
ಬೆಂಗಳೂರು(ಸೆ.14): ಕಾವೇರಿ ವಿಚಾರವಾಗಿ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ನಡೆದ ಹಿಂಸಾಚಾರದಿಂದಾಗಿ ಬರೋಬ್ಬರಿ 22 ಸಾವಿರದಿಂದ 25 ಸಾವಿರ ಕೋಟಿವರೆಗೂ ನಷ್ಟವಾಗಿದೆ ಎಂದು ಕೈಗಾರಿಕ ಮಂಡಳಿ ಅಸೋಚಾಮ್ ಹೇಳಿದೆ.
ಕರ್ನಾಟಕದ ಇತರ ನಗರಗಳು ಸೇರಿದಂತೆ ಸಿಲಿಕಾನ್ ಸಿಟಿ ಖ್ಯಾತಿಯ ಬೆಂಗಳೂರಿನಲ್ಲಿ ನಡೆದ ಹಿಂಸಾಚಾರದಿಂದಾಗಿ ಸುಮಾರು 500 ಕಂಪನಿಗಳು ಮುಚ್ಚಲ್ಪಟ್ಟಿದ್ದವು. ಹೀಗಾಗಿ ವ್ಯವಹಾರಗಳು ಉತ್ಪಾದಕತೆ ಹಾಗೂ ಸಾಮಾನುಗಳು ಹಾಗೂ ಸಾಗಾಣಿಕೆಗೂ ಅಡ್ಡಿ ಉಂಟಾಗಿದ್ದರಿಂದ ಈ ಮೊತ್ತದ ನಷ್ಟ ಸಂಭವಿಸಲು ಕಾರಣವಾಗಿದ್ದು ಇನ್ನು ಮುಂದೆ ಈ ರೀತಿಯ ಹಿಂಸಾಚಾರಕ್ಕೆ ಮುಂದಾಗದೆ ಶಾಂತಿ ಕಾಪಾಡಲು ಉಭಯ ರಾಜ್ಯಗಳು ಪ್ರಯತ್ನಿಸಬೇಕು ಎಂದು ಅಸೋಚಾಮ್ ಮನವಿ ಮಾಡಿದೆ.
ದೇಶದ ಸಿಲಿಕಾನ್ ಸಿಟಿ ಎಂಬ ಖ್ಯಾತಿ ಹೊಂದಿದ್ದ ಬೆಂಗಳೂರು ಇದೀಗ ಹಿಂಸಾಚಾರದಿಂದಾಗಿ ಆ ಖ್ಯಾತಿಯನ್ನು ಕಳೆದುಕೊಳ್ಳುವಂತಾಗಿದ್ದು, ಇದು ವ್ಯಾಪಾರ ಮತ್ತು ಕೈಗಾರಿಕಾ ಸಮುದಾಯದವರ ಎದೆಗುಂದುವಂತೆ ಮಾಡಿದೆ ಎಂದು ಅಸೋಚಾಮ್ ಕಾರ್ಯದರ್ಶಿ ಡಿಎಸ್ ರಾವತ್ ಕಳವಳ ವ್ಯಕ್ತಪಡಿಸಿದ್ದಾರೆ.
ಐಟಿ ಕ್ಷೇತ್ರ, ಅಂತರ ರಾಜ್ಯ ಪ್ರವಾಸೋದ್ಯಮ, ಕೈಗಾರಿಕಾ ಉತ್ಪಾದನೆ, ಸರಕು ಮತ್ತು ಚಿಲ್ಲರೆ ಮಾರಾಟ, ಚಿತ್ರಮಂದಿರ, ರೆಸ್ಟೋರೆಂಟ್, ಹೊಟೇಲ್ ಮತ್ತು ಪಬ್ಸ್ ಸೇರಿದಂತೆ ಇನ್ನಿತರ ವಾಣಿಜ್ಯ ವಹಿವಾಟುಗಳು ಸ್ಥಗಿತಗೊಂಡಿದ್ದರಿಂದ ಈ ಮೊತ್ತದ ನಷ್ಟ ಅನುಭವಿಸಬೇಕಾಗಿದೆ ಎಂದು ರಾವತ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.