
ನವದೆಹಲಿ(ಏ.09): ಮೇ 26ಕ್ಕೆ ಯಶಸ್ವಿಯಾಗಿ ಮೂರು ವರ್ಷಗಳನ್ನು ಪೂರೈಸಲಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತನ್ನ ಸಾಧನೆಯನ್ನು ಬಿಂಬಿಸಿಕೊಳ್ಳಲು ಭರದ ತಯಾರಿಯಲ್ಲಿ ತೊಡಗಿದೆ. ಮೂರು ವರ್ಷಗಳ ಅವಧಿಯಲ್ಲಿ ಜನರಿಗೆ ಉಪಯೋಗವಾದಂತಹ ಪ್ರಮುಖ ಐದು ಸಾಧನೆಗಳ ವಿವರ ನೀಡುವಂತೆ ಪ್ರತಿ ಸಚಿವರಿಗೂ ಈಗಾಗಲೇ ಸೂಚನೆ ನೀಡಿದೆ.
ಈ ಸಂಬಂಧ ಮಾಹಿತಿ ಹಾಗೂ ಅಭಿಪ್ರಾಯ ಕೋರಿ ಎಲ್ಲ ಸಚಿವರಿಗೂ ವಾರ್ತಾ ಮತ್ತು ಪ್ರಸಾರ ಸಚಿವ ಎಂ. ವೆಂಕಯ್ಯ ನಾಯ್ಡು ಅವರು ಕಳೆದ ವಾರ ಪತ್ರ ಬರೆದಿದ್ದಾರೆ. ಸರ್ಕಾರದ ಸಾಧನೆಯನ್ನು ಒಳಗೊಂಡ ಹೊತ್ತಿಗೆಯೊಂದನ್ನು ಮೇ 26ಕ್ಕೂ ಮುನ್ನ ಬಿಡುಗಡೆ ಮಾಡಲು ಸರ್ಕಾರ ಉದ್ದೇಶಿಸಿದ್ದು, ಅದಕ್ಕಾಗಿ ಈ ಮಾಹಿತಿಯನ್ನು ಬಯಸಲಾಗಿದೆ.
ಬುಲೆಟ್ ರೂಪದಲ್ಲಿ ಮೂರು ಪುಟಗಳ ಮಾಹಿತಿಯನ್ನು ನೀಡಬೇಕು. ಅದರಲ್ಲಿ ಐದು ಪ್ರಮುಖ ಅಂಶಗಳಿಗೆ ಆದ್ಯತೆ ನೀಡಬೇಕು. ಜನರಿಗೆ ಅನುಕೂಲವಾದ ಅಥವಾ ಜನ ಮೆಚ್ಚುಗೆಗೆ ಪಾತ್ರವಾದ ಐದು ಪ್ರಮುಖ ಸಾಧನೆಗಳು, ಕಾರ್ಯನಿರ್ವಹಣೆಗೆ ಸಂಬಂಧಿಸಿದ ಪ್ರಮುಖ ಸೂಚಿಗಳು, ಪ್ರಮುಖ ಯೋಜನೆಗಳಿಗೆ ಸಂಬಂಸಿದಂತೆ 2014 ಹಾಗೂ 2017ರ ವ್ಯತ್ಯಾಸ ತಿಳಿಸುವ ದತ್ತಾಂಶ/ಅಂಕಿ-ಸಂಖ್ಯೆ ಒದಗಿಸಬೇಕು (ಉದಾಹರಣೆಗೆ 2014ರಲ್ಲಿ ಇದ್ದ ಅಡುಗೆ ಅನಿಲ ಸಂಪರ್ಕ ಹಾಗೂ 2017ರಲ್ಲಿ ಇರುವ ಅಡುಗೆ ಅನಿಲ ಸಂಪರ್ಕದ ಮಾಹಿತಿಯನ್ನು ನೀಡಬಹುದು), ಸಚಿವಾಲಯ ಜಾರಿಗೆ ತಂದ ಮೂರು ಸುಧಾರಣೆಗಳು, ಎರಡು ಪ್ರಮುಖ ಯಶೋಗಾಥೆಗಳನ್ನು ನೀಡುವಂತೆ ವೆಂಕಯ್ಯ ನಾಯ್ಡು ಅವರು ಪ್ರತಿ ಸಚಿವಾಲಯಕ್ಕೆ ಸೂಚಿಸಿದ್ದಾರೆ.
ಪ್ರಧಾನಿ ಮೋದಿ ಅವರ ವಿದೇಶ ಪ್ರವಾಸ, ಅದರ ಪ್ರಮುಖ ಲಶ್ರುತಿ, ವಿದೇಶಗಳಿಂದ ಹರಿದುಬಂದ ಬಂಡವಾಳ ಕುರಿತ ಮುಖ್ಯಾಂಶಗಳ ಟಿಪ್ಪಣಿಯೊಂದನ್ನು ತಯಾರಿಸುವಂತೆ ವಿದೇಶಾಂಗ ಖಾತೆ ರಾಜ್ಯ ಸಚಿವ ಎಂ.ಜೆ. ಅಕ್ಬರ್ ಅವರಿಗೆ ಸೂಚಿಸಲಾಗಿದೆ. ಕಡಿಮೆ ಉದ್ಯೋಗ ಸೃಷ್ಟಿ, ವಾಕ್ ಸ್ವಾತಂತ್ರ್ಯಕ್ಕೆ ಬೆದರಿಕೆಯಂತಹ ಟೀಕೆಗಳಿಗೆ ತಿರುಗೇಟು ನೀಡಲು ಟಿಪ್ಪಣಿ ಸಿದ್ಧಪಡಿಸುವಂತೆ ಸಂಸದರಾದ ಸ್ವಪನ್ ದಾಸ್‌ಗುಪ್ತಾ ಹಾಗೂ ಚಂದನ್ ಮಿತ್ರಾ ಅವರಿಗೆ ನಿರ್ದೇಶನ ನೀಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.