4000 ಪ್ರಾಥಮಿಕ ಶಿಕ್ಷಕರ ಅಂತಿಮ ಆಯ್ಕೆ ಪಟ್ಟಿ 26ಕ್ಕೆ?

By Web DeskFirst Published Oct 23, 2018, 8:21 AM IST
Highlights

ಪದವೀಧರ ಪ್ರಾಥಮಿಕ ಶಾಲೆಗಳ ಶಿಕ್ಷಕರ (6-8ನೇ ತರಗತಿ) ನೇಮಕಾತಿ ಸಂಬಂಧ ಅಂತಿಮ ಆಯ್ಕೆ ಪಟ್ಟಿಯನ್ನು ಶಿಕ್ಷಣ ಇಲಾಖೆ  ಶೀಘ್ರ ಪ್ರಕಟಿಸುವ ಸಾಧ್ಯತೆಗಳಿವೆ.

ಬೆಂಗಳೂರು :  ಪದವೀಧರ ಪ್ರಾಥಮಿಕ ಶಾಲೆಗಳ ಶಿಕ್ಷಕರ (6-8ನೇ ತರಗತಿ) ನೇಮಕಾತಿ ಸಂಬಂಧ 1:1 ಅನುಪಾತದ ಅಂತಿಮ ಆಯ್ಕೆ ಪಟ್ಟಿಯನ್ನು ಅ.26ರಂದು ಶಿಕ್ಷಣ ಇಲಾಖೆ ಪ್ರಕಟಿಸುವ ಸಾಧ್ಯತೆಗಳಿವೆ.

ನೇಮಕಾತಿಗೆ ಸಂಬಂಧಿಸಿದಂತೆ 1:3ರ ಅನುಪಾತದಲ್ಲಿ ಪರಿಶೀಲನಾ ಪಟ್ಟಿಪ್ರಕಟಿಸಿದ್ದ ಇಲಾಖೆ, ಬಳಿಕ 1:2 ಪಟ್ಟಿಪ್ರಕಟಿಸಿತ್ತು. ಇದೀಗ 1:1 ಅನುಪಾತದ ತಾತ್ಕಾಲಿಕ ಆಯ್ಕೆ ಪಟ್ಟಿಪ್ರಕಟಿಸಿದೆ. ಅ.26ರಂದು ಅಂತಿಮ ಆಯ್ಕೆ ಪಟ್ಟಿಪ್ರಕಟವಾಗುವ ಸಾಧ್ಯತೆಗಳಿವೆ.

ಹತ್ತು ಸಾವಿರ ಶಿಕ್ಷಕರ ನೇಮಕ ಸಂಬಂಧ 2016ರಲ್ಲಿ ಪರೀಕ್ಷೆ ನಡೆಸಲಾಗಿತ್ತು. ಪ್ರಕ್ರಿಯೆ ಪೂರ್ಣಗೊಳಿಸಲು ಒಂದಲ್ಲಾ ಒಂದು ಅಡೆತಡೆಗಳು ಎದುರಾಗುತ್ತಿದ್ದ ಹಿನ್ನೆಲೆಯಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳಲು ಎರಡು ವರ್ಷ ಕಳೆದಿವೆ. ಅಂದಾಜು 3900 ಅಭ್ಯರ್ಥಿಗಳಷ್ಟೇ ಹುದ್ದೆ ಪಡೆಯಲು ಅರ್ಹತೆ ಹೊಂದಿದ್ದಾರೆ ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.

ಮತ್ತೆ 10 ಸಾವಿರ ಶಿಕ್ಷಕರ ನೇಮಕ

ಹತ್ತು ಸಾವಿರ ಶಿಕ್ಷಕರ ನೇಮಕಾತಿಯಲ್ಲಿ ಕೇವಲ ನಾಲ್ಕು ಸಾವಿರ ಹುದ್ದೆಗಳನ್ನು ಮಾತ್ರ ತುಂಬಲಾಗುತ್ತಿದೆ. ಉಳಿದ ಆರು ಸಾವಿರ ಹುದ್ದೆ ಹಾಗೂ ಪ್ರಸಕ್ತ ಸಾಲಿನಲ್ಲಿ ಹೊಸದಾಗಿ ನಾಲ್ಕು ಸಾವಿರ ಹುದ್ದೆ ಸೇರಿ ಒಟ್ಟಾರೆ ಹತ್ತು ಸಾವಿರ ಶಿಕ್ಷಕರ ಹುದ್ದೆಗಳ ನೇಮಕಕ್ಕೆ ನವೆಂಬರ್‌ನಲ್ಲಿ ಮತ್ತೆ ಅರ್ಜಿ ಆಹ್ವಾನಿಸಲಿದೆ.

ಇಂದು ವಿಚಾರಣೆ:

ಮತ್ತೊಂದೆಡೆ ಅರ್ಹತಾ ಶಿಕ್ಷಕರ ನೇಮಕ ಮಾಡಿಕೊಳ್ಳುವುದಕ್ಕಾಗಿ ನಡೆಸಿದ ಪರೀಕ್ಷೆಗಳಲ್ಲಿ ತಪ್ಪು ಪ್ರಶ್ನೆಗಳಿಗೆ ಸರ್ಕಾರವು ಕೃಪಾಂಕಗಳನ್ನು ನೀಡುವ ಬದಲಾಗಿ ಪ್ರಶ್ನೆಯನ್ನೇ ಕೈಬಿಟ್ಟಿರುವುದರಿಂದ ಸಮಸ್ಯೆಯಾಗಿದೆ. ಸರ್ಕಾರ ಕೃಪಾಂಕ ನೀಡಬೇಕು ಎಂದು ಒತ್ತಾಯಿಸಿ ಪರೀಕ್ಷಾರ್ಥಿಗಳು ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಮೊರೆ ಹೋಗಿದ್ದಾರೆ. ಅ.23ರಂದು ವಿಚಾರಣೆ ನಡೆಯಲಿದೆ.

ಎಸ್‌ಎಸ್‌ಎಲ್‌ಸಿ, ಪಿಯುಸಿಯಂತಹ ತರಗತಿಗಳಲ್ಲಿ ಶೈಕ್ಷಣಿಕ ದೃಷ್ಟಿಯಿಂದ ಕೃಪಾಂಕಗಳನ್ನು ನೀಡಲಾಗುತ್ತದೆ. ಉದ್ಯೋಗ ಕಲ್ಪಿಸುತ್ತಿರುವುದರಿಂದ ಕೃಂಪಾಕ ನೀಡಲು ಸಾಧ್ಯವಿಲ್ಲ. ಇದನ್ನೇ ಕೆಎಟಿಗೂ ತಿಳಿಸಿದ್ದೇವೆ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

(ಸಾಂದರ್ಭಿಕ ಚಿತ್ರ)

click me!