ಮಹದೇವ ಪ್ರಸಾದ್ ವಿಶೇಷತೆ: ಮುದ್ದೆ ಸೊಪ್ಸಾರು ಇಷ್ಟ, ಪುಸ್ತಕದ ಮೇಲೆ ಸ್ನೇಹ

Published : Jan 04, 2017, 04:06 AM ISTUpdated : Apr 11, 2018, 12:50 PM IST
ಮಹದೇವ ಪ್ರಸಾದ್ ವಿಶೇಷತೆ: ಮುದ್ದೆ ಸೊಪ್ಸಾರು ಇಷ್ಟ, ಪುಸ್ತಕದ ಮೇಲೆ ಸ್ನೇಹ

ಸಾರಾಂಶ

ವಾರದಲ್ಲಿ ನಾಲ್ಕೈದು ದಿನ ಬೆಂಗಳೂರಿನ ನಿವಾಸದಲ್ಲಿ ಉಳಿದುಕೊಳ್ಳುತ್ತಿದ್ದ ಮಹಾದೇವಪ್ರಸಾದ್‌ ಅವರಿಗೆ ಮುದ್ದೆ ಸೊಪ್ಪಿನ ಸಾರು ಎಂದರೆ ಇಷ್ಟ. ಬೆಳಗ್ಗೆ ಯಾವುದೇ ತಿಂಡಿ ಮಾಡಿದರೂ ತಿನ್ನುತ್ತಿದ್ದ ಸಚಿವರಿಗೆ, ಮಧ್ಯಾಹ್ನ ಮತ್ತು ರಾತ್ರಿ ಮಾತ್ರ ಬಿಸಿ ಮುದ್ದೆ ಸೊಪ್ಪಿನ ಸಾಂಬಾರು ಹಾಗೂ ರಸಂ ಕಾಯಂ.

ಬೆಂಗಳೂರು: ಮಂಗಳವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾದ ಸಹಕಾರ ಸಚಿವ ಎಚ್‌ ಎಸ್‌ ಮಹದೇವಪ್ರಸಾದ್‌ ಅವರು ಇತರೆ ರಾಜಕಾರಣಿಗಳಂತಲ್ಲ. ಆರೋಗ್ಯ ಮಾತ್ರವಲ್ಲದೇ ಕಲೆ, ಸಾಹಿತ್ಯ ಮತ್ತು ಓದಿನ ಕಡೆ ಹೆಚ್ಚು ಆಸಕ್ತರಾಗಿದ್ದರು. ಎಷ್ಟೆಒತ್ತಡ­ಗ­ಳಿ­ ದ್ದರೂ ಪ್ರತಿನಿತ್ಯ ಮುಂಜಾನೆ 6 ಗಂಟೆಗೆ ಎದ್ದು ವಾಯುವಿಹಾರ, ವ್ಯಾಯಾಮ ಮಾಡುತ್ತಿದ್ದರು. ಬಳಿಕ ಅರ್ಧ ತಾಸು ವಿಶ್ರಾಂತಿ ಪಡೆದು ಎಲ್ಲಾ (ಕನ್ನಡ, ಇಂಗ್ಲಿಷ್‌) ಸುದ್ದಿಪತ್ರಿಕೆಗಳನ್ನು ತಿರುವಿ ಹಾಕುವುದು, ಸಾರ್ವಜನಿಕರನ್ನು ಭೇಟಿ ಮಾಡುವುದು, ರಾತ್ರಿ ಒಂದು ಗಂಟೆ ಸಾಹಿತ್ಯ ಓದುವುದು ಇವರ ದಿನಂಪ್ರತಿ ಕಾಯಕ.

ಇತರೆ ರಾಜಕಾರಣಿಗಳು ವೇದಿಕೆಯಲ್ಲಿ ಮಾತ್ರ ಸಾಹಿತ್ಯ ಓದ­ ಬೇಕು, ಆರೋಗ್ಯ ಚೆನ್ನಾಗಿಟ್ಟುಕೊಳ್ಳಬೇಕೆಂದು ಹೇಳುತ್ತಾರೆ. ಪಾಲನೆ ಮಾಡುವುದು ಬಹುತೇಕ ವಿರಳ. ಆದರೆ, ಮಹದೇವಪ್ರಸಾದ್‌ ಇದಕ್ಕೆ ತದ್ವಿರುದ್ಧರಾಗಿದ್ದರು. ಅದಕ್ಕೆ ಸೂಕ್ತ ನಿದರ್ಶನವೇ ಅವರ ನಿತ್ಯದ ಚಟುವಟಿಕೆಗಳು. ಮಹದೇವಪ್ರಸಾದ್‌ ಬೆಂಗಳೂರಿನ ಮನೆಯಲ್ಲಿ ತಂಗಿದ್ದ ಸಂದರ್ಭದಲ್ಲಿ ತಪ್ಪದೇ ಇವೆಲ್ಲವುಗಳನ್ನು ಪಾಲಿಸುತ್ತಿದ್ದರು. ಒಂದು ವೇಳೆ ಕೆಲಸದೊತ್ತಡ ಹೆಚ್ಚಾದರೆ ಯಾವುದಾದರೂ ಸಾಹಿತ್ಯದತ್ತ ವಾಲುತ್ತಿದ್ದರು.

ಮುದ್ದೆ ಸಾರು ಇಷ್ಟ: ವಾರದಲ್ಲಿ ನಾಲ್ಕೈದು ದಿನ ಬೆಂಗಳೂರಿನ ನಿವಾಸದಲ್ಲಿ ಉಳಿದುಕೊಳ್ಳುತ್ತಿದ್ದ ಮಹಾದೇವಪ್ರಸಾದ್‌ ಅವರಿಗೆ ಮುದ್ದೆ ಸೊಪ್ಪಿನ ಸಾರು ಎಂದರೆ ಇಷ್ಟ. ಬೆಳಗ್ಗೆ ಯಾವುದೇ ತಿಂಡಿ ಮಾಡಿದರೂ ತಿನ್ನುತ್ತಿದ್ದ ಸಚಿವರಿಗೆ, ಮಧ್ಯಾಹ್ನ ಮತ್ತು ರಾತ್ರಿ ಮಾತ್ರ ಬಿಸಿ ಮುದ್ದೆ ಸೊಪ್ಪಿನ ಸಾಂಬಾರು ಹಾಗೂ ರಸಂ ಕಾಯಂ. ‘‘ನಾನು ಕೂಡ ಅವರಿಗೆ ಏನು ಬೇಕು ಅದನ್ನೇ ಮಾಡಿಕೊಡುತ್ತಿದ್ದೆ. ಅವರೊಂದಿಗೆ 15 ವರ್ಷಗಳಿಂದ ಇದ್ದೇನೆ. ಶಾಸಕರಾಗಿದ್ದಾಗ, ಹಾಲಿ, ಮಾಜಿ ಸಚಿವರಾಗಿದ್ದಾಗ, ಎಲ್ಲಾ ಸಂದರ್ಭದಲ್ಲೂ ಅವರೊಂದಿಗೆ ಇದ್ದೆ. ಅವರ ಇಷ್ಟದ ಅಡುಗೆಗಳನ್ನು ಮಾಡಿಕೊಡುತ್ತಿದ್ದೆ. ಆದರೆ, ಇಂದು ಅವರು ನಿಧನರಾದರು ಎಂದು ಕೇಳಿ ಬಹಳ ನೋವಾಯಿತು'' ಎಂದು ಅವರ ಪರಮಾಪ್ತ ಬಾಣಸಿಗ, ಬೆಳಗಾವಿ ರಾಮದುರ್ಗ ತಾಲೂಕಿನ ನಿವಾಸಿ ಬಸವರಾಜು ನುಡಿದರು.

‘ನನಗೆ ಒಂದು ಗಂಡು, ಒಂದು ಹೆಣ್ಣು ಮಗು ಇದೆ. ಇಬ್ಬರ ವಿದ್ಯಾಭ್ಯಾಸಕ್ಕೆ ಪ್ರತಿ ಬಾರಿ ಹಣದ ಸಹಾಯ ಮಾಡುತ್ತಿದ್ದರು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸು, ಅದೇ ನಾವು ಅವರಿಗಾಗಿ ಮಾಡುವ ದೊಡ್ಡ ಆಸ್ತಿ ಎನ್ನುತ್ತಿದ್ದರು' ಎಂದು ಹೇಳುವಾಗ ಬಸವರಾಜು ಅವರ ಕಣ್ಣಾಲಿಗಳಲ್ಲಿ ನೀರು ಜಿನುಗುತ್ತಿತ್ತು.

ಸಾಹಿತ್ಯಾಸಕ್ತರು: ಸಾಹಿತ್ಯದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ಮಹದೇವ ಪ್ರಸಾದ್‌ ಅವರು ಬಸವ ಸಾಹಿತ್ಯ, ಕುವೆಂಪು, ಪೂರ್ಣಚಂದ್ರತೇಜಸ್ವಿ, ದೇವನೂರು ಮಹಾದೇವ ಸೇರಿದಂತೆ ನಾನಾ ಹಿರಿಯ ಸಾಹಿತಿಗಳ ಕಾದಂಬರಿ, ನಿಯತಕಾಲಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡಿ­ದ್ದರು. ರಾತ್ರಿ ತಡವಾಗಿ ಬಂದರೂ ಒಂದು ಗಂಟೆ ಪುಸ್ತಕ ಓದಿ ಮಲಗು­ತ್ತಿ­ದ್ದರು. ಇದಕ್ಕಾಗಿ ಅವರ ಮನೆಯಲ್ಲಿಯೇ ಪುಟ್ಟದೊಂದು ಗ್ರಂಥಾಲಯ ತೆರೆದುಕೊಂಡಿದ್ದಾರೆ. ಕಳೆದ ಭಾನುವಾರ ಮನೆಗೆ ಬಂದಾಗ ಕುವೆಂಪು ಅವರ ಕಾನೂರು ಹೆಗ್ಗಡತಿ ಪುಸ್ತಕವನ್ನು ಓದುತ್ತಿದ್ದರು. ಆಗಲೇ 50 ಪುಟಗಳನ್ನು ತಿರುವಿದ್ದರು. ಮಂಗಳವಾರ ರಾತ್ರಿ ಬರುತ್ತೇನೆ ಎಂದು ತಿಳಿಸಿದ್ದರು. ಆದರೆ, ಬೆಳಗ್ಗೆ ಅವರ ನಿಧನದ ಸುದ್ದಿ ಕೇಳಿ ಆಕಾಶವೇ ತಲೆ ಮೇಲೆ ಬಿದ್ದಂತಾಯ್ತು ಎನ್ನುತ್ತಾರೆ ಅವರ ಮನೆಯ ಸಹಾಯಕರಾದ ಮಹೇಶ್‌ ಮತ್ತು ಪ್ರಸನ್ನ. 

(epaper.kannadaprabha.in)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಆಸ್ಟ್ರೇಲಿಯಾ-ಇಂಡಿಯಾ ಲೀಡರ್‌ಶಿಪ್‌ ಅವಾರ್ಡ್ಸ್ 2025: 9 ತೆರೆಮರೆಯ ಸಾಧಕರಿಗೆ ಮೆಲ್ಬರ್ನ್‌ನಲ್ಲಿ ಸನ್ಮಾನ
ಧೋನಿಯನ್ನೇ ಬೆರಗುಗೊಳಿಸಿದ 4ರ ಪೋರಿಯ ಬ್ಯಾಟಿಂಗ್: ವೀಡಿಯೋ ವೈರಲ್