
ನವದೆಹಲಿ(ನ.30): ಈಗ 500, 1,000 ಮುಖಬೆಲೆಯ ನೋಟುಗಳು ಕೇವಲ ಕಾಗದದ ಚೂರುಗಳೇ ಹೊರತು ಅದಕ್ಕೆ ಯಾವ ಬೆಲೆಯೂ ಇಲ್ಲ. ಹಾಗಾದರೆ, ಈ ಹಳೇ ನೋಟುಗಳೆಲ್ಲ ಸಂಗ್ರಹವಾದ ಮೇಲೆ ಅದನ್ನು ಏನು ಮಾಡುತ್ತಾರೆ ಎಂಬ ಪ್ರಶ್ನೆ ಹಲವರಲ್ಲಿ ಮೂಡಿರಬಹುದು. ಅದಕ್ಕೆ ಉತ್ತರ ಇಲ್ಲಿದೆ.
ಕೇರಳದ ಕಣ್ಣೂರಿನಲ್ಲಿರುವ ವೆಸ್ಟರ್ನ್ ಇಂಡಿಯಾ ಪ್ಲೈವುಡ್(ಡಬ್ಲ್ಯುಐಪಿಎಲ್) ಕಂಪನಿಯು ಈ ನೋಟುಗಳನ್ನು ಪ್ಲೈವುಡ್, ಸ್ಟೇಷನರಿ ಹಾಗೂ ಇಂಧನವಾಗಿ ಪರಿವರ್ತಿಸಿ, ಅವುಗಳನ್ನು ಮರುಬಳಕೆಗೆ ಸಿದ್ಧವಾಗಿಸುತ್ತದಂತೆ. ಹೀಗಂತ ಸ್ವತಃ ಆ ಕಂಪನಿಯೇ ಹೇಳಿಕೊಂಡಿದೆ ಎಂದು ‘ಸ್ಟ್‌ಪೋಸ್ಟ್ ಇಂಡಿಯಾ’ ವರದಿ ಮಾಡಿದೆ.
ಕೇಂದ್ರೀಯ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ 40 ಪರಿಶೀಲನಾ ಹಾಗೂ ಚೂರು ಮಾಡುವ ಯಂತ್ರಗಳಿದ್ದು, ಆಮದು ಮಾಡಿರುವ ಈ ಯಂತ್ರಗಳು ಗಂಟೆಗೆ 2.50 ಲಕ್ಷ ನೋಟುಗಳನ್ನು ನಾಶ ಮಾಡಬಲ್ಲವು. ಒಂದು ಬಾರಿ ಈ ನೋಟುಗಳನ್ನು ಚೂರು ಚೂರು ಮಾಡಿದ ಬಳಿಕ, ಇವುಗಳನ್ನು ಡೀಲರ್‌ಗಳಿಗೆ ಕಳುಹಿಸಲಾಗುತ್ತದೆ. ಅವರು ಈ ನೋಟುಗಳನ್ನು ಸಂಕ್ಷೇಪಿಸಿ ಇದ್ದಿಲ ಉಂಡೆ(ಬ್ರಿಕೆಟ್)ಗಳಾಗಿ ಮಾರ್ಪಾಡು ಮಾಡುತ್ತಾರೆ ಎಂದು ವರದಿ ತಿಳಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಡಬ್ಲ್ಯುಐಪಿಎಲ್ ವ್ಯವಸ್ಥಾಪಕ ನಿರ್ದೇಶಕ ಪಿ ಕೆ ಮಾಯನ್ ಮೊಹಮ್ಮದ್, ‘‘ಕಳೆದ 3 ವಾರಗಳಲ್ಲಿ ಆರ್‌ಬಿಐ ನಮಗೆ ಸುಮಾರು 140 ಟನ್‌ಗಳಷ್ಟು ಹಳೇ ನೋಟುಗಳನ್ನು ಕಳುಹಿಸಿಕೊಟ್ಟಿದೆ. ನಾವು ನಮ್ಮ ಘಟಕದಲ್ಲಿ ಆ ನೋಟುಗಳ ಚೂರುಗಳನ್ನು ಮರದ ಚಕ್ಕೆಗಳೊಂದಿಗೆ ಮಿಶ್ರ ಮಾಡುತ್ತೇವೆ. ನಂತರ ಅವುಗಳನ್ನು ಪಲ್ಪ್(ಕಾಗದದ ಚೂರುಗಳನ್ನು ರುಬ್ಬಿ ಮಾಡಿದ ಮೆದು ಪದಾರ್ಥ) ಆಗಿ ಪರಿವರ್ತಿಸುತ್ತೇವೆ. ಸಂಕ್ಷೇಪಿಸಲಾದ 100 ಕೆಜಿ ಪಲ್ಪ್‌ನಲ್ಲಿ 7 ಕೆಜಿಯಷ್ಟು ನೋಟಿನ ಚೂರುಗಳೇ ಆಗಿರುತ್ತವೆ. ಉಳಿದವು ಮಾತ್ರ ಮರದ ಚಕ್ಕೆಗಳಾಗಿರುತ್ತವೆ. ಈ ಪಲ್ಪ್‌ಗಳನ್ನು ನಂತರ ಕ್ಯಾಲೆಂಡರ್, ಪೇಪರ್ ವೈಟ್, ರೈಲುಗಳು, ಬೋರ್ಡ್‌ಗಳನ್ನು ತಯಾರಿಸಲು ಬಳಸಲಾಗುತ್ತದೆ,’’ ಎಂದಿದ್ದಾರೆ.
ಇದೇ ವೇಳೆ, ನೋಟುಗಳಿಂದ ಮಾಡಿದ ಇದ್ದಿಲ ಉಂಡೆಯನ್ನು ಅಡುಗೆಗೆ, ಲೈಟಿಂಗ್‌ಗೆ ಬಳಸಲಾಗುತ್ತದೆ. ಇದು ಕಲ್ಲಿದ್ದಲಿಗಿಂತ ಅಗ್ಗವಾಗಿದ್ದು, ಕಡಿಮೆ ಮಾಲಿನ್ಯಕಾರಕವೂ ಹೌದು. ಇವುಗಳನ್ನು ಸಂಗ್ರಹಿಸಲು ಮತ್ತು ಪ್ಯಾಕ್ ಮಾಡುವುದೂ ಸುಲಭ ಎಂದು ಬಿಬಿಸಿ ವರದಿ ಮಾಡಿದೆ.
ಹಿಂದೆ ಆರ್‌ಬಿಐ ಹಳೇ ನೋಟುಗಳನ್ನು ಬೆಂಕಿಗೆ ಹಾಕಿ ಸುಟ್ಟು ಹಾಕುತ್ತಿತ್ತು. ಇದು ಪರಿಸರಕ್ಕೆ ತೀವ್ರ ಹಾನಿ ಮಾಡುತ್ತಿದ್ದುದರಿಂದ ಈ ಕ್ರಮ ಬಿಟ್ಟು ಪರಿಸರ ಸ್ನೇಹಿ ಕ್ರಮಕ್ಕೆ ಮುಂದಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.