
ಬೆಂಗಳೂರು(ಏ. 03): ನಿತ್ಯ ಲಕ್ಷಾಂತರ ಪ್ರಯಾಣಿಕರು ಬಳಸುವ ರಾಜಧಾನಿ ಯ ಹೃದಯಭಾಗ ಮೆಜೆಸ್ಟಿಕ್‌ನ ಬಿಎಂಟಿಸಿ ಬಸ್ ನಿಲ್ದಾಣ ಅಪಾಯದ ಸ್ಥಳವಾಗಿ ಮಾರ್ಪಟ್ಟಿದೆ. ನಿಲ್ದಾಣ ಪ್ರವೇಶಿಸುವ ಮಾರ್ಗದ ರಸ್ತೆಯಲ್ಲಿ ಪ್ರಯಾಣಿಕರು ಹಾಗೂ ಸಾರ್ವಜನಿಕರು ಅಡ್ಡಾದಿಡ್ಡಿ ಓಡಾಡುವುದರಿಂದ ಯಾವುದೇ ಕ್ಷಣದಲ್ಲಿ ಅಪಾಯ ಸಂಭವಿಸುವ ಸಾಧ್ಯತೆ ಇದೆ.
ಈ ಹಿಂದೆ ಕೂಡ ಪ್ರವೇಶ ದ್ವಾರದ ರಸ್ತೆ ದಾಟುವಾಗ ಕೆಲ ಪ್ರಯಾಣಿಕರು ಬಸ್‌ಗಳಿಗೆ ಸಿಲುಕಿ ಮೃತಪಟ್ಟಿರುವ ನಿದರ್ಶನಗಳಿವೆ. ಅವಘಡಗಳು ನಡೆದ ಹೊಸತರಲ್ಲಿ ಪ್ರಯಾಣಿಕರ ಮೇಲೆ ನಿಗಾ ವಹಿಸಲು ಬಿಎಂಟಿಸಿ ಕೆಲ ಸಿಬ್ಬಂದಿ ನಿಯೋಜಿಸುತ್ತದೆ. ಆದರೆ, ಕೆಲ ದಿನಗಳ ಬಳಿಕ ಯಾರೊಬ್ಬರು ಇತ್ತ ಗಮನಹರಿಸುವುದಿಲ್ಲ. ಇದೀಗ ಮತ್ತೆ ಅಂತಹುದೇ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಯಾಣಿಕರು ಪ್ಲಾಟ್'ಫಾರ್ಮ್'ಗಳಿಗೆ ತೆರಳಲು ಮೇಲ್ಸೇತುವೆ ವ್ಯವಸ್ಥೆ ಇದ್ದರೂ ಬಹುತೇಕ ಪ್ರಯಾಣಿಕರು ಮೇಲ್ಸೇತುವೆ ಬಳಕೆಗೆ ಮುಂದಾಗದಿರುವುದು ಸಮಸ್ಯೆಗೆ ಕಾರಣವಾಗಿದೆ. ನಗರದ ಎಲ್ಲೆಡೆಯಿಂದ ಬರುವ ಬಸ್'ಗಳು ಒಂದೇ ಕಡೆ ಬಸ್ ನಿಲ್ದಾಣ ಪ್ರವೇಶಿಸುವುದರಿಂದ ಪ್ರವೇಶ ದ್ವಾರದಲ್ಲಿ ಒಂದೇ ಸಮನೆ ಬಸ್‌ಗಳು ಬರುತ್ತಿರುತ್ತವೆ. ಈ ವೇಳೆ ಕೆಲ ಪ್ರಯಾಣಿಕರು ನಡು ರಸ್ತೆಯಲ್ಲಿ ನಿಲ್ದಾಣ ಪ್ರವೇಶಿಸಲು ಮುಂದಾಗುತ್ತಾರೆ. ಅಲ್ಲದೆ, ಪಕ್ಕದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ತೆರಳಲು ಇದೇ ರಸ್ತೆಯಲ್ಲಿ ಓಡಾಡುತ್ತಾರೆ. ಹಾಗಾಗಿ ಯಾವ ಕ್ಷಣದಲ್ಲಾದರೂ ಈ ಜಾಗದಲ್ಲಿ ಅನಾಹುತ ಎದುರಾಗುವ ಸಂಭವವಿದೆ.
ಪೈಪೋಟಿಯಲ್ಲಿ ವೇಗದ ಚಾಲನೆ: ಉಪ್ಪಾರಪೇಟೆ ಪೊಲೀಸ್ ಠಾಣೆ ಹಾಗೂ ಓಕಳಿಪುರ ಕಡೆಯಿಂದ ಬರುವ ಬಸ್‌ಗಳನ್ನು ಚಾಲಕರು ನಿಲ್ದಾಣದ ಪ್ರವೇಶ ದ್ವಾರದ ಬಳಿ ಪೈಪೋಟಿಗೆ ಬಿದ್ದವರಂತೆ ವೇಗವಾಗಿ ನುಗ್ಗುತ್ತಾರೆ. ಮೊದಲಿಗರಾಗಿ ಪ್ಲಾಟ್'ಫಾರ್ಮ್ ಪ್ರವೇಶಿಸಲು ಹೀಗೆ ಅತುರಾತುರವಾಗಿ ಬಸ್ ಚಾಲನೆ ಮಾಡುವುದು ನಿತ್ಯ ಕಂಡು ಬರುತ್ತಿದೆ. ಕೆಲ ಚಾಲಕರು ನಿಲ್ದಾಣ ಪ್ರವೇಶಿಸುವ ಮುನ್ನವೇ ಬಸ್'ನ ಎರಡೂ ಬಾಗಿಲು ತೆರೆಯುತ್ತಾರೆ. ಇದರಿಂದ ಬಸ್ ಚಲಿಸುವಾಗಲೇ ಪ್ರಯಾಣಿಕರು ಇಳಿಯಲು ಮುಂದಾಗುತ್ತಾರೆ. ಹಿಂದಿನಿಂದ ಬೇರೆ ಬಸ್'ಗಳು ವೇಗವಾಗಿ ಬರುತ್ತಿರುವುದನ್ನು ಲೆಕ್ಕಿಸದೆ ಪ್ರಯಾಣಿಕರು ಚಲಿಸುವ ಬಸ್‌ಗಳಿಂದ ಇಳಿಯುತ್ತಾರೆ. ಈ ವೇಳೆ ಕೊಂಚ ಯಾಮಾರಿದರೂ ಅನಾಹುತ ಕಟ್ಟಿಟ್ಟಬುತ್ತಿ.
ಕೆಲಸಕ್ಕೆ ಬಾರದ ಬ್ಯಾರಿಕೇಡ್: ಬಸ್'ಗಳು ನಿಲ್ದಾಣ ಪ್ರವೇಶಿಸುವ ದ್ವಾರದ ಬಳಿ ಕೆಲ ಬ್ಯಾರಿಕೇಡ್'ಗಳನ್ನು ಇರಿಸಲಾಗಿದೆ. ಆ ಬ್ಯಾರಿಕೇಡ್'ಗಳ ಒಳಗೆ ಪ್ರಯಾಣಿಕರು ಸಂಚರಿಸಲಿ ಎಂಬುದು ಬ್ಯಾರಿಕೇಡ್ ಇರಿಸಿರುವ ಉದ್ದೇಶ. ಆದರೆ, ಬ್ಯಾರಿಕೇಡ್ ಒಳಗೆ ಸಂಚರಿಸುವ ಪ್ರಯಾಣಿಕರು ರಸ್ತೆ ಕೊಂಚ ಖಾಲಿಯಾಗುತ್ತಿದ್ದಂತೆ ಏಕಾಏಕಿ ರಸ್ತೆ ದಾಟಲು ಮುಂದಾಗುತ್ತಾರೆ. ಈ ವೇಳೆ ಬಸ್'ಗಳು ವೇಗವಾಗಿ ಬಂದರೆ ಅನಾಮತ್ತಾಗಿ ಈ ಬಸ್'ಗೆ ಸಿಲುಕುತ್ತಾರೆ. ಒಂದು ವೇಳೆ ಈ ರಸ್ತೆ ದಾಟಿದರೂ ಕೆಎಸ್'ಆರ್'ಟಿಸಿ ಬಸ್ ನಿಲ್ದಾಣಕ್ಕೆ ಹೋಗುವ ರಸ್ತೆಯಲ್ಲಿ ವಾಹನಗಳಿಗೆ ಸಿಲುಕು ಸಾಧ್ಯತೆ ಇದೆ. ಬಸ್ ಬರುತ್ತಿರುವುದನ್ನು ಕಂಡೂ ಕಾಣದಂತೆ ಕೆಲವರು ರಸ್ತೆ ದಾಟಲು ಮುಂದಾಗುತ್ತಾರೆ. ಈ ವೇಳೆ ಕೆಲ ಬಸ್ ಚಾಲಕರು ರಸ್ತೆಯಲ್ಲಿ ಪ್ರಯಾಣಿಕರ ಜತೆ ಜಗಳ ಕಾಯುವ ಪ್ರಸಂಗಗಳು ನಿತ್ಯ ನಿಲ್ದಾಣದ ಪ್ರವೇಶ ದ್ವಾರದ ಬಳಿ ಕಾಣಸಿಗುತ್ತವೆ.
ಸಿಬ್ಬಂದಿ ನಿಯೋಜನೆ: ಬಿಎಂಟಿಸಿ ಅನಾಹುತ ಸಂಭವಿಸಿದ ಬಳಿಕ ಎಚ್ಚೆತ್ತುಕೊಳ್ಳುವ ಬದಲು ಮುಂಜಾಗ್ರತಾ ಕ್ರಮವಾಗಿ ಬಸ್ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಸಿಬ್ಬಂದಿ ನಿಯೋಜಿಸುವುದು ಒಳಿತು. ಜತೆಗೆ ಬಸ್ ಸಂಚರಿಸುವ ಈ ರಸ್ತೆಯಲ್ಲಿ ಪ್ರಯಾಣಿಕರ ಹಾಗೂ ಸಾರ್ವಜನಿಕರ ಓಡಾಟವನ್ನು ಸಂಪೂರ್ಣ ನಿಷೇಧಿಸಬೇಕು. ಮೇಲ್ಸೇತುವೆ ಸಂಚಾರ ಕಡ್ಡಾಯಗೊಳಿಸಬೇಕು. ಈ ಹಿಂದೆ ಅನಾಹುತ ಸಂಭವಿಸಿದ ಸಂದರ್ಭದಲ್ಲಿ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಕೆಲ ದಿನ ಸಿಬ್ಬಂದಿ ಸ್ಥಳದಲ್ಲಿ ಹಾಜರಿದ್ದು ಪ್ರಯಾಣಿಕರು ಈ ರಸ್ತೆಯಲ್ಲಿ ಸಂಚರಿಸದಂತೆ ನೋಡಿಕೊಂಡಿದ್ದರು. ಆದರೆ, ಈ ನಿಗಾ ಹೆಚ್ಚು ದಿನ ಮುಂದುವರಿಯಲಿಲ್ಲ. ಹಾಗಾಗಿ ಬಿಎಂಟಿಸಿ ಇನ್ನಾದರೂ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ನಿತ್ಯ ಪ್ರಯಾಣಿಕರು.
ಕಾರಣಗಳು
1) ಬಿಎಂಟಿಸಿ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಪ್ರಯಾಣಿಕರ ಬೇಕಾಬಿಟ್ಟಿಓಡಾಟ
2) ನಿಲ್ದಾಣ ಪ್ರವೇಶಿಸಲು ಫ್ಲೈಓವರ್ ಬಳಸದೇ ಬಸ್ಸಿನ ಎದುರೇ ನುಗ್ಗುವ ಜನರು
3) ಅನಾಹುತ ಸಂಭವಿಸಿದ ಕೆಲದಿನ ಮಾತ್ರ ಸಿಬ್ಬಂದಿ ನಿಯೋಜಿಸುವ ಬಿಎಂಟಿಸಿ
4) ನಿಲ್ದಾಣ ಪ್ರವೇಶಿಸಲು ನಾಮುಂದು, ತಾಮುಂದು ಎಂದು ನುಗ್ಗುವ ಚಾಲಕರು
ಕನ್ನಡಪ್ರಭ ವಾರ್ತೆ
epaper.kannadaprabha.in
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.