ಬಿಜೆಪಿಗೆ ಭರ್ಜರಿ ಗೆಲುವಿಗೆ ಬಿಎಸ್ ವೈ ಮಾಸ್ಟರ್ ಪ್ಲಾನ್

By Web DeskFirst Published Jul 27, 2018, 9:24 AM IST
Highlights

ಲೋಕಸಭಾ ಚುನಾವಣೆಯಲ್ಲಿಯೂ ಕೂಡ ಭರ್ಜರಿ ಗೆಲುವು ಪಡೆಯುವ ನಿಟ್ಟಿನಲ್ಲಿ ಈಗಾಗಲೇ ಬಿಜೆಪಿ ಸಿದ್ಧತೆಯಲ್ಲಿ ತೊಡಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಶ್ರಾವಣ ಮಾಸದಿಂದ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. 

ಬೆಂಗಳೂರು :  ಮುಂಬರುವ ಲೋಕಸಭಾ ಚುನಾವಣೆಗೆ ತಯಾರಿ ಆರಂಭಿಸಿ ಎಂಬ ಪಕ್ಷದ ವರಿಷ್ಠರ ಸೂಚನೆ ಮೇರೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ .ಯಡಿಯೂರಪ್ಪ ಅವರು ಮುಂದಿನ ತಿಂಗಳಲ್ಲಿನ ಶ್ರಾವಣ ಮಾಸದಿಂದ ರಾಜ್ಯ ಪ್ರವಾಸ ಆರಂಭಿಸಲಿದ್ದಾರೆ. ರಾಜ್ಯದಲ್ಲಿನ ಒಟ್ಟು 28 ಲೋಕಸಭಾ ಕ್ಷೇತ್ರಗಳ ಪೈಕಿ ಶತಾಯಗತಾಯ ಕನಿಷ್ಠ 20 ಸ್ಥಾನಗಳನ್ನಾದರೂ ಗೆಲ್ಲುತ್ತೇವೆ ಎಂಬ ಭರವಸೆಯನ್ನು ವರಿಷ್ಠರಿಗೆ ಕೊಟ್ಟಿರುವ
ಯಡಿಯೂರಪ್ಪ ಅವರು ಮೊದಲ ಹಂತದಲ್ಲಿ ಪ್ರತಿ ಜಿಲ್ಲೆಗೂ ಭೇಟಿ ನೀಡಲು ನಿರ್ಧರಿಸಿದ್ದಾರೆ.

ಒಬ್ಬ ವ್ಯಕ್ತಿಗೆ ಒಂದು ಹುದ್ದೆ ಎಂಬ ಪಕ್ಷದ ಅಲಿಖಿತ ನಿಯಮವಾಗಿದ್ದರೂ ಕೂಡ ಈಗ ವಿಧಾನಸಭೆಯ ಪ್ರತಿಪಕ್ಷದ ನಾಯಕರೂ ಆಗಿರುವ ಯಡಿಯೂರಪ್ಪ ಅವರನ್ನು ಲೋಕಸಭಾ ಚುನಾವಣೆವರೆಗೆ ರಾಜ್ಯಾಧ್ಯಕ್ಷ ಸ್ಥಾನದಲ್ಲೂ ಮುಂದು ವರೆಸುವ ಬಗ್ಗೆ ಬಿಜೆಪಿ ಹೈಕಮಾಂಡ್ ಒಲವು ವ್ಯಕ್ತಪಡಿಸಿದೆ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ 104 ಸ್ಥಾನಗಳಲ್ಲಿ  ಗೆಲುವು ಸಾಧಿಸಿರುವಲ್ಲಿ ಯಡಿಯೂರಪ್ಪ ಅವರ ಪಾತ್ರವೂ ಪ್ರಮುಖವಾಗಿದ್ದರಿಂದ ಲೋಕಸಭಾ ಚುನಾವಣೆ ಯನ್ನೂ ಅವರ ನೇತೃತ್ವದಲ್ಲೇ ಎದುರಿಸಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಲೋಕಸಭಾ ಚುನಾವಣೆಯಲ್ಲಿ ಸ್ಥಾನ ಹೊಂದಾಣಿಕೆ ಮಾಡಿಕೊಳ್ಳುವುದಾಗಿ ಘೋಷಿಸಿರುವುದರಿಂದ ಬಿಜೆಪಿ ವರಿಷ್ಠರು ಕೂಡ ಈ ಬೆಳವಣಿಗೆಯನ್ನು ಕುತೂಹಲದಿಂದ ಗಮನಿಸುತ್ತಿದ್ದು, ಈಗಿನಿಂದಲೇ ಚುನಾವಣೆಗೆ ಸಿದ್ಧತೆ ಆರಂಭಿಸುವುದು ಸೂಕ್ತ ಎಂಬ ಸೂಚನೆ ನೀಡಿದೆ. ಅದರ ಪ್ರಕಾರ ಯಡಿಯೂರಪ್ಪ ಅವರು ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.

ರಾಜ್ಯದಲ್ಲಿನ ಸಮ್ಮಿಶ್ರ ಸರ್ಕಾರದ ವೈಫಲ್ಯಗಳ ವಿರುದ್ಧ ಪಕ್ಷದ ಕಾರ್ಯಕರ್ತರು ಹಾಗೂ ಜನಸಾಮಾನ್ಯರಿಗೆ ಮಾಹಿತಿ ನೀಡುವುದರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳನ್ನು ತಲುಪಿಸುವುದೂ ಈ ಪ್ರವಾಸದ ಮುಖ್ಯ ಉದ್ದೇಶವಾಗಿದೆ. ಜೊತೆಗೆ ಕಳೆದ ವಿಧಾನಸಭಾ ಚುನಾವಣೆ ವೇಳೆ ಹಲವು ಜಿಲ್ಲೆ, ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಮುಖಂಡರ ನಡುವೆ ಭಿನ್ನಾಭಿಪ್ರಾಯ ಕಾಣಿಸಿತ್ತು. 

ಅದನ್ನು ನಿವಾರಿಸಿ ಆ ಮುಖಂಡರ ನಡುವೆ ಸೌಹಾರ್ದ ವಾತಾವರಣ ನಿರ್ಮಿಸುವ ಜವಾಬ್ದಾರಿಯನ್ನೂ ಯಡಿಯೂರಪ್ಪ ಅವರು ನಿಭಾಯಿಸಬೇಕಾಗಿದೆ. ಈಗಾಗಲೇ ಕೆಲವು ಜಿಲ್ಲೆಗಳ ಮುಖಂಡರನ್ನು ಬೆಂಗಳೂರಿಗೇ ಕರೆಸಿ ಮಾತುಕತೆ ಯನ್ನೂ ಆರಂಭಿಸಿದ್ದಾರೆ. ಆಯಾ ಜಿಲ್ಲೆಗಳಿಗೆ ಭೇಟಿ ನೀಡಿದ ವೇಳೆ ಮತ್ತಷ್ಟು ತಿಳಿಗೊಳಿಸುವ ಉದ್ದೇಶವನ್ನು ಯಡಿಯೂರಪ್ಪ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.

ಈ ಮೊದಲು ಶುಕ್ರವಾರದ ಚಂದ್ರಗ್ರಹಣದ ನಂತರ ರಾಜ್ಯ ಪ್ರವಾಸ ಕೈಗೊಳ್ಳಲು ಯಡಿಯೂರಪ್ಪ ಅವರು ಸಿದ್ಧರಾಗಿದ್ದರೂ ನಂತರ ಆಪ್ತರು ಹಾಗೂ ಜ್ಯೋತಿಷಿಗಳ ಸಲಹೆಯಂತೆ ಆಷಾಢ ಮಾಸ ಮುಗಿದ ನಂತರವೇ ಪ್ರವಾಸ ಕೈಗೊಳ್ಳಲು ನಿರ್ಧರಿಸಿದರು ಎನ್ನಲಾಗಿದೆ.

click me!