ಹುಲಿಯೊಂದಿಗೆ ಹೋರಾಡಿ ಗೆದ್ದು ಬದುಕಿ ಬಂದ ವಿದ್ಯಾರ್ಥಿನಿ

By Suvarna Web DeskFirst Published Apr 6, 2018, 9:17 PM IST
Highlights

ಮಹಾರಾಷ್ಟ್ರದ ಭದ್ರ ಜಿಲ್ಲೆಯ ಉಸ್ಗಾನ್ ಗ್ರಾಮದ ಬಿಕಾಂ ಪದವೀಧರೆ ರೂಪಾಲಿ ಮೆಶ್ರಾಮ್ ಕೇವಲ ಕೋಲಿನಿಂದಲೆ ಹುಲಿಯನ್ನು ಓಡಿಸಿ ಧೈರ್ಯ ತೋರಿದ್ದಾಳೆ.

ಮುಂಬೈ(ಏ.06): ಹಿಂದೆ ರಾಜಾಧಿರಾಜರು ಹುಲಿಯೊಂದಿಗೆ ಹೋರಾಡಿದ ಕಥೆಯನ್ನು ಕೇಳಿರುತ್ತೇವೆ. ಆದರೆ ಕಲಿಯುಗದಲ್ಲಿ ಮಾತ್ರ ಅಸಾಧ್ಯವಾದ ಮಾತು. ಅಂಥ ಅಸಾಧ್ಯವಾದುದ್ದನ್ನು 21 ವರ್ಷದ ವಿದ್ಯಾರ್ಥಿನಿ ಸಾಧಿಸಿ ತೋರಿಸಿದ್ದಾಳೆ.

ಮಹಾರಾಷ್ಟ್ರದ ಭದ್ರ ಜಿಲ್ಲೆಯ ಉಸ್ಗಾನ್ ಗ್ರಾಮದ ಬಿಕಾಂ ಪದವೀಧರೆ ರೂಪಾಲಿ ಮೆಶ್ರಾಮ್ ಕೇವಲ ಕೋಲಿನಿಂದಲೆ ಹುಲಿಯನ್ನು ಓಡಿಸಿ ಧೈರ್ಯ ತೋರಿದ್ದಾಳೆ. ಈ ಘಟನೆ ನಡೆದಿದ್ದು ಮಾರ್ಚ್ 24ರಂದು. ಆದರೆ ಬೆಳಕಿಗೆ ಬಂದಿದ್ದು ಇಂದು.

ಅಂದು ರಾತ್ರಿ ಉಸ್ಗಾನ್ ಗ್ರಾಮದಲ್ಲಿ ತನ್ನ ಕುಟುಂಬಸ್ಥರೊಂದಿಗೆ ಮನೆಯಲ್ಲಿ ಮಲಗಿದ್ದಾಗ ಮೇಕೆಗಳು ವಿಚಿತ್ರವಾಗಿ ಕಿರುಚಿದ ಶಬ್ದ ರೂಪಾಲಿಗೆ ಕೇಳಿಸಿದೆ. ತಕ್ಷಣ ಎಚ್ಚರಗೊಂಡ ಈಕೆ ಕೊಟ್ಟಿಗೆಯನ್ನು ನೋಡಿದಾಗ ಹುಲಿಯೊಂದು ಮೇಕೆಗಳನ್ನು ಕೊಲ್ಲುತ್ತಿತ್ತು.  ಅಟ್ಟದ ಮೇಲಿದ್ದ ದೊಣ್ಣೆಯನ್ನು ತೆಗೆದುಕೊಂಡು ಒಮ್ಮೆ ದೇವರನ್ನು ನೆನಪಿಸಿಕೊಂಡು ಹುಲಿಯನ್ನು ಓಡಿಸಲು ಶುರು ಮಾಡಿದ್ದಾಳೆ. ಒಂದಷ್ಟು ನಿಮಿಷ ಬಡಿದಾಡಿದಾಗ ಹುಲಿಯು ಈಕೆಯ ಮೇಲೆ ಎರಗಿದೆ.

ತನ್ನ ಅಮ್ಮನನ್ನು ಸಹಾಯಕ್ಕೆ ಕೂಗಿದ್ದಾಳೆ. ರೂಪಲಿಯ ತಾಯಿಯು ಬಂದಾಗ ಆಕೆಯ ಮೇಲೆ ಹುಲಿ ದಾಳಿ ಮಾಡಿದೆ. ವ್ಯಾಘ್ರನಿಗೆ ಇಬ್ಬರು ಸೇರಿ ಜೋರಾಗಿ ಒಂದೆರಡು ಪೆಟ್ಟು ನೀಡಿ ಮನೆಯೊಳಗೆ ಹೋಗಿ ಬಾಗಿಲನ್ನು ಭದ್ರಪಡಿಸಿಕೊಂಡಿದ್ದಾರೆ. ಸಂಬಂಧಿಕರು ಸೇರಿದಂತೆ ಒಂದಷ್ಟು ಮಂದಿ ಹಾಗೂ ಅರಣ್ಯ ಸಿಬ್ಬಂದಿ ಮನೆಯ ಬಳಿ ಜಮಾಯಿಸಿದಾಗ ಹುಲಿಯು ಅರಣ್ಯದ ಕಡೆ ಪೇರಿ ಕಿತ್ತಿದೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ, ಪ್ರಾಣಾಪಾಯದಿಂದ ಪಾರು

ಅರಣ್ಯ ಸಿಬ್ಬಂದಿ ತಾಯಿ ಹಾಗೂ ಮಗಳನ್ನು ನಾಗಪುರದ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ. ವೈದ್ಯರ ಚಿಕಿತ್ಸೆಯಿಂದ ರೂಪಾಲಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ತನ್ನ ಚಿಕಿತ್ಸೆಗೆ ಮನೆಯವರೆ ವೆಚ್ಚಮಾಡಿದ್ದು ಅರಣ್ಯ ಇಲಾಖೆ ಭರಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದಾಳೆ. ಈಕೆಯು ಹುಲಿಯೊಂದಿಗೆ ಹೋರಾಡಿದ ಭಾವಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.

click me!