ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟಕ್ಕೆ ಹಿನ್ನಡೆ..!

First Published Jun 10, 2018, 12:05 PM IST
Highlights

ಲಿಂಗಾಯತ ಹೋರಾಟಕ್ಕೆ ಹಿನ್ನಡೆ

ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟಕ್ಕೆ ಈಗ ಮತ್ತೊಂದು ಹಿನ್ನಡೆ 

ರಾಜ್ಯ ರಾಜಕೀಯದಲ್ಲಿ ಭಾರೀ ಭಾರಿ ಸಂಚಲನ ಮೂಡಿಸಿದ್ದ ಹೋರಾಟ

ವಿಧಾನಸಭಾ ಚುನಾವಣೆಯಲ್ಲಿ ವಿವಾದವಾಗಿದ್ದ ಪ್ರತ್ಯೇಕ ಧರ್ಮ ಹೋರಾಟ

ರಾಜ್ಯ ಸರ್ಕಾರ ಶಿಫಾರಸು ಮಾಡಿದ್ದ ಕಡತವನ್ನು ವಾಪಸ್​ ಕಳುಹಿಸಿದ ಕೇಂದ್ರ ಸರ್ಕಾರ 

ಬೆಂಗಳೂರು(ಜೂ.10): ರಾಜ್ಯ ರಾಜಕೀಯದಲ್ಲಿ ಭಾರೀ ಭಾರಿ ಸಂಚಲನ ಮೂಡಿಸಿದ್ದ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟಕ್ಕೆ ಭಾರೀ ಹಿನ್ನಡೆಯಾಗಿದೆ. ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಆಗ್ರಹಿಸಿ ರಾಜ್ಯ ಸರ್ಕಾರ ಶಿಫಾರಸು ಮಾಡಿದ್ದ ಕಡತವನ್ನು ಕೇಂದ್ರ ಸರ್ಕಾರ ವಾಪಸ್ ಕಳುಹಿಸಿದೆ.

ಲಿಂಗಾಯತ ಪ್ರತ್ಯೇಕ ಧರ್ಮದ ಕುರಿತು ಪರಿಶೀಲಿಸಲು ನಾಗಮೋಹನ್ ದಾಸ್ ನೇತೃತ್ವದಲ್ಲಿ ಹಿಂದಿನ ಸಿದ್ದರಾಮಯ್ಯ ಸರ್ಕಾರ ಸಮಿತಿ ರಚಿಸಿತ್ತು. ಈ ಸಮಿತಿ ಸುಮಾರು 5000 ಪುಟಗಳ ದಾಖಲೆ ಸಹಿತ 200 ಪುಟಗಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಈ ವರದಿಯನ್ನು ಪುರಸ್ಕರಿಸಿದ್ದ ಕಾಂಗ್ರೆಸ್ ಸರ್ಕಾರ, ಅಲ್ಪಸಂಖ್ಯಾತ ಸ್ಥಾನಮಾನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು.

"

ಆದರೆ ಈ ವರದಿಯನ್ನು ಸ್ಪಷ್ಟವಾಗಿ ತಿರಸ್ಕರಿಸಿರುವ ಕೇಂದ್ರ ಸರ್ಕಾರ, ರಾಜ್ಯ ಸಕಾರ್ಕಾರದ ಮನವಿಯನ್ನು ಪುರಸ್ಕರಿಸಲು ಸಕಾರಣಗಳಿಲ್ಲ ಎಂದು ತಿಳಿಸಿದೆ. ಇನ್ನು ಕೇಂದ್ರದಿಂದ ಕಡತ ವಾಪಸ್ ಬಂದಿರುವುದರಿಂದ ರಾಜ್ಯ ಸರ್ಕಾರದ ಮುಂದಿನ ಹೆಜ್ಜೆ ನಿಗೂಢವಾಗಿದೆ. ಪ್ರತ್ಯೇಕ ಧರ್ಮಕ್ಕಾಗಿ ಚುನಾವಣೆಗೆ ಪೂರ್ವದಲ್ಲಿ ಇದ್ದ ಉತ್ಸಾಹವೂ ಈಗ ಕಾಣುತ್ತಿಲ್ಲ. ಅಲ್ಲದೇ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರವನ್ನು ಮಠಾಧೀಶರು ನೋಡಿಕೊಳ್ಳುತ್ತಾರೆ ಎಂದು ಸಿಎಂ ಕುಮಾರಸ್ವಾಮಿ ಈ ಹಿಂದೆ ಹೇಳಿದ್ದರು.

ಭಾರತದ ರಿಜಿಸ್ಟ್ರಾರ್ ಜನರಲ್ ಪ್ರಕಾರ, ಈಗ ಮುಸ್ಲಿಮ್ ಕ್ರಿಶ್ಚಿಯನ್, ಬೌದ್ಧ, ಸಿಖ್, ಪಾರ್ಸಿ ಹಾಗೂ ಜೈನರಿಗೆ ಮಾತ್ರ ಅಲ್ಪಸಂಖ್ಯಾತ ಸ್ಥಾನಮಾನ ಇದೆ. ಬ್ರಾಹ್ಮಣ ಸಂಪ್ರದಾಯವನ್ನು ಅನುಸರಿಸದ ಅನೇಕ ಸಮಾಜಗಳು ಹಿಂದು ಧರ್ಮದಲ್ಲಿ ಇವೆ. ಒಂದು ಸಮಾಜಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಿದರೆ ಅದರಿಂದ ಆಗುವ ಪರಿಣಾಮಗಳನ್ನು ಊಹೆ ಮಾಡಲೂ ಸಾಧ್ಯವಿಲ್ಲ. ಅಡ್ಡ ಪರಿಣಾಮಗಳೂ ಉಂಟಾಗುತ್ತವೆ. ಹೀಗಾಗಿ ಶಿಫಾರಸು ಒಪ್ಪಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ರಾಜ್ಯಕ್ಕೆ ತಿಳಿಸಿದೆ ಎಂದು ಮೂಲಗಳು ಹೇಳಿವೆ.

ಹೊಸ ಪ್ರಸ್ತಾವನೆಗೆ ಅವಕಾಶ:
ಈ ಹಿಂದೆ ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಾಗಲೂ ಮಹಾರಾಷ್ಟ್ರ ಸಲ್ಲಿಸಿದ್ದ ಪ್ರತ್ಯೇಕ ಧರ್ಮ ಶಿಫಾರಸಿಗೆ ಒಪ್ಪಿಗೆ ಸಿಕ್ಕಿರಲಿಲ್ಲ. ಈಗ ಹೋರಾಟ ತೀವ್ರಗೊಂಡರೆ, ರಾಜ್ಯ ಸರ್ಕಾರ ಮತ್ತೊಂದು ಅಧ್ಯಯನ ನಡೆಸಿ, ತನ್ನ ಅಭಿಪ್ರಾಯಗಳೊಂದಿಗೆ ಹೊಸ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಕಳುಹಿಸಬಹುದು. ರಾಜ್ಯದಲ್ಲಿ ಈಗ ಸಮ್ಮಿಶ್ರ ಸರ್ಕಾರ ಇರುವ ಕಾರಣ ಈ ಸಾಧ್ಯತೆ ಕಡಿಮೆ ಎಂದೇ ಹೇಳಲಾಗುತ್ತಿದೆ. ರಾಜ್ಯ ಸರ್ಕಾರದ ಶಿಫಾರಸು ಒಪ್ಪಲು ಸಾಧ್ಯವಿಲ್ಲ ಎಂದು ಕೇಂದ್ರ ಸಕಾರ್ಕಾರ ಹೇಳಿರುವ ಹಿನ್ನೆಲೆಯಲ್ಲಿ ವಾಪಸ್​ ಬಂದಿರುವ ಕಡತವನ್ನು ಮತ್ತೆ ಮಂಡಿಸದಂತೆ ಸಿಎಂ ಸೂಚನೆ ನೀಡುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

click me!