
ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಈಗ ಮತ್ತೊಂದು ಮಿತ್ರಪಕ್ಷದ ತಲೆಬೇನೆ ಶುರುವಾಗಿದೆ. ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಮುಖ್ಯಸ್ಥ ಹುದ್ದೆಗೆ ನೇಮಕ ಮಾಡಲಾಗಿರುವ ನಿವೃತ್ತ ನ್ಯಾಯಮೂರ್ತಿ ಎ.ಕೆ. ಗೋಯೆಲ್ ಅವರನ್ನು ವಜಾಗೊಳಿಸಬೇಕು ಹಾಗೂ ದಲಿತ ದೌರ್ಜನ್ಯ ತಡೆ ಕಾಯ್ದೆಗೆ ತಿದ್ದುಪಡಿ ತರಬೇಕು ಎಂದು ಲೋಕಜನಶಕ್ತಿ ಪಕ್ಷ ಕೇಂದ್ರ ಸರ್ಕಾರಕ್ಕೆ ಗಡುವು ವಿಧಿಸಿದೆ.
ಈ ಬೇಡಿಕೆ ಈಡೇರದಿದ್ದರೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆಯನ್ನೂ ನೀಡಿದೆ. ಜೊತೆಗೆ ತಮ್ಮದು ಕೇವಲ ವಿಷಯಾಧಾರಿತ ಬೆಂಬಲ ಎಂದೂ ಸ್ಪಷ್ಟಪಡಿಸಿದೆ. ಎನ್‌ಡಿಎ ಕೂಟದಿಂದ ಈಗಾಗಲೇ ತೆಲುಗುದೇಶಂ ಹೊರ ನಡೆದಿರುವುದು ಹಾಗೂ ಮಹಾರಾಷ್ಟ್ರದ ಶಿವಸೇನೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ನಡೆದುಕೊಳ್ಳುತ್ತಿರುವ ಸಂದರ್ಭದಲ್ಲೇ ಲೋಕಜನಶಕ್ತಿ ಪಕ್ಷದ ನಡೆ ಸರ್ಕಾರಕ್ಕೆ ಮಗ್ಗುಲ ಮುಳ್ಳಾಗಿದೆ.
ದಲಿತ ದೌರ್ಜನ್ಯ ತಡೆ ಕಾಯ್ದೆಯನ್ನು ದುರ್ಬಲಗೊಳಿಸಿ, ದಲಿತರ ಮೇಲೆ ದೌರ್ಜನ್ಯ ಎಸಗಿದವರನ್ನು ಕೂಡಲೇ ಬಂಧಿಸಬೇಕಾಗಿಲ್ಲ ಎಂದು ಆದೇಶ ಹೊರಡಿಸಿದ ಪೀಠದಲ್ಲಿ ನ್ಯಾ| ಎ.ಕೆ. ಗೋಯೆಲ್ ಅವರೂ ಇದ್ದರು. ಅವರನ್ನು ಆ ಹುದ್ದೆಯಿಂದ ತೆಗೆದು ಹಾಕಬೇಕು ಎಂದು ದಲಿತ ಸಂಘಟನೆಗಳು ಮುಂದಿನ ತಿಂಗಳು ಪ್ರತಿಭಟನೆಗೆ ಕರೆ ನೀಡಿವೆ.
ಹೀಗಾಗಿ ಮೋದಿ ಅವರು ಗೋಯೆಲ್ ಅವರನ್ನು ವಜಾಗೊಳಿಸಬೇಕು. ದಲಿತ ದೌರ್ಜನ್ಯ ಕಾಯ್ದೆಗೆ ತಿದ್ದುಪಡಿ ತರಬೇಕು. ಆ.9 ರೊಳಗೆ ಈ ಬೇಡಿಕೆ ಈಡೇರದಿದ್ದಲ್ಲಿ ಲೋಕಜನಶಕ್ತಿ ಕೂಡ ಪ್ರತಿಭಟನೆಯಲ್ಲಿ ಭಾಗವಹಿಸಲಿದೆ ಎಂದು ಕೇಂದ್ರ ಸಚಿವ ರಾಮವಿಲಾಸ್ ಪಾಸ್ವಾನ್ ಪುತ್ರ ಚಿರಾಗ್ ಪಾಸ್ವಾನ್ ಎಚ್ಚರಿಕೆ ನೀಡಿದ್ದಾರೆ. ದಲಿತರು ಸಹನೆ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಸರ್ಕಾರ ಬೇಡಿಕೆ ಈಡೇರಿಸದಿದ್ದರೆ ಅವರ ಜತೆ ನಾವೂ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಪಕ್ಷದ ಸಂಸದೀಯ ಮಂಡಳಿ ಮುಖ್ಯಸ್ಥ ಹಾಗೂ ಸಂಸದ ಚಿರಾಗ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.