ಮಂಡ್ಯ ಕಾರ್ಯಕರ್ತರ ಜೊತೆ ಗಪ್‌ಚುಪ್ ಮಾತುಕತೆ ನಡೆಸಿದ ನಿಖಿಲ್!

By Web DeskFirst Published 16, Jan 2019, 11:07 AM IST
Highlights

ಮಂಡ್ಯದಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ? ಮಂಡ್ಯದಲ್ಲಿ ಶುರುವಾಗಿದೆ ಲೋಕಸಭಾ ಚುನಾವಣಾ ಲೆಕ್ಕಾಚಾರ | ದೇವೇಗೌಡರ ಆಟ ಬಲ್ಲವರ್ಯಾರು? 

ಮಂಡ್ಯ (ಜ. 16):  ಜೆಡಿಎಸ್‌ ಭದ್ರಕೋಟೆ ಹಾಸನ ಲೋಕಸಭಾ ಕ್ಷೇತ್ರದಿಂದ ಸಚಿವ ರೇವಣ್ಣ ಅವರ ಪುತ್ರ ಪ್ರಜ್ವಲ್‌ ರೇವಣ್ಣ ಅವರ ಸ್ಪರ್ಧೆ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲೇ ಜೆಡಿಎಸ್‌ ಪ್ರಾಬಲ್ಯವಿರುವ ಮತ್ತೊಂದು ಕ್ಷೇತ್ರವಾದ ಮಂಡ್ಯದಿಂದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್‌ ಕುಮಾರಸ್ವಾಮಿ ಅಭ್ಯರ್ಥಿಯಾಗುವ ಲಕ್ಷಣಗಳು ಹೆಚ್ಚಾಗುತ್ತಿವೆ.

ಮಂಡ್ಯಕ್ಕೆ  ಭೇಟಿ ನೀಡಿದ್ದ ನಿಖಿಲ್‌ ಕುಮಾರಸ್ವಾಮಿ, ಪ್ರವಾಸಿ ಮಂದಿರದಲ್ಲಿ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ಶಾಸರೊಂದಿಗೆ ಗೌಪ್ಯ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್‌.ಪುಟ್ಟರಾಜು, ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಸೇರಿದಂತೆ ಶಾಸಕರು ಹಾಗೂ ಮುಖಂಡರು, ನೀವು (ನಿಖಿಲ್‌) ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ಸ್ಪರ್ಧಿಸುವುದಾದರೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದು ನಿಖಿಲ್ ಹೇಳಿದ್ದಾರೆ.  

ನನಗೆ ಸಿನಿಮಾ ಮತ್ತು ರಾಜಕೀಯ ರಂಗ ಎರಡು ಇಷ್ಟ. ಸಕ್ರಿಯ ರಾಜಕಾರಣಕ್ಕೆ ಧುಮುಕುವುದು ಹಾಗೂ ಚುನಾವಣೆಗೆ ಸ್ಪರ್ಧಿಸುವ ವಿಚಾರ ನನ್ನದಲ್ಲ. ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ನನ್ನ ವೈಯಕ್ತಿಕ ನಿರ್ಧಾರಕ್ಕಿಂತ ಪಕ್ಷದ ನಿರ್ಧಾರವೇ ಮುಖ್ಯ. ಹೀಗಾಗಿ ಮಂಡ್ಯದಿಂದ ನನಗೆ ಟಿಕೆಟ್‌ ನೀಡುವುದು, ಬಿಡುವುದು ನಮ್ಮ ತಾತ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ, ತಂದೆ ಕುಮಾರಸ್ವಾಮಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷರಿಗೆ ಬಿಟ್ಟಿದ್ದು. ಅವರು ಕೈಗೊಳ್ಳುವ ತೀರ್ಮಾನಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ನಿಖಿಲ್ ತಿಳಿಸಿದ್ದಾರೆ.

ಈ ಬಗ್ಗೆ ಸುದ್ದಿಗಾರರು ಸಚಿವ ಸಿ.ಎಸ್‌.ಪುಟ್ಟರಾಜು ಅವರನ್ನು ಪ್ರಶ್ನಿಸಿದಾಗ, ನಿಖಿಲ್‌ ಕುಮಾರಸ್ವಾಮಿ ಜಿಲ್ಲೆಗೇನು ಹೊಸಬರಲ್ಲ. ಬಹಳ ಹಿಂದಿನಿಂದಲೂ ಜಿಲ್ಲೆಯ ಜನರೊಂದಿಗೆ ಒಡನಾಟ ಇರಿಸಿಕೊಂಡಿದ್ದಾರೆ. ಇಂದು ಸಂಕ್ರಾಂತಿ ಶುಭಾಶಯ ತಿಳಿಸಲು ಬಂದಿದ್ದರು. ನಾವು ಅವರನ್ನು ಭೇಟಿಯಾಗಿದ್ದೇವೆ. ಅದಕ್ಕೆ ವಿಶೇಷ ಮಹತ್ವ ನೀಡುವ ಅಗತ್ಯವಿಲ್ಲ ಎಂದು ಹೇಳಿದರು. 

Last Updated 16, Jan 2019, 12:24 PM IST