
ಬೆಂಗಳೂರು: ವೀರಶೈವ ಹಾಗೂ ಲಿಂಗಾಯತ ಪಂಥವು ಪ್ರತ್ಯೇಕ ಧರ್ಮ ಅಲ್ಲ. ಅವು ಹಿಂದೂ ಧರ್ಮದ ಭಾಗವಾಗಿದ್ದು, ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನಕ್ಕೆ ಒತ್ತಾಯಿಸುವುದು ಸರಿಯಲ್ಲ ಎಂದು ಸಂಶೋಧಕ ಡಾ.ಎಂ. ಚಿದಾನಂದಮೂರ್ತಿ ಹೇಳಿದರು.
ಬುಧವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಬಸವಣ್ಣನೇ ಲಿಂಗಾಯತ ಧರ್ಮದ ಸ್ಥಾಪಕ. ವೀರಶೈವ ಪ್ರತ್ಯೇಕ ಧರ್ಮ. ಬಸವಣ್ಣನ ಅಂಕಿತ ಲಿಂಗದೇವ ಎಂದು ಹೇಳುವ ಮೂಲಕ ಮಾತೆ ಮಹಾದೇವಿಯವರು ತಮ್ಮ ಅವಿವೇಕ ಪ್ರದರ್ಶಿಸುತ್ತಿದ್ದಾರೆ. ಬಸವಣ್ಣನವರ ವಚನಗಳಲ್ಲಿ ವೀರಶೈವ ಪದ ಪ್ರಯೋಗವಿದ್ದು, ಅವರೇ ವೀರಶೈವ ಧರ್ಮ ಸಂಸ್ಥಾಪಕರು ಎನ್ನುವುದಕ್ಕೆ ಸಾಕ್ಷಿ ಒದಗಿಸಿದೆ. ಆದರೆ, ಅಖಿಲ ಭಾರತ ವೀರಶೈವ ಮಹಾಸಭಾದವರು ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಡ ತರುತ್ತಿದ್ದು, ಇದು ತಪ್ಪು ನಿರ್ಧಾರ" ಎಂದರು.
ಬಸವಣ್ಣ ಲಿಂಗಾಯಿತ ಧರ್ಮ ಸ್ಥಾಪಕ ಎನ್ನುವುದು ಅಪ್ಪಟ ಅವಿವೇಕ. ವೀರಶೈವ ಮಹಾಸಭೆಯು 1904ರಲ್ಲಿ ಧಾರವಾಡದಲ್ಲಿ ನಡೆಸಿದ ಮೊದಲ ಅಧಿವೇಶನದಲ್ಲಿ ಬಸವಣ್ಣನವರು ಈ ಮತವನ್ನು ಪ್ರಚುರಪಡಿಸಿದವರೇ ಹೊರತು ಸ್ಥಾಪಕರಲ್ಲ ಎನ್ನುವುದನ್ನು ತಿಳಿಸಲಾಗಿದೆ. 1908ರಲ್ಲಿ ಬಾಗಲಕೋಟೆಯಲ್ಲಿ ಜರುಗಿದ ಅಧಿವೇಶನದಲ್ಲೂ ಈ ಮೇಲಿನ ನಿರ್ಣಯ ಕೈಗೊಳ್ಳಲಾಗಿದೆ ಎಂದರು.
ಮಸೀದಿಗೆ ಆಹ್ವಾನಿಸಿ:
ಪೇಜಾವರ ಶ್ರೀಗಳು ಉಡುಪಿ ಮಠದಲ್ಲಿ ಮುಸ್ಲಿಮರನ್ನು ಅಹ್ವಾನಿಸಿ, ಅವರಿಗೆ ಇಫ್ತಾರ್ ಕೂಟ ವ್ಯವಸ್ಥೆ ಮಾಡಿದ್ದು ಸ್ವಾಗತಾರ್ಹ. ಹಾಗೆಯೇ ಮುಸ್ಲಿಮರು ಕೂಡಾ ಹಿಂದು ಮಠಾಧೀಶರನ್ನು ಮಸೀದಿಗಳಿಗೆ ಆಹ್ವಾನಿಸಿ, ಅಲ್ಲಿ ದೈವ ಸ್ತ್ರೋತ್ರಗಳನ್ನು ಹಾಡಲು ಅವಕಾಶ ನೀಡಬೇಕು ಎಂದರು.
ಪ್ರತ್ಯೇಕ ಧ್ವಜ ಬೇಡ
ಕರ್ನಾಟಕಕ್ಕೆ ಪ್ರತ್ಯೇಕ ಧ್ವಜ ಬೇಕು ಎಂಬುದನ್ನು ನಾನು ವಿರೋಧಿಸುತ್ತೇನೆ. ಭಾರತದಾದ್ಯಂತ ಕಾಶ್ಮೀರವನ್ನು ಹೊರತುಪಡಿಸಿ ಒಂದೇ ಸಂವಿಧಾನ, ಒಂದೇ ರಾಷ್ಟ್ರಧ್ವಜ. ಪ್ರತ್ಯೇಕತೆಗೆ ಅವಕಾಶ ನೀಡುವುದು ಬೇಡ.
- ಡಾ.ಎಂ. ಚಿದಾನಂದ ಮೂರ್ತಿ, ಸಂಶೋಧಕ
ಕನ್ನಡಪ್ರಭ ವಾರ್ತೆ
epaperkannadaprabha.com
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.