ಸಚಿನ್ ಪೈಲಟ್ ರಾಜಸ್ಥಾನದ ಸಿಎಂ ರೇಸ್‌ನಲ್ಲಿದ್ದಾರೆ. ರಾಜಸ್ಥಾನದಲ್ಲಿ ಬಿಜೆಪಿ ಸೋಲಿಗೆ ಕಾರಣರಾದವರು ಸಚಿನ್ ಪೈಲಟ್. ಪ್ರಧಾನಿ ನರೇಂದ್ರ ಮೋದಿ ಪೋಟೋಗೆ ಮಸಿ ಬಳಿದಿದ್ದಾರೆ ಎನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ?
ನವದೆಹಲಿ (ಡಿ. 15): ಮುಖ್ಯಮಂತ್ರಿ ರೇಸ್‌ನಲ್ಲಿದ್ದ ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಪೈಲಟ್ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರಕ್ಕೆ ಮಸಿಬಳಿದಿದ್ದಾರೆ ಎಂಬ ಸಂದೇಶದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಬಿಳಿ ಬಣ್ಣದ ಕುರ್ತಾ ಪೈಜಾಮ ಧರಿಸಿರುವ, ಸಚಿನ್ ಪೈಲಟ್ ರಂತೆಯೇ ಕಾಣುವ ವ್ಯಕ್ತಿ ಮೋದಿ ಚಿತ್ರಕ್ಕೆ ಮಸಿ ಬಳಿಯುತ್ತಿರುವ ಚಿತ್ರವನ್ನು ಪೋಸ್ಟ್ ಮಾಡಿ, ‘ಇವರು ರಾಜಸ್ಥಾನದ ಮುಖ್ಯಮಂತ್ರಿಯಾಗಹೊರಟ ಸಚಿನ್ ಪೈಲಟ್. ಈತ ಮೋದಿ ಚಿತ್ರಕ್ಕೆ ಮಸಿಬಳಿಯುತ್ತಿದ್ದಾನೆ. ಈ ಸಂದೇಶವನ್ನು ಎಲ್ಲರಿಗೂ ಶೇರ್ ಮಾಡಿ.’ ಎಂದು ಬರೆಯಲಾಗಿದೆ.
‘ನಮೋ ನರೇಂದ್ರ ಮೋದಿ ಜೀ’ ಎಂಬ ಫೇಸ್‌ಬುಕ್ ಮೊದಲಿಗೆ ಇದನ್ನು ಪೋಸ್ಟ್ ಮಾಡಿದ್ದು, ಅನಂತರ ಸೋಷಿಯಲ್ ಮೀಡಿಯಾದಲ್ಲಿ ಈ ಚಿತ್ರ ವೈರಲ್ ಆಗಿದೆ. ಆದರೆ ನಿಜಕ್ಕೂ ಈ ಫೋಟೋದಲ್ಲಿರುವ ವ್ಯಕ್ತಿ ಸಚಿನ್ ಪೈಲಟ್ ಅವರೇ ಎಂದು ಪರಿಶೀಲಿಸಿದಾಗ ಇದೊಂದು ಸುಳ್ಳು ಸುದ್ದಿ ಎಂಬುದು ಸಾಬೀತಾಗಿದೆ. ಜೊತೆಗೆ ಈ ಫೋಟೋ ರಾಜಸ್ಥಾನ ಚುನಾವಣೆಗೂ ಸಂಬಂಧಿಸಿದ್ದಲ್ಲ ಎಂಬುದು ಬಯಲಾಗಿದೆ.
ಲೋಕ್‌ಸತ್ತಾ ಎಂಬ ಜನಪ್ರಿಯ ಮರಾಠಿ ದಿನಪತ್ರಿಕೆ ಈ ಬಗ್ಗೆ ವರದಿ ಮಾಡಿದ್ದು, ಅದರಲ್ಲಿ ‘2018 ಅಕ್ಟೋಬರ್ 11 ರಂದು ತೈಲ ಬೆಲೆ ಏರಿಕೆಯಾಗಿದ್ದ ಸಂದರ್ಭದಲ್ಲಿ ಮಹಾರಾಷ್ಟ್ರ ಯೂತ್ ಕಾಂಗ್ರೆಸ್ ಅಧ್ಯಕ್ಷ ಸತ್ಯಜೀತ್ ಟಾಂಬೆ ಮೋದಿ ಅವರ ಭಾವಚಿತ್ರಕ್ಕೆ ಮಸಿ ಬಳಿದರು’ ಎಂದು ಹೇಳಲಾಗಿದೆ.
ಮಹಾರಾಷ್ಟ್ರ ಯೂತ್ ಕಾಂಗ್ರೆಸ್ ಮುಂಬೈನಲ್ಲಿ ಪ್ರತಿಭಟನೆ ಆಯೋಜಿಸಿತ್ತು. ಆ ಸಂದರ್ಭದ ಫೋಟೋವನ್ನು ರಾಜಸ್ಥಾನ ಚುನಾವಣೆಗೆ ಲಿಂಕ್ ಮಾಡಿ ಮಸಿ ಬಳಿಯುತ್ತಿರುವವರು ಸಚಿನ್ ಪೈಟ್ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವದಂತಿ ಹರಡಲಾಗಿದೆ.
- ವೈರಲ್ ಚೆಕ್