
ಬೆಂಗಳೂರು : ಸಚಿವ ಸಂಪುಟ ವಿಸ್ತರಣೆಯ ಮಾನದಂಡದ ಬಗ್ಗೆ ಹಾಗೂ ತಮಗೆ ಸಚಿವ ಸ್ಥಾನ ತಪ್ಪಿದ ಬಗ್ಗೆ ತೀವ್ರ ಅಸಮಾಧಾನಗೊಂಡಿರುವ ಕಾಂಗ್ರೆಸ್‌ನ ಹಿರಿಯ ಮುಖಂಡ ಎಂ.ಬಿ.ಪಾಟೀಲ್ ಅವರನ್ನು ದೆಹಲಿಗೆ ಕರೆಸಿಕೊಂಡು ಅವರ ದುಮ್ಮಾನಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕಿವಿಯಾದರು. ಜತೆಗೆ, ಶೀಘ್ರವೇ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದ್ದು, ಅಲ್ಲಿಯವರೆಗೂ ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವಂತಹ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ತಾಕೀತು ಮಾಡಿದರು ಎಂದು ತಿಳಿದುಬಂದಿದೆ.
ಇದೇ ವೇಳೆ ಎಂ.ಬಿ. ಪಾಟೀಲ್ ಅವರು, ತಮಗೆ ಡಿಸಿಎಂ ಹುದ್ದೆ ಹಾಗೂ ತಮ್ಮ ಜತೆಗಿರುವ ಕೆಲವರಿಗೆ ಮುಂದಿನ ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನಕ್ಕಾಗಿ ಬೇಡಿಕೆಯನ್ನು ಸಹ ಇಟ್ಟರು ಎನ್ನಲಾಗಿದೆ. ಆದರೆ, ಈ ಬಗ್ಗೆ ಯಾವುದೇ ಖಚಿತ ಆಶ್ವಾಸನೆಯನ್ನು ನೀಡದ ರಾಹುಲ್ ಗಾಂಧಿ, ರಾಜ್ಯದ ಇತರ ನಾಯಕರೊಂದಿಗೆ ಚರ್ಚಿಸಿ ಅತೃಪ್ತರ ಬೇಡಿಕೆಗಳ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಆದರೆ, ಬಹಿರಂಗವಾಗಿ ಅತೃಪ್ತಿ ವ್ಯಕ್ತಪಡಿಸುವ ಚಟುವಟಿಕೆಗಳಿಂದ ದೂರವಿರಬೇಕು ಎಂದು ಸೂಚಿಸಿದರು ಎನ್ನಲಾಗಿದೆ.
ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಅವರೊಂದಿಗೆ ಶನಿವಾರ ಬೆಳಗ್ಗೆ ೧೧.೩೦ರ ಸುಮಾರಿಗೆ ರಾಹುಲ್ ಗಾಂಧಿ ಅವರನ್ನು ಭೇಟಿಯಾದ ಎಂ.ಬಿ.ಪಾಟೀಲ್ ಅವರು, ಈ ಬಾರಿ ಸಚಿವ ಸಂಪುಟ ವಿಸ್ತರಣೆ ವೇಳೆ ಕಾಂಗ್ರೆಸ್ ಅನುಸರಿಸಿದ ಮಾನದಂಡಗಳಿಂದ ಕೆಲವರಿಗೆ ವಿನಾಯ್ತಿ ನೀಡಿರುವುದು ಮತ್ತು ಪಕ್ಷಕ್ಕಾಗಿ ದುಡಿದ ಪ್ರಮುಖರಿಗೆ ಉದ್ದೇಶಪೂರ್ವಕವಾಗಿ ಸಚಿವ ಸ್ಥಾನ ತಪ್ಪಿಸಿದ್ದರ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದರು ಎಂದು ತಿಳಿದು ಬಂದಿದೆ.
ಸಿದ್ದರಾಮಯ್ಯ ಅವರ ಅಧಿಕಾರಾವಧಿಯಲ್ಲಿ ಕಾಂಗ್ರೆಸ್ ವರ್ಚಸ್ಸು ಹೆಚ್ಚಿಸಲು ಹಾಗೂ ಜಾತಿ ಸಮೀಕರಣಕ್ಕಾಗಿ ಹಲವು ಅಪಾಯಗಳನ್ನು ಮೈಮೇಲೆ ಎಳೆದುಕೊಂಡ ಹಾಗೂ ಪಕ್ಷದ ಸಂಘಟನೆ ಮತ್ತು ಚುನಾವಣೆಯಲ್ಲಿ ಸಂಪನ್ಮೂಲ ಕ್ರೋಡೀ ಕರಣಕ್ಕಾಗಿ ದುಡಿದ ತಮ್ಮನ್ನು ಸಂಪುಟದಿಂದ ಹೊರಗೆ ಇಟ್ಟಿರುವುದು ಏಕೆ ಎಂದು ಪ್ರಶ್ನಿಸಿದರು ಎನ್ನಲಾಗಿದೆ.
ಇದೇ ವೇಳೆ ಸಂಪುಟ ರಚನೆ ವೇಳೆ ಜಾತಿ ಸಮೀಕರಣ ಸಮರ್ಪಕವಾಗಿ ಮಾಡಲಾಗಿಲ್ಲ. ನಾಯಕ, ಕುರುಬ, ಒಕ್ಕಲಿಗ ಜಾತಿಗಳಿಗೆ ತಿನಿಧ್ಯ ನೀಡುವಾಗ ಆ ಸಮುದಾಯಗಳ ಪ್ರಮುಖ ನಾಯಕರನ್ನು ದೂರವಿರಿಸಲಾಗಿದೆ. ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯದಲ್ಲಿ ತೊಂದರೆಯಾಗಲಿದೆ. ಜೆಡಿಎಸ್ ಕೈ ಮೇಲಾಗಲಿದೆ. ಲಿಂಗಾಯತ ಸಮುದಾಯಕ್ಕೆ ಪ್ರಾತಿನಿಧ್ಯವೇ ದೊರಕಿಲ್ಲ. ಹೀಗಾಗಿ ತಮಗೆ ಉಪ ಮುಖ್ಯಮಂತ್ರಿ ಹುದ್ದೆ ದೊರಕಿಸಿಕೊಡಬೇಕು ಹಾಗೂ ಸಂಪುಟ ರಚನೆಯಲ್ಲಿ ಆಗಿರುವ ತಪ್ಪುಗಳನ್ನು ಸರಿಪಡಿಸಬೇಕು ಮತ್ತು ಅರ್ಹರನ್ನು ಕೂಡಲೇ ಸಂಪುಟಕ್ಕೆ ಸೇರ್ಪಡೆ ಮಾಡಬೇಕು ಎಂದು ಕೋರಿದರು ಎಂದು ಮೂಲಗಳು ಹೇಳಿವೆ.
ಎಂ.ಬಿ. ಪಾಟೀಲ್ ಅವರ ಅಹವಾಲನ್ನು ಸಮಾಧಾನವಾಗಿಯೇ ಕೇಳಿದ ರಾಹುಲ್ ಗಾಂಧಿ ಅವರು, ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸಬೇಕು ಎಂಬ ಪಾಟೀಲರ ಬೇಡಿಕೆಯನ್ನು ತಳ್ಳಿಹಾಕಿದರು ಎನ್ನಲಾಗಿದೆ. ಒಂದು ಸಂಪುಟದಲ್ಲಿ ಎರಡು ಡಿಸಿಎಂ ಹುದ್ದೆ ಸೃಷ್ಟಿಗೆ ರಾಹುಲ್ ಒಪ್ಪಿಲ್ಲ ಎನ್ನಲಾಗಿದೆ. ಆದರೆ, ಎಂ.ಬಿ. ಪಾಟೀಲರ ಇತರೆ ದುಮ್ಮಾನಗಳಿಗೆ ತಮ್ಮ ಸಹಾನುಭೂತಿ ವ್ಯಕ್ತಪಡಿಸಿದ್ದು, ನಿಮ್ಮ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುತ್ತೇವೆ. ಆದರೆ, ಭಿನ್ನಮತೀಯ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಬೇಡಿ ಎಂದು ನೇರ ಎಚ್ಚರಿಕೆ ನೀಡಿದರು ಎಂದು ಮೂಲಗಳು ಹೇಳಿವೆ. ಈ ಸಭೆಯ ನಂತರ ಅಹ್ಮದ್ ಪಟೇಲ್ ಅವರ ನಿವಾಸಕ್ಕೆ ತೆರಳಿದ ಎಂ.ಬಿ. ಪಾಟೀಲ್ ಅಲ್ಲಿ ಸುಮಾರು ಅರ್ಧ ಗಂಟೆ ಕಾಲ ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.