
ಬೆಂಗಳೂರು (ಅ.13): ರಾಜ್ಯದಲ್ಲಿ ಕಳೆದ ಒಂದು ವರ್ಷದಿಂದ ನಡೆಯುತ್ತಿರುವ ಮಹದಾಯಿ, ಕಳಸಾ-ಬಂಡೂರಿ ಹಾಗೂ ಕಾವೇರಿ ನೀರಿನ ಹೋರಾಟದ ವೇಳೆ ರೈತರು ಮತ್ತು ಸಾರ್ವಜನಿಕರ ಮೇಲೆ ಸರ್ಕಾರ ಹೂಡಿರುವ ಮೊಕದ್ದಮೆಗಳನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಆಗ್ರಹಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂದ್ ಮತ್ತು ಪ್ರತಿಭಟನೆ ವೇಳೆ ಬಸ್‌ಗಳಿಗೆ ಬೆಂಕಿ ಹಚ್ಚಿರುವುದು ಸೇರಿದಂತೆ ಹಿಂಸಾಕೃತ್ಯದಲ್ಲಿ ತೊಡಗಿದ್ದ ದುಷ್ಕರ್ಮಿಗಳ ವಿರುದ್ಧ ಮಾತ್ರ ಕ್ರಮಕೈಗೊಳ್ಳಬೇಕು. ಅಮಾಯಕರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ಮಹದಾಯಿ ನ್ಯಾಯಾಧಿಕರಣದ ನಂತರ ನವಲಗುಂದ ತಾಲೂಕಿನ ಯಮನೂರಿನಲ್ಲಿ ನಡೆದ ಪೊಲೀಸ್ ದೌರ್ಜನ್ಯ ಕುರಿತಂತೆ ಐಪಿಎಸ್ ಅಧಿಕಾರಿ ರಾಘವೇಂದ್ರ ಔರಾದ್‌ಕರ್ ಸಮಿತಿ ನೀಡಿರುವ ವರದಿಯನ್ನು ಸರ್ಕಾರ ಬಹಿರಂಗಪಡಿಸಬೇಕು. ಅಲ್ಲದೇ ಈ ವೇಳೆ ೧೮೭ ಅಮಾಯಕ ರೈತರ ವಿರುದ್ಧ ಹೂಡಿರುವ ಖೊಟ್ಟಿ ಪ್ರಕರಣಗಳನ್ನು ವಾಪಸ್ ಪಡೆಯಬೇಕು. ಅಲ್ಲದೇ ಕಾವೇರಿ ಗಲಾಟೆ ಸಂದರ್ಭದಲ್ಲೂ ಮುಗ್ಧರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ರಾಜ್ಯದ ಮಧ್ಯ ಹಾಗೂ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಈರುಳ್ಳಿ ಬೆಲೆ ತೀವ್ರವಾಗಿ ಕುಸಿದಿದೆ. ಪ್ರತಿ ಕ್ವಿಂಟಾಲ್‌ಗೆ ೩ರಿಂದ ೪ ಸಾವಿರ ಇರಬೇಕಿದ್ದ ದರ ಕೇವಲ ೩೦೦ರಿಂದ ೩೫೦ ರು.ಗೆ ಕುಸಿದಿದೆ. ಇದರಿಂದ ರೈತರಿಗೆ ಕೇವಲ ಕೆ.ಜಿ.ಗೆ ಮೂರ್ನಾಲ್ಕು ರು. ಸಿಗುವಂತಾಗಿದೆ. ರಾಜ್ಯ ಸರ್ಕಾರ ಕೂಡಲೇ ಕ್ವಿಂಟಲ್‌ಗೆ ೧,೫೦೦ ರು.ಗಳಿಂದ ೨,೦೦೦ ರು.ಗಳ ಬೆಂಬಲ ಬೆಲೆ ನೀಡಿ, ಖರೀದಿ ಕೇಂದ್ರಗಳನ್ನು ತೆರೆಯಬೇಕು. ಜತೆಗೆ ಶೀತಲಗೃಹಗಳನ್ನು ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ಶೆಟ್ಟರ್ ವಿಶ್ವಾಸ
ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ಕಾವೇರಿ ಹಾಗೂ ಮಹದಾಯಿ ನದಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯ ಸರ್ಕಾರ ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ನಾವು ಕೂಡ ರಾಜ್ಯ ಸರ್ಕಾರದೊಂದಿಗೆ ಬಿಕ್ಕಟ್ಟು ಶಮನಕ್ಕೆ ಪ್ರಯತ್ನಿಸುತ್ತಿದ್ದೇವೆ. ಕ್ಯಾಲಿಕಟ್‌ನಲ್ಲಿ ನಡೆದ ಬಿಜೆಪಿ ಕಾರ‌್ಯಕಾರಿಣಿ ವೇಳೆ ಗೋವಾದ ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪರ್ಸೇಕರ್ ಅವರನ್ನು ಭೇಟಿ ಮಾಡಿ, ಕುಡಿಯುವ ನೀರಿನ ಯೋಜನೆಯ ಅಗತ್ಯತೆಯನ್ನು ಮನವರಿಕೆ ಮಾಡಿದ್ದೇವೆ. ಅಲ್ಲದೇ ಕೇಂದ್ರ ಸಚಿವ ಅನಂತ್‌ಕುಮಾರ್, ಸಂಸದ ಜೋಶಿ ಅವರೊಂದಿಗೆ ಮುಂಬೈಗೆ ತೆರಳಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಜತೆ ಚರ್ಚಿಸಿದ್ದೇವೆ. ಅ.೨೧ರಂದು ನಡೆಯುವ ಸಭೆಯಲ್ಲಿ ಮಹದಾಯಿ ಸಮಸ್ಯೆ ಸೌಹಾರ್ದಯುತವಾಗಿ ಬಗೆಹರಿಯುವ ವಿಶ್ವಾಸವಿದೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.