ಪಕ್ಷ, ರಾಜಕೀಯ ಬಿಟ್ಟು ಒಂದಾಗಿ ಇರೋಣ : ಪ್ರಜ್ವಲ್ ಗೆ ತೇಜಸ್ವಿ ಸಲಹೆ

By Web DeskFirst Published May 25, 2019, 9:02 AM IST
Highlights

ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿದ್ದ ತೇಜಸ್ವಿ ಸೂರ್ಯ ಸಂಸದರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. 

ಬೆಂಗಳೂರು :  ಸಂವಿಧಾನ ಬದಲಾಯಿಸುವ ಪ್ರಯತ್ನವನ್ನು ಬಿಜೆಪಿ ಮಾಡಿಲ್ಲ ಎಂದು ನೂತನ ಸಂಸದ ತೇಜಸ್ವಿ ಸೂರ್ಯ ಹೇಳಿದರು.

ಲೋಕಸಭೆಗೆ ಆಯ್ಕೆಯಾದ ಬಳಿಕ ವಿಧಾನಸೌಧ ಬಳಿ ಇರುವ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರ ತಮ್ಮ ಮೇಲೆ ಇಟ್ಟಿದ್ದ ಭರವಸೆಯನ್ನು ಜನ ದುಪ್ಪಟ್ಟು ಮಾಡಿದ್ದಾರೆ. ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದನಾಗಿ ಮೊದಲ ಕೆಲಸ ಮಾಡಿದ್ದೇನೆ. ಪ್ರತಿಯೊಬ್ಬ ಸಂಸದ ತನ್ನ ಕೆಲಸ ಪ್ರಾರಂಭ ಮಾಡುವುದು ಅಂಬೇಡ್ಕರ್‌ ಅವರ ಸಂವಿಧಾನದ ಮೇಲೆ ಪ್ರಮಾಣ ಮಾಡಿ. ಕಾಲೇಜು ದಿನಗಳಿಂದಲೂ ಅಂಬೇಡ್ಕರ್‌ ನನಗೆ ಆದರ್ಶ ವ್ಯಕ್ತಿ. ಅಂಬೇಡ್ಕರ್‌ ಅವರ ಜೀವನ ಸಾಧನೆಗಳು ನನಗೆ ಸ್ಫೂರ್ತಿ. ಹೀಗಾಗಿ ಸಂಸದನಾಗಿ ಆಯ್ಕೆಯಾದ ಕೂಡಲೇ ಅಂಬೇಡ್ಕರ್‌ ಅವರ ಪ್ರತಿಮೆ ಪುಷ್ಪ ನಮನ ಸಲ್ಲಿಸಿದ್ದೇನೆ ಎಂದರು.

ಲೋಕಸಭಾ ಚುನಾವಣೆ ಫಲಿತಾಂಶದಿಂದ ಇಡೀ ಭಾರತ ಗೆದ್ದಿದೆ. ಚುನಾವಣೆಯ ಗೆಲುವು ಭಾರತದ ಸಂವಿಧಾನದ ಗೆಲುವು ಎಂದು ಮೋದಿ ಹೇಳಿದ್ದಾರೆ ಎಂದು ಹೇಳಿದರು.

ಹಾಸನ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಪ್ರಜ್ವಲ್‌ ರೇವಣ್ಣ ರಾಜೀನಾಮೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಜನಾದೇಶ ಕೊಟ್ಟು ಆಗಿದೆ. ಮಾಜಿ ಪ್ರಧಾನಿಯೂ ಆಗಿರುವ ಎಚ್‌.ಡಿ.ದೇವೇಗೌಡ ಅವರ ಮಾರ್ಗದರ್ಶನದಲ್ಲಿ ನೀವು ಲೋಕಸಭೆಯಲ್ಲಿ ಇರಬೇಕು. ಚುನಾವಣೆ ಮುಗಿದಿದೆ. ಪಕ್ಷ ರಾಜಕೀಯ ಬಿಟ್ಟು ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ. ಸಂಸತ್ತಿನಲ್ಲಿ ಕನ್ನಡದ ಶಕ್ತಿಯಾಗಿ ನೀವು ಇರಬೇಕು. ಇದು ಸ್ನೇಹಿತನಾಗಿ ಪ್ರಜ್ವಲ್‌ಗೆ ತಮ್ಮ ಸಲಹೆ ಎಂದು ತೇಜಸ್ವಿ ಸೂರ್ಯ ಇದೇ ವೇಳೆ ಹೇಳಿದರು.

click me!