ಕೈಗಾ ಅಣುಸ್ಥಾವರದ ಸುತ್ತಮುತ್ತ ಕ್ಯಾನ್ಸರ್ ಪ್ರಕರಣಗಳು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಇರುವುದ ಸಮೀಕ್ಷೆಯ ವೇಳೆ ಬೆಳಕಿಗೆ ಬಂದಿದೆ. ಕ್ಯಾನ್ಸರ್ ಸಮೀಕ್ಷೆಯ ಸಮಗ್ರ ವರದಿಯನ್ನು ಮಾರ್ಚ್ ಒಳಗೆ ಪ್ರಕಟಿಸಲಾಗುವುದು ಎಂದು ಸಮೀಕ್ಷೆ ನಡೆಸಿದ ಟಾಟಾ ಮೆಮೋರಿಯಲ್ ಆಸ್ಪತ್ರೆಯ ಡಾ. ಉಮೇಶ ಮಹಾಂತ ಶೆಟ್ಟಿ ಹೇಳಿದ್ದಾರೆ.
ಕಾರವಾರ : ಕೈಗಾ ಸುತ್ತಮುತ್ತ ಉಳಿದೆಡೆಗಿಂತ ಕ್ಯಾನ್ಸರ್ ಪ್ರಮಾಣ ಕಡಿಮೆ ಇರುವುದು ಕಂಡುಬಂದಿದೆ. ಈ ಕುರಿತು ನಡೆಸಿದ ಕ್ಯಾನ್ಸರ್ ಸಮೀಕ್ಷೆಯ ಸಮಗ್ರ ವರದಿಯನ್ನು ಮಾರ್ಚ್ ಒಳಗೆ ಪ್ರಕಟಿಸಲಾಗುವುದು ಎಂದು ಸಮೀಕ್ಷೆ ನಡೆಸಿದ ಟಾಟಾ ಮೆಮೋರಿಯಲ್ ಆಸ್ಪತ್ರೆಯ ಡಾ. ಉಮೇಶ ಮಹಾಂತ ಶೆಟ್ಟಿ ಹೇಳಿದ್ದಾರೆ.
ಕೈಗಾದಲ್ಲಿ ಸೋಮವಾರ ಕೈಗಾ ಅಣು ವಿದ್ಯುತ್ ಘಟಕದ ಅಧಿಕಾರಿಗಳು, ಟಾಟಾ ಮೆಮೋರಿಯಲ್ ಆಸ್ಪತ್ರೆ ಜಂಟಿಯಾಗಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.
undefined
ಕೈಗಾ ಅಣು ವಿದ್ಯುತ್ ಘಟಕದಿಂದ 5 ಕಿ.ಮೀ. ವ್ಯಾಪ್ತಿ ಹಾಗೂ 16 ಕಿ.ಮೀ. ವ್ಯಾಪ್ತಿ ಹೀಗೆ ಎರಡು ಹಂತದ ಸಮೀಕ್ಷೆ ನಡೆಸಲಾಗಿದೆ. 5 ಕಿ.ಮೀ. ವ್ಯಾಪ್ತಿಯಲ್ಲಿನ ವರದಿ 12 ತಿಂಗಳಲ್ಲಿ ಬಿಡುಗಡೆಯಾಗಲಿದೆ. 16 ಕಿ.ಮೀ. ವ್ಯಾಪ್ತಿಯಲ್ಲಿನ ವರದಿ ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಅಣು ವಿದ್ಯುತ್ ನಿಗಮದ ಸುತ್ತಮುತ್ತ ಇರುವ ಕಾರವಾರ, ಯಲ್ಲಾಪುರ, ಜೋಯಿಡಾ ಹಾಗೂ ಅಂಕೋಲಾ ತಾಲೂಕು ವ್ಯಾಪ್ತಿಯಲ್ಲಿ ಈ ಸಮೀಕ್ಷೆ ನಡೆಸಲಾಗಿತ್ತು. ಸಮೀಕ್ಷೆಯಲ್ಲಿ ಉಳಿದೆಡೆಗಿಂತ ಈ ಪ್ರದೇಶದಲ್ಲಿ ಕ್ಯಾನ್ಸರ್ ಪ್ರಮಾಣ ಕಡಿಮೆ ಇರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದರು.
ಈ ಪ್ರದೇಶದಲ್ಲಿ ಉಳಿದೆಡೆ ಇರುವಂತೆ ತಂಬಾಕು ಸೇವನೆ ಹಾಗೂ ಇತರ ಕಾರಣಗಳಿಂದ ಉಂಟಾದ ಕ್ಯಾನ್ಸರ್ ಕಂಡುಬಂದಿದೆ. ವಿಕಿರಣದಿಂದ ಸಾಮಾನ್ಯವಾಗಿ ಲ್ಯುಕೇಮಿಯಾ ಹಾಗೂ ಥೈರಾಯ್ಡ್ ಕ್ಯಾನ್ಸರ್ ಕಂಡುಬರುತ್ತದೆ. ಆದರೆ, ಈ ಪ್ರದೇಶದಲ್ಲಿ ಕೇವಲ ಒಂದೇ ಒಂದು ಲ್ಯುಕೇಮಿಯಾ ಪ್ರಕರಣ ಬೆಳಕಿಗೆ ಬಂದಿದೆ ಎಂದರು.
ರಾಜ್ಯಕ್ಕೆ 1000 ಮೆಗಾ ವ್ಯಾಟ್: ಕೈಗಾದಲ್ಲಿ ತಲಾ 700 ಮೆ.ವ್ಯಾ. ಸಾಮರ್ಥ್ಯದ ಎರಡು ವಿದ್ಯುತ್ ಘಟಕಗಳು ನಿರ್ಮಾಣವಾದ ಮೇಲೆ ರಾಜ್ಯದ ವಿದ್ಯುತ್ ಜಾಲಕ್ಕೆ ಒಟ್ಟು ಕೈಗಾದಿಂದ ನೀಡುವ ವಿದ್ಯುತ್ ಪ್ರಮಾಣ 1000 ಮೆ.ವ್ಯಾ.ಗಳಿಗೆ ಹೆಚ್ಚಲಿದೆ. ಈಗ 300 ಮೆ.ವ್ಯಾ. ನೀಡಲಾಗುತ್ತಿದ್ದು, ಘಟಕ ನಿರ್ಮಾಣದ ನಂತರ 700 ಮೆ.ವ್ಯಾ. ನೀಡಲಾಗುವುದು ಎಂದು ಕೈಗಾ 3ಹಾಗೂ 4ನೇ ಘಟಕದ ನಿರ್ದೇಶಕ ಜೆ.ಆರ್. ದೇಶಪಾಂಡೆ ತಿಳಿಸಿದರು.
ನಿರಂತರ 941 ದಿನ ಉತ್ಪಾದನೆ: 10ರಂದು ಕೈಗಾ ವಿಶ್ವದಾಖಲೆ
ಒಂದನೇ ಘಟಕ ಸೋಮವಾರ ನಿರಂತರವಾಗಿ 934 ದಿನಗಳ ಕಾಲ ವಿದ್ಯುತ್ ಉತ್ಪಾದಿಸಿದೆ. ಸದ್ಯ ನಿರಂತರವಾಗಿ ಅತಿ ಹೆಚ್ಚು ದಿನ ವಿದ್ಯುತ್ ಉತ್ಪಾದಿಸಿದ ದಾಖಲೆ ಬ್ರಿಟನ್‌ನ ಹೇಶಮ್ ಅಣು ವಿದ್ಯುತ್ ಘಟಕ (940 ದಿನಗಳು) ಹೆಸರಿನಲ್ಲಿದೆ. ಡಿ.10ರಂದು 1ನೇ ಘಟಕ ವಿಶ್ವದಾಖಲೆ ಸ್ಥಾಪಿಸಲಿದೆ. ಡಿ. 30ರ ನಂತರ ಘಟಕದಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಿ 45 ದಿನಗಳ ನಿರ್ವಹಣಾ ಕಾಮಗಾರಿ ನಡೆಸಿ ಪುನಾರಂಭಿಸಲಾಗುವುದು ಎಂದು ದೇಶಪಾಂಡೆ ತಿಳಿಸಿದರು.