್ಲಿಯಲ್ಲಿ ವಿವಿಧ ಪ್ರತಿಪಕ್ಷ ಮುಖಂಡರನ್ನು ಭೇಟಿಯಾಗಿ ಬೆಂಬಲ ಕ್ರೋಡೀಕರಿಸಿದ್ದಾರೆ.

ಕೋಲ್ಕತಾ/ನವದೆಹಲಿ: ಅಸ್ಸಾಂನಲ್ಲಿ ಅಕ್ರಮ ಬಾಂಗ್ಲಾದೇಶೀ ವಲಸಿಗರನ್ನು ಗುರುತಿಸಲು ನಡೆಸಲಾಗಿದ್ದ ರಾಷ್ಟ್ರೀಯ ನಾಗರಿಕ ನೋಂದಣಿ ಗಣತಿಯ ಕುರಿತು ಬಿಜೆಪಿ - ತೃಣಮೂಲ ಕಾಂಗ್ರೆಸ್ ನಡುವೆ ‘ಮಹಾಸಂಗ್ರಾಮ’ದ ಸಾಧ್ಯತೆ ಇದೆ. ಎನ್ ಆರ್‌ಸಿಯಿಂದಾಗಿ ಬಂಗಾಳಿಗಳು ಹಾಗೂ ಬಾಂಗ್ಲಾದೇಶೀಗರಿಗೆ ಅನ್ಯಾಯವಾಗಲಿದೆ ಎಂದು ಆರೋಪಿಸಿ ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ದಿಲ್ಲಿಯಲ್ಲಿ ವಿವಿಧ ಪ್ರತಿಪಕ್ಷ ಮುಖಂಡರನ್ನು ಭೇಟಿಯಾಗಿ ಬೆಂಬಲ ಕ್ರೋಡೀಕರಿಸಿದ್ದಾರೆ.

ಇನ್ನೊಂದು ಕಡೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಆಗಸ್ಟ್ 11 ಕ್ಕೆ ಕೋಲ್ಕತಾಗೆ ಆಗಮಿಸಲಿದ್ದು, ಅಕ್ರಮ ಬಾಂಗ್ಲಾ ದೇಶೀಯರನ್ನು ದೇಶದಿಂದ ಹೊರಹಾಕುವ ಬಗ್ಗೆ ಹಾಗೂ ಅಸ್ಸಾಂನಲ್ಲಿ ನಡೆದ ಎನ್‌ಆರ್‌ಸಿ ಗಣತಿಯು ಪ.ಬಂಗಾಳದಲ್ಲೂ ನಡೆಯಲಿ ಎಂದು ಒತ್ತಾಯಿಸುವ ಸಾಧ್ಯತೆ ಇದೆ. 

ಈ ನಡುವೆ ಪ.ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಹಾಗೂ ರಾಜ್ಯ  ಬಿಜೆಪಿ ಪ್ರಭಾರಿ ಕೈಲಾಶ್ ವಿಜಯವರ್ಗೀಯ ಮಾತನಾಡಿ, ‘ಬಿಜೆಪಿ ಬಂಗಾಳದಲ್ಲಿ ಅಧಿಕಾರಕ್ಕೆ ಬಂದರೆ ಇಲ್ಲೂ ಎನ್‌ಆರ್‌ಸಿ ಕೈಗೊಳ್ಳಲಿದೆ. ರಾಜ್ಯದಲ್ಲಿ 1 ಕೋಟಿ ಅಕ್ರಮ ಬಾಂಗ್ಲಾದೇಶೀಯರು ಇರುವ ವರ್ತಮಾನ ಬಂದಿದೆ’ ಎಂದು ಹೇಳಿದರು.

ಬೆಂಬಲ ಕ್ರೋಡೀಕರಿಸಿದ ದೀದಿ: ಈ ನಡುವೆ, ಎನ್‌ಆರ್ ಸಿಯಿಂದ ಅಸ್ಸಾಂನಲ್ಲಿನ ಬಂಗಾಳಿಗಳು ಹಾಗೂ ಬಾಂಗ್ಲಾದೇಶೀಯರಿಗೆ ಅನ್ಯಾಯವಾಗಲಿದೆ ಎಂದು ಮನವರಿಕೆ ಮಾಡಿ ಬೆಂಬಲ ಕ್ರೋಡೀಕರಿಸಲು ಮಮತಾ ದಿಲ್ಲಿಯಲ್ಲಿ ವಿವಿಧ ಮುಖಂಡರನ್ನು ಭೇಟಿಯಾದರು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಜತೆ ಮಮತಾ ಮಾತುಕತೆ ನಡೆಸಿದರು. ಮಮತಾರ ಈ ಹೋರಾಟಕ್ಕೆ ಗೌಡರು ಬೆಂಬಲ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಬಿಜೆಪಿ ಹಿರಿಯ ಮುಖಂಡ ಎಲ್.ಕೆ. ಅಡ್ವಾಣಿ ಹಾಗೂ ಬಿಜೆಪಿಯ ಅತೃಪ್ತ ಮುಖಂಡರಾದ ಶತ್ರುಘ್ನ ಸಿನ್ಹಾ, ಕೀರ್ತಿ ಆಜಾದ್ ಹಾಗೂ ಯಶವಂತ ಸಿನ್ಹಾ ಅವರನ್ನೂ ಮಮತಾ ಭೇಟಿ ಮಾಡಿದ್ದು ನಾನಾ ಊಹಾಪೋಹಕ್ಕೆ ಕಾರಣವಾಗಿದೆ. 

click me!