ಸಾಲ ತೀರಿಸಲು ಕ್ಯಾಶ್ ಕಟ್ಟಿದ್ರೆ ಪಾವತಿಯ ವಿವರ ಕೊಡಬೇಕು

By Suvarna Web DeskFirst Published Apr 9, 2017, 6:12 PM IST
Highlights

ಆದಾಯ, ವಿನಾಯಿತಿ ಬೇಡಿಕೆ, ಪಾವತಿಸಲಾದ ತೆರಿಗೆ ಜತೆಗೆ ಈ ಅರ್ಜಿಯಲ್ಲಿ 2016ರ ನ.9ರಿಂದ ಡಿ.30ರವರೆಗೆ 500, 1000 ರು. ಮುಖಬೆಲೆಯ ನೋಟುಗಳ ರೂಪದಲ್ಲಿ ಬ್ಯಾಂಕಿಗೆ ಮಾಡಲಾದ ಠೇವಣಿಯ ವಿವರ ಕೇಳಲಾಗಿದೆ.

ನವದೆಹಲಿ(ಏ.09): ಅಪನಗದೀಕರಣದ 50 ದಿನಗಳ ಅವಯಲ್ಲಿ ಸಾಲ ತೀರಿಸಲು ಹಾಗೂ ಕ್ರೆಡಿಟ್ ಕಾರ್ಡ್ ಬಿಲ್ ಕಟ್ಟಲು 2 ಲಕ್ಷ ರು. ಮೇಲ್ಪಟ್ಟ ನಗದು ಪಾವತಿಸಿದ್ದರೆ ಅದನ್ನು ಈ ಬಾರಿ ಆದಾಯ ತೆರಿಗೆ ಅರ್ಜಿಯಲ್ಲಿ ಘೋಷಣೆ ಮಾಡಿಕೊಳ್ಳಬೇಕು.

2017-18ನೇ ಸಾಲಿಗೆ ಕೇಂದ್ರ ಸರ್ಕಾರ ಒಂದು ಪುಟದ ಹೊಸ ಆದಾಯ ತೆರಿಗೆ ರಿಟರ್ನ್ ಅರ್ಜಿಯನ್ನು ಕೆಲ ದಿನಗಳ ಹಿಂದೆ ಬಿಡುಗಡೆ ಮಾಡಿದೆ. ಆದಾಯ, ವಿನಾಯಿತಿ ಬೇಡಿಕೆ, ಪಾವತಿಸಲಾದ ತೆರಿಗೆ ಜತೆಗೆ ಈ ಅರ್ಜಿಯಲ್ಲಿ 2016ರ ನ.9ರಿಂದ ಡಿ.30ರವರೆಗೆ 500, 1000 ರು. ಮುಖಬೆಲೆಯ ನೋಟುಗಳ ರೂಪದಲ್ಲಿ ಬ್ಯಾಂಕಿಗೆ ಮಾಡಲಾದ ಠೇವಣಿಯ ವಿವರ ಕೇಳಲಾಗಿದೆ. ಅಲ್ಲದೆ, ಸಾಲ ಹಾಗೂ ಕ್ರೆಡಿಟ್ ಕಾರ್ಡ್ ಬಿಲ್ ಕಟ್ಟಲು 2 ಲಕ್ಷ ರು. ಮೇಲ್ಪಟ್ಟು ನಗದು ಪಾವತಿಸಿದ್ದರೆ ಆ ವಿವರವನ್ನೂ ನೀಡಲು ಸೂಚಿಸಲಾಗಿದೆ. ಅಪನಗದೀಕರಣದ ಅವಯಲ್ಲಿ ಮಾಡಲಾದ ಠೇವಣಿ ಜತೆಗೆ ವಾರ್ಷಿಕ ಆದಾಯವನ್ನು ತುಲನೆ ಮಾಡುವ ಪ್ರಯತ್ನ ಇದಾಗಿದೆ ಎಂದು ತೆರಿಗೆ ಅಕಾರಿಯೊಬ್ಬರು ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಹಳೆಯ 500, 1000 ರು. ಮುಖಬೆಲೆಯ ನೋಟುಗಳನ್ನು ರದ್ದುಪಡಿಸುತ್ತಿದ್ದಂತೆ ಕ್ರೆಡಿಟ್ ಕಾರ್ಡ್ ಬಳಸಿ ಭಾರಿ ಮೊತ್ತದ ಖರೀದಿ ನಡೆಸಿದ್ದ ಕೆಲವರು ಹಳೆಯ ನೋಟುಗಳ ರೂಪದಲ್ಲಿ ಬಿಲ್ ಕಟ್ಟಿದ್ದರು. ಇನ್ನೂ ಕೆಲವರು ತರಾತುರಿಯಲ್ಲಿ ಸಾಲ ಮರುಪಾವತಿಸಿದ್ದರು. ಅದು ಕಪ್ಪು ಹಣವೇ ಅಲ್ಲವೇ ಎಂಬುದನ್ನು ಪತ್ತೆ ಹಚ್ಚಲು ಸರ್ಕಾರ ಈ ಮಾರ್ಗ ಆಯ್ಕೆ ಮಾಡಿಕೊಂಡಿದೆ.

click me!