ವಿಚ್ಛೇದನ ಅರ್ಜಿ ಸಲ್ಲಿಸಿದ ಪತಿಯಿಂದ ಮಗು ಹೊಂದಲು ಬಯಸಿದ ಪತ್ನಿ!

By Kannadaprabha NewsFirst Published Jun 24, 2019, 9:47 AM IST
Highlights

ವಿಚ್ಛೇದನ ಅರ್ಜಿ ಸಲ್ಲಿಸಿದ ಪತಿಯಿಂದ ಮಗು ಹೊಂದಲು ಬಯಸಿದ ಪತ್ನಿ!| ನ್ಯಾಯಾಲಯಕ್ಕೆ 35 ವರ್ಷದ ಮಹಿಳೆಯಿಂದ ಕೋರಿಕೆ| ಕೋರ್ಟ್‌ ಅನುಮತಿ| ಆದರೆ ಪತಿ ಒಪ್ಪಿಗೆ ಕೊಡ್ತಾರಾ?

ನವದೆಹಲಿ[ಜೂ.24]: ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಮೇಲೆ ಗಂಡ- ಹೆಂಡತಿ ಸಂಸಾರ ಹೆಚ್ಚೂಕಡಿಮೆ ಕೊನೆಗೊಂಡಂತೆಯೇ. ಆದರೆ ಇಲ್ಲೊಬ್ಬಳು ಮಹಿಳೆ ತನ್ನಿಂದ ವಿಚ್ಛೇದನ ಬಯಸಿ ಕಾನೂನು ಹೋರಾಟ ನಡೆಸುತ್ತಿರುವ ಪತಿಯಿಂದ ಮಗು ಹೊಂದಲು ಅವಕಾಶ ಕೊಡಿಸುವಂತೆ ನ್ಯಾಯಾಲಯದ ಮೊರೆ ಹೋಗಿದ್ದಾಳೆ. ಇಂತಹದ್ದೊಂದು ಅಪರೂಪದ ಪ್ರಕರಣದಲ್ಲಿ ಮಹಿಳೆಯ ಬೆಂಬಲಕ್ಕೆ ಕೋರ್ಟ್‌ ನಿಂತಿದ್ದು, ಪತಿ- ಪತ್ನಿಯನ್ನು ಕೃತಕ ಗರ್ಭಧಾರಣೆ ತಜ್ಞರ ಸಮಾಲೋಚನೆಗೆ ಕಳುಹಿಸಿದೆ.

ಆದರೆ ಮಹಿಳೆ ಸಲ್ಲಿಸಿರುವ ಅರ್ಜಿ ಅಕ್ರಮ, ಸಾಮಾಜಿಕ ನಿಯಮಗಳಿಗೆ ವಿರುದ್ಧವಾದುದು ಎಂದು ಪತಿ ವಿರೋಧಿಸಿದ್ದಾರೆ. ಕೃತಕ ಗರ್ಭಧಾರಣೆ ತಜ್ಞರನ್ನು ಸಂಪರ್ಕಿಸಿದರೂ, ಪತಿಯ ವೀರ‍್ಯದಾನ ಮುಖ್ಯವಾಗುತ್ತದೆ. ಅದಕ್ಕೆ ಅವರು ಒಪ್ಪಿಗೆ ಕೊಡುವುದರ ಆಧಾರದ ಮೇಲೆ ಮಹಿಳೆಯ ಆಸೆ ಈಡೇರುತ್ತೋ, ಇಲ್ಲವೋ ಎಂಬ ಕುತೂಹಲ ಅಡಗಿದೆ.

ಏನಿದು ಪ್ರಕರಣ?:

ಮಹಾರಾಷ್ಟ್ರದಲ್ಲಿ ಉದ್ಯೋಗದಲ್ಲಿರುವ ಜೋಡಿ, ವಿವಾಹವಾಗಿತ್ತು. ಒಂದು ಮಗುವೂ ಇದೆ. ಈ ನಡುವೆ, ಪತ್ನಿಯಿಂದ ತನಗೆ ಕಿರುಕುಳವಾಗುತ್ತಿದೆ, ವಿಚ್ಛೇದನ ಬೇಕು ಎಂದು 2017ರಲ್ಲಿ ಪತಿರಾಯ ನ್ಯಾಯಾಲಯದ ಮೆಟ್ಟಿಲೇರಿದ್ದ. ಈ ನಡುವೆ, ನಮ್ಮನ್ನು ಒಗ್ಗೂಡಿಸಿ ಎಂದು ನ್ಯಾಯಾಲಯಕ್ಕೆ ಪತ್ನಿ ಅರ್ಜಿ ಸಲ್ಲಿಸಿದ್ದಳು. ಈ ಎರಡೂ ಅರ್ಜಿಗಳ ಕುರಿತು ನಾಂದೇಡ್‌ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿವೆ.

ಈ ಮಧ್ಯೆ, 2018ರಲ್ಲಿ ಮಹಿಳೆ ನಾಂದೇಡ್‌ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ಮಹಿಳೆ, ತನಗೆ ಪತಿಯಿಂದ 2ನೇ ಮಗು ಬೇಕು. ದೈಹಿಕ ಸಂಪರ್ಕ ಅಥವಾ ಕೃತಕ ಗರ್ಭಧಾರಣೆ ಮೂಲಕ ತನ್ನ ಋುತುಚಕ್ರ ನಿಲ್ಲುವುದರೊಳಗಾಗಿ ಕೊಡಿಸಿ ಎಂದು ಬೇಡಿಕೆ ಇಟ್ಟಿದ್ದಳು. ಮಹಿಳೆಯ ಸಂತಾನ ಹಕ್ಕು ಭಾವಾನಾತ್ಮಕವಾಗಿ ಚರ್ಚಾರ್ಹ ಹಾಗೂ ಜಟಿಲವಾದುದು. ಮಹಿಳೆಗೆ ಸಂತಾನೋತ್ಪತ್ತಿ ಹಕ್ಕಿದೆ. ಅದನ್ನು ಆಕೆ ಬಳಸಿಕೊಳ್ಳಬಹುದು. ಆದರೆ ಕಾನೂನಿಗೆ ಇತಿಮಿತಿಗಳಿವೆ. ಪತಿ- ಪತ್ನಿ ಕೃತಕ ಗರ್ಭಧಾರಣೆ ತಂತ್ರಜ್ಞರ ಮೊರೆ ಹೋಗಬಹುದು ಎಂದು ನ್ಯಾಯಾಲಯ ಹೇಳಿತು.

click me!